ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾದ ಬಿಜೆಪಿ ಸಂಸದ

By BK AshwinFirst Published Feb 8, 2023, 3:40 PM IST
Highlights

ಸದನದ ಒಳಗೆ ಮತ್ತು ಹೊರಗೆ ರಾಹುಲ್ ಗಾಂಧಿ ಅವರ ಆರೋಪಗಳನ್ನು ಬಿಜೆಪಿ ತಳ್ಳಿ ಹಾಕಿದೆ. ಕೇಂದ್ರ ಸರ್ಕಾರದ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಮತ್ತು ಕಾಂಗ್ರೆಸ್‌ನ ಇಡೀ ಪರಿಸರ ವ್ಯವಸ್ಥೆಯು ಡೀಲ್ ಮತ್ತು ಕಮಿಷನ್ ಎಂಬ ಅವಳಿ ಸ್ತಂಭಗಳನ್ನು ಆಧರಿಸಿದೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ನವದೆಹಲಿ (ಫೆಬ್ರವರಿ 8, 2023): ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್‌ ಅದಾನಿ ಸಂಬಂಧದ ಬಗ್ಗೆ ರಾಹುಲ್‌ ಗಾಂಧಿ ಕೆಲ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆ ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆಯ ನೋಟಿಸ್‌  ಅನ್ನು ಮಂಡಿಸುವಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್‌ಗೆ ಬುಧವಾರ ಪತ್ರ ಬರೆದಿದ್ದಾರೆ. ಮಂಗಳವಾರ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ವಿರುರ್ದದ ನಾನಾ ಆರೋಪಗಳನ್ನು ಮಾಡಿದ್ದು, ಕಾಂಗ್ರೆಸ್‌ ಸೇರಿ ವಿಪಕ್ಷಗಳ ನಾಯಕರು ಸಹ ಅನೇಕ ಆರೋಪಗಳನ್ನು ಮಾಡಿದ್ದಾರೆ. 

ಲೋಕಸಭೆಯ ಸ್ಪೀಕರ್ (Lok Sabha Speaker) ಓಂ ಬಿರ್ಲಾ (Om Birla) ಅವರಿಗೆ ಪತ್ರ ಬರೆದಿರುವ ನಿಶಿಕಾಂತ್‌ ದುಬೆ (Nishikant Dubey), ಈ ಹೇಳಿಕೆಗಳು ಸದನದ ಘನತೆಗೆ ಮತ್ತು ಲೋಕಸಭೆಯ ಸದಸ್ಯರಾಗಿರುವ ಪ್ರಧಾನಿಯವರಿಗೆ (Prime Minister) ತಪ್ಪು ದಾರಿಗೆಳೆಯುವ, ಅವಹೇಳನಕಾರಿ, ಅಸಭ್ಯ, ಅಸಂಸದೀಯ, ಘನತೆಯಿಲ್ಲದ ಮತ್ತು ದೋಷಾರೋಪಣೆ ಮಾಡುವಂತಿವೆ. ರಾಹುಲ್ ಗಾಂಧಿ (Rahul Gandhi) ಅವರು ಸದನದಲ್ಲಿ ಸಾಕ್ಷ್ಯಾಧಾರಗಳನ್ನು ನೀಡುವುದಾಗಿ ಹೇಳಿಕೆ ನೀಡಿದ್ದರೂ ಅವರ ಹೇಳಿಕೆಗಳನ್ನು ಬೆಂಬಲಿಸಲು ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಪತ್ರದಲ್ಲಿ ತಿಳಿಸಿಲ್ಲ. 

ಇದ್ನು ಓದಿ: ಅದಾನಿ ಶ್ರೀಮಂತಿಕೆ 609ರಿಂದ 2ನೇ ಸ್ಥಾನಕ್ಕೇರಿದ್ದು ಹೇಗೆ? ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಶ್ನೆ!

ಕಾಂಗ್ರೆಸ್ (Congress) ಸಂಸದರು ಯಾವುದೇ ದಾಖಲೆ ಸಾಕ್ಷ್ಯಾಧಾರಗಳ ಅನುಪಸ್ಥಿತಿಯಲ್ಲಿ ಸದನವನ್ನು ದಾರಿತಪ್ಪಿಸುವ ಹೇಳಿಕೆಯನ್ನು ನೀಡಿದ್ದಾರೆ ಎಂದೂ ನಿಶಿಕಾಂತ್ ದುಬೆ ಹೇಳಿದರು. ಈ ನಡವಳಿಕೆಯು ಸದನ ಮತ್ತು ಅದರ ಸದಸ್ಯರ ಸವಲತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಜೊತೆಗೆ ಸದನದ ತಿರಸ್ಕಾರದ ಸ್ಪಷ್ಟ ಪ್ರಕರಣವಾಗಿದೆ. ಈ ಹಿನ್ನೆಲೆ ನಿಯಮ ಉಲ್ಲಂಘನೆ ಹಾಗೂ ಸದನದ ಅವಹೇಳನಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ನಾನು ವಿನಂತಿಸುತ್ತೇನೆ ಎಂದೂ ಪತ್ರದಲ್ಲಿ ಬರೆಯಲಾಗಿದೆ.

