ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ 370ನೇ ವಿಧಿಯನ್ನು ರದ್ದು ಪಡಿಸಲಾಗಿದೆ. ಈ ಹಿನ್ನೆಲೆ, ಈಗ ಸ್ಥಳೀಯರಲ್ಲದವರು ಸಹ ಇಲ್ಲಿ ಮತ ಹಾಕಲು ನೋಂದಣಿ ಮಾಡಿಸಸಬಹುದು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಅಲ್ಲಿ ಯಾವುದೇ ಚುನಾವಣೆ ನಡೆದಿಲ್ಲ. ಹಾಗೂ, ಯಾವುದೇ ರಾಜಕೀಯ ಪಕ್ಷಗಳ ಸರ್ಕಾರ ಅಧಿಕಾರದಲ್ಲಿಲ್ಲ. ಕಳೆದ 4 ವರ್ಷಕ್ಕೂ ಹೆಚ್ಚು ಸಮಯದಿಂದ ಅಲ್ಲಿ ಯಾವುದೇ ಚುನಾವಣೆಯೂ ನಡೆದಿಲ್ಲ. ಆದರೆ, ಮುಂದಿನ ವರ್ಷ ಎಲೆಕ್ಷನ್ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಸ್ಥಳೀಯರಲ್ಲದವರು ಸಹ ಇಲ್ಲಿ ಮತದಾನ ಮಾಡಲು ನೋಂದಣಿ ಮಾಡಲು ಅವಕಾಶ ಮಾಡಲಾಗಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಹಾಗೂ ಓಮರ್ ಅಬ್ದುಲ್ಲಾ ವಿರೋಧಿಸಿದ್ದು, ಇದು ಚುನಾವಣೆಗಳ ಮೇಲೆ ಪ್ರಭಾವ ಬೀರುವ ಅಪಾಯಕಾರಿ ಪ್ರಯತ್ನ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 2019 ರಲ್ಲಿ 370 ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಾಗಲಿದ್ದು, ಕಾಶ್ಮೀರೇತರರಿಗೆ ಮತ ಚಲಾಯಿಸಲು ಮತ್ತು ಭೂಮಿಯನ್ನು ಹೊಂದಲು ಸಂವಿಧಾನವನ್ನು ಬದಲಿಸಿದ ನಂತರ ಮೊದಲ ಬಾರಿಗೆ ಸ್ಥಳೀಯರಲ್ಲದವರು ಸಹ ಮತದಾರರಾಗಿ ನೋಂದಾಯಿಸಲು ಅನುವು ಮಾಡಿಕೊಡುತ್ತದೆ ಎಂದು ವರದಿಯಾಗಿದೆ.
ಈ ಸಂಬಂಧ ವರದಿಗಾರರಿಗೆ ಮಾಹಿತಿ ನೀಡಿದ ಜಮ್ಮು ಹಾಗೂ ಕಾಶ್ಮೀರ ಮುಖ್ಯ ಚುನಾವಣಾ ಅಧಿಕಾರಿ ಹಿರ್ದೇಶ್ ಕುಮಾರ್, ಚುನಾವಣೆಗೆ ಮುನ್ನ 20 ಲಕ್ಷಕ್ಕೂ ಅಧಿಕ ಹೊಸ ಮತದಾರರು ಈ ಪ್ರದೇಶದಲ್ಲಿ ನೋಂದಣಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದರಿಂದ ಮತದಾರರ ಸಂಖ್ಯೆಯಲ್ಲಿ ಶೇಕಡ 33 ಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ, ಈ ಕೇಂದ್ರಾಡಳಿತ ಪ್ರದೇಶದಲ್ಲಿ 76 ಲಕ್ಷ ಮತದಾರರಿದ್ದಾರೆ.
