ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ವಿರುದ್ದ ಅತ್ಯಾಚಾರ ಆರೋಪ: ಸುಪ್ರೀಂಕೋರ್ಟ್‌ ಮೊರೆ ಹೋದ ನಾಯಕ

By BK AshwinFirst Published Aug 18, 2022, 4:17 PM IST
Highlights

ಬಿಜೆಪಿ ಹಿರಿಯ ನಾಯಕ ಶಹನವಾಜ್‌ ಹುಸೇನ್‌ ವಿರುದ್ಧ ಆತ್ಯಾಚಾರ ಆರೋಪ ಎದುರಾಗಿದೆ. ಈ ಸಂಬಂಧ ದೆಹಲಿ ಹೈಕೋರ್ಟ್‌ ತಕ್ಷಣವೇ ಕೇಸ್‌ ದಾಖಲಿಸಬೇಕೆಂದು ಸೂಚನೆ ನೀಡಿತ್ತು.

ಬಿಜೆಪಿ ಹಿರಿಯ ಮುಖಂಡ ಶಹನವಾಜ್ ಹುಸೇನ್ ವಿರುದ್ದ ಅತ್ಯಾಚಾರ ಆರೋಪ ಪ್ರಕರಣ ಕೇಳಿ ಬಂದಿದ್ದು, ಈ ಸಂಬಂಧ ದೆಹಲಿ ಹೈಕೋರ್ಟ್‌ ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸುವಂತೆ ಆದೇಶ ನೀಡಿದೆ. ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಶಹನವಾಜ್ ಹುಸೇನ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಶಹನವಾಜ್‌ ಹುಸೇನ್‌ ವಿರುದ್ಧ ತಕ್ಷಣವೇ ಎಫ್‌ಐಆರ್‌ ದಾಖಲಿಸಬೇಕು ಎಂದು ದೆಹಲಿ ಹೈಕೋರ್ಟ್‌ ಆದೇಶ ನೀಡಿದ ಬಳಿಕ ಬಿಜೆಪಿ ಹಿರಿಯ ಮುಖಂಡ ಈಗ ದೇಶದ ಅತ್ಯುನ್ನತ ಕೋರ್ಟ್‌ನ ಮೊರೆ ಹೋಗಿದ್ದಾರೆ.

ದೆಹಲಿ ಹೈಕೋರ್ಟ್‌ ಬುಧವಾರ ನೀಡಿರುವ ಆದೇಶಕ್ಕೆ ತಡೆ ನೀಡಬೇಕೆಂದು ಶಹನವಾಜ್‌ ಹುಸೇನ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ತಾನು ಸಾರ್ವಜನಿಕ ವ್ಯಕ್ತಿ ಎಂಬುದನ್ನು ಹೈಕೋರ್ಟ್‌ ಪ್ರಶಂಸಿಸಲು ವಿಫಲವಾಗಿದೆ ಹಾಗೂ ತನ್ನ ವಿರುದ್ಧ ದುರುದ್ದೇಶಪೂರಿತ ಉದ್ದೇಶದಿಂದ ಸುಳ್ಳು ಕೇಸ್‌ ದಾಖಲಿಸಲಾಗಿದೆ ಎಂದೂ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಈ ಸುಳ್ಳು ಆರೋಪಗಳ ಆಧಾರದ ಮೇಲೆ ದೆಹಲಿ ಪೊಲೀಸ್‌ ಕೇಸ್‌ ದಾಖಲಿಸಿದರೆ ತನ್ನ ಕಳಂಕವಿಲ್ಲದ ವೃತ್ತಿ ಮತ್ತು ಖ್ಯಾತಿಗೆ ಧಕ್ಕೆ ಬರಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.  

Bilkis Bano Case: 11 ಅತ್ಯಾಚಾರಿಗಳಿಗೆ ಬಿಡುಗಡೆ ಭಾಗ್ಯ, ಗುಜರಾತ್‌ ಸರ್ಕಾರದ ವಿರುದ್ಧ ಆಕ್ರೋಶ

ರಾಜಕಾರಣಿಯ ಸಹೋದರನೊಂದಿಗೆ ದೂರುದಾರರು ಹೊಂದಿದ್ದ ವೈವಾಹಿಕ ವಿವಾದದ ಪರಿಣಾಮವಾಗಿ ಈ ಆರೋಪಗಳು ಕೇಳಿಬಂದಿವೆ ಎಂದೂ ಶಹನವಾಜ್‌ ಹುಸೇನ್ ಹೇಳಿಕೊಂಡಿದ್ದಾರೆ. ಅಲ್ಲದೆ, ದೂರುದಾರರು ಈ ಹಿಂದೆ ತನ್ನನ್ನು ಬೆದರಿಸುವ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿ, ವಿಫಲರಾಗಿದ್ದರು ಎಂದೂ ಬಿಜೆಪಿ ಹಿರಿಯ ಮುಖಂಡ ಸಮರ್ಥಿಸಿಕೊಂಡಿದ್ದಾರೆ. 

