
ನವದೆಹಲಿ(ಏ.26): 2024ರ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ, ಕಳೆದ 2 ಚುನಾವಣೆಯಲ್ಲಿ ತಾನು ಕಳಪೆ ಸಾಧನೆ ಮಾಡಿದ್ದ 150 ಲೋಸಕಭಾ ಕ್ಷೇತ್ರಗಳು ಮತ್ತು 73000 ಬೂತ್‌ಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದೆ. ಅಲ್ಲದೆ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಪಕ್ಷದ ಉಪಾಧ್ಯಕ್ಷ ಬೈಜಯಂತ್ ಪಾಂಡ ನೇತೃತ್ವದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ದಿಲೀಪ್ ಘೋಷ್, ಲಾಲ್ ಸಿಂಗ್ ಆರ‍್ಯ ಅವರನ್ನೊಳಗೊಂಡ ಸಮಿತಿ ರಚಿಸಿದೆ.
ವಿಶೇಷವೆಂದರೆ, ಪಕ್ಷ ದುರ್ಬಲವಾಗಿದೆ ಎಂದು ಗುರುತಿಸಲಾದ 73000 ಬೂತ್‌ಗಳ ಪೈಕಿ ಬಹುತೇಕ ದಕ್ಷಿಣ ಭಾರತ ಮತ್ತು ಈಶಾನ್ಯದ ರಾಜ್ಯಗಳದ್ದೇ ಆಗಿದೆ. ಹೀಗಾಗಿ ಇಲ್ಲಿ ಪಕ್ಷವನ್ನು ಬಲಗೊಳಿಸಲು ವಿಶೇಷ ನೀಲನಕ್ಷೆ ರೂಪಿಸಲಾಗಿದೆ.
ಈ ಸಮಿತಿ ಈಗಾಗಲೇ 73000 ಬೂತ್‌ಗಳು ಮತ್ತು ಕಳೆದ ಬಾರಿ ಕಳಪೆ ಸಾಧನೆ ಮಾಡಿದ್ದ 150 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವ ಕುರಿತು ನೀಲನಕ್ಷೆ ಸಿದ್ಧಪಡಿಸಿದೆ. ಅದನ್ನು ಮುಂದಿನ ಸೋಮವಾರ ನಡೆಯುವ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಈ ಬಗ್ಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಂಡು, ಅದನ್ನು ಸಂಬಂಧಿಸಿದ ರಾಜ್ಯಗಳಿಗೆ ಅಗತ್ಯ ಕ್ರಮಕ್ಕೆ ರವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
2024ರ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೊಸ ಸಮಿತಿ
ಸತತ 2 ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು, ಹಲವು ರಾಜ್ಯಗಳಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಂಡ ಕಾಂಗ್ರೆಸ್, ಇದೀಗ 2024ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಎದುರಾಗಬಹುದಾದ ರಾಜಕೀಯ ಸವಾಲುಗಳನ್ನು ಮೆಟ್ಟಿನಿಲ್ಲಲು ‘ಉನ್ನತಾಧಿಕಾರವುಳ್ಳ ಕಾರ್ಯಪಡೆ- 2024’ ರಚಿಸಿದೆ. ಜೊತೆಗೆ ದೇಶದ ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲು ಮೇ 13ರಿಂದ ರಾಜಸ್ಥಾನದ ಉದಯ್‌ಪುರದಲ್ಲಿ 3 ದಿನಗಳ ಚಿಂತನ ಶಿಬಿರ ಆಯೋಜನೆಗೂ ನಿರ್ಧರಿಸಿದೆ. ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಆಹ್ವಾನಿತ ಸದಸ್ಯರು ಭಾಗಿಯಾಗಲಿದ್ದಾರೆ.
ವಿಶೇಷವೆಂದರೆ, 2024ರ ಚುನಾವಣೆ ಗೆಲ್ಲುವ ರಣತಂತ್ರಗಳ ಕುರಿತು, ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಇತ್ತೀಚೆಗಷ್ಟೇ ಸೋನಿಯಾ ಗಾಂಧಿ ಒಳಗೊಂಡ ಪಕ್ಷದ ಹಿರಿಯ ನಾಯಕರ ತಂಡಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದರು. ಮತ್ತೊಂದೆಡೆ ಇಂಥದ್ದೇ ವಿಷಯದ ಕುರಿತು ವರದಿ ಸಲ್ಲಿಸಲು ಸ್ವತಃ ಸೋನಿಯಾ ಕೂಡಾ 8 ಜನರ ಸಮಿತಿ ರಚಿಸಿದ್ದು, ಅದು ಏ.21ರಂದು ತನ್ನ ವರದಿ ಸಲ್ಲಿಸಿತ್ತು.
ಈ ವರದಿಗಳ ಬಗ್ಗೆ ಚರ್ಚಿಸಲು ಸೋನಿಯಾ ನೇತೃತ್ವದಲ್ಲಿ ಮಂಗಳವಾರ ಪಕ್ಷದ ಹಿರಿಯ ನಾಯಕರು ಇಲ್ಲಿ ಸಭೆ ಸೇರಿದ್ದರು. ಅದರಲ್ಲಿ ಎರಡೂ ವರದಿಗಳ ಬಗ್ಗೆ ಚರ್ಚಿಸಿದ ಬಳಿಕ, ‘ಉನ್ನತಾಧಿಕಾರವುಳ್ಳ ಕಾರ್ಯಪಡೆ- 2024’ ರಚನೆ ಮತ್ತು ಉದಯ್‌ಪುರದಲ್ಲಿ ಚಿಂತನ ಶಿಬಿರ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆ ಬಳಿಕ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಸಭೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲಾ, ಮುಕುಲ್ ವಾಸ್ನಿಕ್, ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್, ಪಿ.ಚಿದಂಬರಂ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