ಹಿಂಡನ್‌ಬರ್ಗ್-ಅದಾನಿ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅದಾನಿ ಗ್ರೂಪ್‌ನ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂಬಂಧ ಕಲ್ಪಿಸಲಾಗಿದೆ ಮತ್ತು ಉದ್ಯಮಿಗಳಿಗೆ ಅನುಕೂಲವಾಗುವಂತೆ ಕೆಲವು ಕ್ಷೇತ್ರಗಳಲ್ಲಿ ನಿಯಮಗಳನ್ನು ಬದಲಾಯಿಸಲಾಗಿದೆ ಎಂದು ಮಂಗಳವಾರ ಆರೋಪಿಸಿದ್ದರು. 

ಮುಳುಗಿಯೇ ಬಿಡುತ್ತಾ ಅದಾನಿ ಸಾಮ್ರಾಜ್ಯ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್?

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಗೌತಮ್ ಅದಾನಿ ಅವರೊಂದಿಗಿನ ಸಂಬಂಧವು ಹಲವು ವರ್ಷಗಳ ಹಿಂದೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭವಾಯಿತು ಮತ್ತು ನಿಜವಾದ ಮ್ಯಾಜಿಕ್ 2014 ರ ನಂತರ ಆರಂಭವಾಯಿತು ಹಾಗೂ ಉದ್ಯಮಿ ಗೌತಮ್ ಅದಾನಿ ಶ್ರೀಮಂತರ ಪಟ್ಟಿಯಲ್ಲಿ ಜಾಗತಿಕವಾಗಿ 609 ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದರು ಎಂದೂ ರಾಹುಲ್‌ ಗಾಂಧಿ ಹೇಳಿದರು.

ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅನೇಕ ವರ್ಷಗಳ ಹಿಂದೆ ಸಂಬಂಧಗಳು ಪ್ರಾರಂಭವಾದವು. ಒಬ್ಬ ವ್ಯಕ್ತಿ ಪ್ರಧಾನಿ ಮೋದಿಯ ಭುಜಕ್ಕೆ ಭುಜ ಕೊಟ್ಟರು, ಅವರು ಪ್ರಧಾನಿಗೆ ನಿಷ್ಠರಾಗಿದ್ದರು ಮತ್ತು ಪುನರುತ್ಥಾನ ಗುಜರಾತ್ ಕಲ್ಪನೆಯನ್ನು ನಿರ್ಮಿಸಲು ನರೇಂದ್ರ ಮೋದಿಗೆ ಸಹಾಯ ಮಾಡಿದರು. 2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ತಲುಪಿದಾಗ ನಿಜವಾದ ಮ್ಯಾಜಿಕ್ ಪ್ರಾರಂಭವಾಯಿತು ಎಂದು ಲೋಕಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಹೇಳಿದರು.

ಇದನ್ನೂ ಓದಿ: ಸಾಲ ಮುಂಗಡ ಪಾವತಿ ಘೋಷಣೆ: ಶೇ. 25 ರವರೆಗೆ ಜಿಗಿದ ಅದಾನಿ ಎಂಟರ್‌ಪ್ರೈಸಸ್ ಷೇರು

ಸದನದ ಒಳಗೆ ಮತ್ತು ಹೊರಗೆ ರಾಹುಲ್ ಗಾಂಧಿ ಅವರ ಆರೋಪಗಳನ್ನು ಬಿಜೆಪಿ ತಳ್ಳಿ ಹಾಕಿದೆ. ಕೇಂದ್ರ ಸರ್ಕಾರದ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಮತ್ತು ಕಾಂಗ್ರೆಸ್‌ನ ಇಡೀ ಪರಿಸರ ವ್ಯವಸ್ಥೆಯು ಡೀಲ್ ಮತ್ತು ಕಮಿಷನ್ ಎಂಬ ಅವಳಿ ಸ್ತಂಭಗಳನ್ನು ಆಧರಿಸಿದೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

click me!