370ನೇ ವಿಧಿಯನ್ನು ತೆಗೆದುಹಾಕಿದ ಬಳಿಕ, ಈ ಮೊದಲು ಮತ ಹಾಕಲು ಸಾಧ್ಯವಿಲ್ಲದವರು ಸಹ ಈಗ ಮತದಾರರಾಗಿ ನೋಂದಣಿ ಸಲ್ಲಿಸಬಹುದು. ಈ ಹಿನ್ನೆಲೆ ಕಾಶ್ಮೀರಿಯಲ್ಲದವರು ಸೇರಿ ಮತದಾರರ ಅಂತಿಮ ಪಟ್ಟಿಯಲ್ಲಿ 20 - 25 ಲಕ್ಷ ನೂತನ ಮತದಾರರು ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಹಿರ್ದೇಶ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ದೇಶದ ಇತರೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಂತೆ ಜಮ್ಮು ಹಾಗೂ ಕಾಶ್ಮೀರದಲ್ಲಿ ವಾಸಿಸುತ್ತಿರುವ ಹಾಗೂ ಕೆಲಸ ಮಾಡುತ್ತಿರುವ ಯಾರಾದರೂ ಅಲ್ಲಿ ಇನ್ಮುಂದೆ ಮತ ಹಾಕಬಹುದಾಗಿದೆ.
ಆದರೆ, ಚುನಾವಣಾ ಆಯೋಗದ ಈ ನಡೆಗೆ ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಈ ಪ್ರದೇಶದಲ್ಲಿ ಬಿಜೆಪಿಗೆ ಸಿಗುವ ಬೆಂಬಲದ ಬಗ್ಗೆ "ಅಭದ್ರತೆ" ಯಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಹೇಳಿದ್ದಾರೆ. "ಜಮ್ಮು ಹಾಗು ಕಾಶ್ಮೀರದ ನಿಜವಾದ ಮತದಾರರ ಬೆಂಬಲದ ಬಗ್ಗೆ ಬಿಜೆಪಿಯು ಎಷ್ಟು ಅಸುರಕ್ಷಿತವಾಗಿದೆ ಎಂದರೆ ಅದು ಸ್ಥಾನಗಳನ್ನು ಗೆಲ್ಲಲು ತಾತ್ಕಾಲಿಕ ಮತದಾರರನ್ನು ಆಮದು ಮಾಡಿಕೊಳ್ಳುವ ಅಗತ್ಯವಿದೆಯೇ..? ಜಮ್ಮು ಹಾಗೂ ಕಾಶ್ಮೀರದ ಜನರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಿದಾಗ ಇವುಗಳಲ್ಲಿ ಯಾವುದೂ ಬಿಜೆಪಿಗೆ ಸಹಾಯ ಮಾಡುವುದಿಲ್ಲ" ಎಂದೂ ಮಾಜಿ ಮುಖ್ಯಮಂತ್ರಿ ಟೀಕೆ ಮಾಡಿದ್ದಾರೆ.
ಚುನಾವಣೆ ಸ್ಪರ್ಧಾಳುಗಳಿಗೆ ಕೇಂದ್ರದಿಂದ ಹೊಸ ಆಫರ್
ಇನ್ನೊಂದೆಡೆ, ಮತ್ತೊಬ್ಬರು ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಬಿಜೆಪಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವತ್ತ ಗಮನ ಹರಿಸಿದೆ ಎಂದು ಆರೋಪಿಸಿದ್ದಾರೆ. "ಸ್ಥಳೀಯರಲ್ಲದವರಿಗೆ ಮತ ಚಲಾಯಿಸಲು ಅವಕಾಶ ನೀಡುವುದು ಅಂದರೆ ನಿಸ್ಸಂಶಯವಾಗಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವುದು. ಸ್ಥಳೀಯರನ್ನು ಬಲಹೀನಗೊಳಿಸಲು ಕಬ್ಬಿಣದ ಮುಷ್ಟಿಯೊಂದಿಗೆ ಜಮ್ಮು ಹಾಗೂ ಕಾಶ್ಮೀರದ ಆಡಳಿತವನ್ನು ಮುಂದುವರಿಸುವುದು ನಿಜವಾದ ಗುರಿಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ. ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯ ನೀತಿಗಳನ್ನು ಟೀಕಿಸುವಾಗ ನಾಜಿ ಜರ್ಮನಿ ಮತ್ತು ಪ್ಯಾಲೆಸ್ತೀನ್ ಅನ್ನು ಉಲ್ಲೇಖಿಸಿದರು. ಅಲ್ಲದೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಹಿಂಬಾಗಿಲಿನ ಮೂಲಕ 25 ಲಕ್ಷ ಬಿಜೆಪಿ ಮತದಾರರನ್ನು ತರುವ ಪ್ರಯತ್ನ ಮಾಡುತ್ತಿದೆ ಎಂದೂ ಕಿಡಿ ಕಾರಿದ್ದಾರೆ.