ಏಪ್ರಿಲ್‌ 2018 ರಲ್ಲಿ ದೆಹಲಿಯ ಫಾರ್ಮ್‌ಹೌಸ್‌ನಲ್ಲಿ ತನ್ನ ಮೇಲೆ ಹುಸೇನ್‌ ಮಾದಕ ದ್ರವ್ಯ ನೀಡಿ ಅತ್ಯಾಚಾರವೆಸಗಿದ್ದಾರೆ ಎಂದು ದೆಹಲಿ ಮೂಲದ ಸಂತ್ರಸ್ಥ ಮಹಿಳೆ ದೂರು ನೀಡಿದ್ದರು. ನಂತರ, ಜುಲೈ 2018ರಲ್ಲಿ ಪೊಲೀಸರು ಅತ್ಯಾಚಾರ ಆರೋಪದ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಪೊಲೀಸರು ಹೇಳಿದರೂ, ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಕೇಸ್‌ ದಾಖಲಿಸಲು ಸೂಚನೆ ನೀಡಿದ್ದರು. ನಂತರ, ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶದ ವಿರುದ್ದ ಶಹನವಾಜ್‌ ಹುಸೇನ್ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಅಲ್ಲಿ ಸಹ ಬಿಜೆಪಿ ನಾಯಕನಿಗೆ ಹಿನ್ನೆಡೆಯಾದ ಕಾರಣ ಅವರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಆದರೆ, ದೆಹಲಿ ಹೈಕೋರ್ಟ್‌ ಈ ಪ್ರಕರಣದ ಬಗ್ಗೆ ತಕ್ಷಣವೇ ಎಫ್‌ಐಆರ್‌ ದಾಖಲಿಸಿ ಕೇಸ್‌ ಹಾಕಬೇಕೆಂದು ದೆಹಲಿ ಪೊಲೀಸರಿಗೆ ನಿರ್ದೇಶಿಸಿದ್ದರು. ಅಲ್ಲದೆ, ಈ ಸಂಬಂಧ 3 ತಿಂಗಳೊಳಗೆ ತನಿಖೆಯನ್ನು ನಡೆಸಿ ಅಧೀನ ನ್ಯಾಯಾಲಯಕ್ಕೆ ವರದಿ ನೀಡಿ ಎಂದು ಹೈಕೋರ್ಟ್‌ ಪೊಲೀಸರಿಗೆ ಸೂಚಿಸಿದೆ. ಅಲ್ಲದೆ, ಜೂನ್‌ 2018ರಲ್ಲೇ ಆತ್ಯಾಚಾರ ಆರೋಪದ ದೂರು ನೀಡಿದ್ದರೂ ಇದುವರೆಗೂ ಏಕೆ ಕೇಸ್‌ ದಾಖಲಿಸಿಲ್ಲ ಎಂಬ ಬಗ್ಗೆ ಪೊಲೀಸರು ವಿವರ ನೀಡಬೇಕೆಂದೂ ದೆಹಲಿ ಹೈಕೋರ್ಟ್‌ ತರಾಟೆಗೆ ತೆಗದುಕೊಂಡಿದೆ. 

ಮದುವೆ ಆಸೆ ತೋರಿಸಿ ರೇಪ್‌: ಕೋರ್ಟ್‌ಲ್ಲಿ ವಿಚಿತ್ರ ಕೇಸ್‌ ರದ್ದು

ದೆಹಲಿ ಹೈಕೋರ್ಟ್‌ನಲ್ಲೂ ಬಿಜೆಪಿ ಹಿರಿಯ ಮುಖಂಡ ಶಹನವಾಜ್‌ ಹುಸೇನ್‌ಗೆ ಹಿನ್ನೆಡೆಯಾಗಿದ್ದು, ಈ ಹಿನ್ನೆಲೆ ಅವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಈ ಮಧ್ಯೆ, ಶಹನವಾಜ್‌ ಹುಸೇನ್ ಅವರ ಪರ ವಕೀಲರು ತುರ್ತು ವಿಚಾರಣೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಅವರ ಮುಂದೆ ಮನವಿಯನ್ನು ಪ್ರಸ್ತಾಪಿಸಿದರು. ಆದರೆ ಈ ಮನವಿಯನ್ನು ಈಗಾಗಲೇ ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ಬಿಜೆಪಿ ಹಿರಿಯ ನಾಯಕನ ಪರ ಮೇಲ್ಮನವಿ ಪ್ರಕರಣವನ್ನು ವಾದಿಸುವ ಸಾಧ್ಯತೆಯಿದೆ ಎಂದೂ ಹೇಳಲಾಗಿದೆ.

click me!