ಇಬ್ಬರು ಬಿಜೆಪಿ ಸಂಸದರನ್ನು ರಾಹುಲ್ ಗಾಂಧಿ ತಳ್ಳಾಡಿದ್ದಾರೆ ಅನ್ನೋ ಆರೋಪ ಗಂಭೀರವಾಗಿದೆ. ಸಂಸದರು ಆಸ್ಪತ್ರೆ ದಾಖಲಾಗಿದ್ದಾರೆ. ಇತ್ತ ಸಿಟಿ ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಸಿಟಿ ರವಿ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಎರಡೂ ಪ್ರಜಾಪ್ರಭುತ್ವ ದೇಗುಲದಲ್ಲೇ ನಡೆದಿದೆ.
ನವದೆಹಲಿ(ಡಿ.19) ಪ್ರಜಾಪ್ರಭುತ್ವ ದೇಗುಲದಲ್ಲಿ ಮಾರಾಮಾರಿ ನಡೆದು ಹೋಗಿದೆ. ನೂಕಾಟ ತಳ್ಳಾಟ ಒಂದೆಡೆಯಾದರೆ, ಒಳಗೆ ನುಗ್ಗಿ ಹಲ್ಲೆ ಮಾಡಿದ ಘಟನೆಗಳು ಭಾರತವೇ ತಲೆ ತಗ್ಗಿಸುವಂತೆ ಮಾಡಿದೆ. ಆರಿಸಿ ಹೋದ ಪ್ರತಿನಿಧಿಗಳು ಕಿತ್ತಾಟ ವಾಕರಿಕೆ ತರಿಸುತ್ತಿದೆ. ಪ್ರಸಕ್ತ ಸಮಸ್ಸೆಗಳು, ಜನರ ಬೇಡಿಕೆ, ಅಭಿವೃದ್ಧಿಗಳ ಕುರಿತು ಬೆಳಕು ಚೆಲ್ಲಬೇಕಾದ ಸದನಗಳು ಸಿದ್ದಾಂತ, ಒಣ ಪ್ರತಿಷ್ಠೆಗೆ ಬಲಿಯಾಗುತ್ತಿದೆ. ಇದರ ನಡುವೆ ಇಂದು ಒಂದೇ ದಿನ ನಡೆದ ಎರಡು ಘಟನೆಗಳು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ. ಕೇಂದ್ರದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಜೆಪಿ ಸಂಸದರನ್ನು ತಳ್ಳಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ರಾಹುಲ್ ಗಾಂಧಿ ತಳ್ಳಾಟದಿಂದ ಬಿಜೆಪಿ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಹಾಗೂ ಮುಕೇಶ್ ರಜಪೂತ್ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಇತ್ತ ಬಿಜೆಪಿ ನಾಯಕ ಸಿಟಿ ರವಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಸುವರ್ಣ ಸೌಧದೊಳಗೆ ನುಗ್ಗಿದ ಬೆಂಬಲಿಗರು ಸಿಟಿ ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಎರಡೂ ಘಟನೆಗಳು ಒಂದೇ ದಿನ ನಡೆದು ಹೋಗಿದೆ.
ಅಮಿತ್ ಶಾ ರಾಜ್ಯಸಭೆಯಲ್ಲಿ ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಇಂದು ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆ ಇಂದು ವಿಕೋಪಕ್ಕೆ ತಿರುಗಿದೆ. ಬಿಜೆಪಿ ನಾಯಕರು ಸಂಸತ್ ಪ್ರವೇಶಿಸಲು ರಾಹುಲ್ ಗಾಂಧಿಗೆ ಅವಕಾಶ ನೀಡಿಲ್ಲ ಅನ್ನೋ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಇತ್ತ ರಾಹುಲ್ ಗಾಂಧಿ ಬಿಜಿಪೆ ಸಂಸದರನ್ನು ಉದ್ದೇಶಪೂರ್ವಕವಾಗಿ ತಳ್ಳಾಡಿ ಸಾಗಿದ್ದಾರೆ ಅನ್ನೋದು ಬಿಜೆಪಿ ಆರೋಪ. ತಳ್ಳಾಟದಲ್ಲಿ ಒಡಿಶಾ ಬಾಲಾಸೋರ್ ಸಂಸದ ಪ್ರತಾಪ್ ಚಂದ್ರ ಸಾರಂಗಿ ತಲೆಗೆ ಗಾಯವಾಗಿದೆ. ಇತ್ತ ಉತ್ತರ ಪ್ರದೇಶದ ಫರೂಖಾಬಾದ್‌ನ ಸಂಸದ ಮುಕೇಶ್ ರಜಪೂತ್ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದರೆ. ಈ ಘಟನೆ ಭಾರಿ ಕೋಲಾಹಲ ಸಷ್ಟಿಸಿದೆ.
undefined
ಸುವರ್ಣ ಸೌಧದೊಳಗೆ ನುಗ್ಗಿ ಸಿ.ಟಿ. ರವಿಗೆ ಕಾಲಿಂದ ಒದ್ದು, ಹಲ್ಲೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು!
ಇತ್ತ ರಾಜ್ಯದಲ್ಲಿ ಸಿಟಿ ರವಿ ಪ್ರಕರಣ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ವಿಧಾನಪರಿಷತ್ತಿನಲ್ಲಿ ಸಿಟಿ ರವಿ ತಮ್ಮ ಭಾಷಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೇ ಕಾರಣಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿದರು ಸುವರ್ಣ ಸೌಧಕ್ಕೆ ನುಗ್ಗಿ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾರೆ. ಇದರ ನಡುವೆ ಒಂದಿಬ್ಬರು ಸಿಟಿ ರವಿ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.
ಇತ್ತ ಲಕ್ಷ್ಮಿ ಹೆಬ್ಬಾಳ್ಕರ್ ಹೀರೆಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಸುವರ್ಣ ಸೌಧಕ್ಕೆ ಆಗಮಿಸಿ ಸಿಟಿ ರವಿಯನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಇದೀಗ ಸಿಟಿ ರವಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ತೀವ್ರಗೊಳಿಸಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಗೂಂಡಾ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಿದೆ.
ದೆಹಲಿ ಸಂಸತ್ತಿನ ಪ್ರವೇಶ ದ್ವಾರದ ಬಳಿ ರಾಹುಲ್ ತಳ್ಳಾಟ ಆರೋಪ ಘಟನೆ ನಡೆದಿದೆ. ಇತ್ತ ರಾಜ್ಯದ ಸುವರ್ಣ ಸೌಧದ ಒಳಗೆ ಹಲ್ಲೆ ಘಟನೆ ನಡೆದಿದೆ. ಎರಡೂ ಕೂಡ ಪ್ರಜಾಪ್ರಭುತ್ವ ದೇಗುಲದ ಒಳಗೆ ನಡೆದ ಘಡನೆಗಳು ನಾಗರೀಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಎರಡೂ ಘಟನೆಗಳ ವಿರುದ್ಧ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಜೊತೆ ಕಾಂಗ್ರೆಸ್ ಹಾಗೂ ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದೆ.
ಬಿಜೆಪಿ ಸಂಸದ ಪ್ರತಾಪ್ ಸಾರಂಗಿಯ ತಳ್ಳಿದ ರಾಹುಲ್ ಗಾಂಧಿ, ಚಿಕಿತ್ಸೆ ನೀಡಿದ ಡಾ. ಸಿಎನ್ ಮಂಜುನಾಥ್!