
ನವದೆಹಲಿ (ನ.25): ‘ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವಲ್ಲಿ ಬಿಜೆಪಿ ಬದ್ಧವಾಗಿದೆ. ಎಲ್ಲರೊಂದಿಗೆ ಸಮಾಲೋಚನೆ ಹಾಗೂ ಪ್ರಜಾಸತ್ತಾತ್ಮಕ ಚರ್ಚೆ ನಡೆಸಿದ ಬಳಿಕ ಸಂಹಿತೆ ಜಾರಿಗೊಳಿಸುವ ಉದ್ದೇಶವಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ಟೈಮ್ಸ್‌ನೌ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಜನಸಂಘದ ದಿನಗಳಿಂದಲೂ ಭಾರತೀಯರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ನಮ್ಮ ಉದ್ದೇಶವಾಗಿದೆ. ಇದು ಬಿಜೆಪಿಯ ಭರವಸೆ ಮಾತ್ರವಲ್ಲ, ಸಂವಿಧಾನ ರಚನಾ ಸಮಿತಿ ಕೂಡಾ ಸಂಸತ್ತು ಹಾಗೂ ಎಲ್ಲ ರಾಜ್ಯಗಳಿಗೂ ಅನುಕೂಲಕರವಾದ ಸಮಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಲಹೆ ನೀಡಿತ್ತು’ ಎಂದು ನುಡಿದರು.
‘ಭಾರತವು ಜಾತ್ಯತೀತ ರಾಷ್ಟ್ರ ಎನಿಸಿಕೊಂಡಾಗ ಇಲ್ಲಿ ಧರ್ಮಗಳ ಆಧಾರದ ಮೇಲೆ ಕಾನೂನುಗಳಿರಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ ಅವರು ‘ಎಲ್ಲ ನಾಗರಿಕರಿಗೂ ಏಕರೂಪವಾಗಿ ಸಂಸತ್ತು ಹಾಗೂ ರಾಜ್ಯ ಶಾಸನಸಭೆಗಳಿಂದ ಅಂಗೀಕರಿಸಲ್ಪಟ್ಟಒಂದೇ ಕಾನೂನು ಇರಬೇಕು’ ಎಂದು ಅಭಿಪ್ರಾಯಪಟ್ಟರು.
‘ದೀರ್ಘಕಾಲದವರೆಗೂ ಸಂವಿಧಾನ ರಚನಾ ಸಮಿತಿಯ ಈ ಬದ್ಧತೆಯನ್ನು ನಿರ್ಲಕ್ಷಿಸಲಾಗಿತ್ತು. ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ಪಕ್ಷಗಳು ಏಕರೂಪ ನಾಗರಿಕ ಸಂಹಿತೆಯ ಪರವಾಗಿಲ್ಲ’ ಎಂದರು.
Uniform Civil Code: ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆಗೆ ಒತ್ತಡ!
‘ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮುಕ್ತ ಹಾಗೂ ಅರೋಗ್ಯಯುತ ಚರ್ಚೆಯ ಅಗತ್ಯವಿದೆ. ಹೀಗಾಗಿ ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಗುಜರಾತ್‌ನಲ್ಲಿ ಈಗಾಗಲೇ ನಿವೃತ್ತ ಸುಪ್ರೀಂ ಕೋರ್ಚ್ ಹಾಗೂ ನಿವೃತ್ತ ಹೈಕೋರ್ಚ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವಿವಿಧ ಧರ್ಮಗಳಿಗೆ ಸೇರಿದವರು ಏಕರೂಪ ನಾಗರಿಕ ಸಂಹಿತೆಯ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಸಮಿತಿಯ ಮುಂದಿಡುತ್ತಿದ್ದಾರೆ. ಈ ಪ್ರಕ್ರಿಯೆಯ ಬಳಿಕ ಸಮಿತಿ ನೀಡಿದ ಶಿಫಾರಸಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ. ಈ ಎಲ್ಲ ಪ್ರಜಾಸತ್ತಾತ್ಮಕ ಚರ್ಚೆಗಳ ಬಳಿಕ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವಲ್ಲಿ ಬಿಜೆಪಿ ಬದ್ಧವಾಗಿದೆ’ ಎಂದು ಶಾ ಆಶ್ವಾಸನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