
ನವದೆಹಲಿ: ‘ಪ್ರಕರಣವೊಂದರಲ್ಲಿ ನರೇಂದ್ರ ಮೋದಿ ವಿರುದ್ಧದ ತನಿಖೆಯನ್ನು ಕಾಂಗ್ರೆಸ್‌ನ ಕೆಲ ನಾಯಕರೇ ನಿಲ್ಲಿಸಿದ್ದರು ಹಾಗೂ ಯುಪಿಎ ಅವಧಿಯಲ್ಲಿ ಅವರು ಜೈಲು ಸೇರುವುದನ್ನು ತಪ್ಪಿಸಿದ್ದರು’ ಎಂಬ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ಮೋದಿಯವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಕಾಂಗ್ರೆಸ್ ಪ್ರಯತ್ನಿಸಿತ್ತು ಎಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗಿದೆ’ ಎಂದಿದೆ.
ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಭೂಗತ ಪಾತಕಿ ಸೊಹ್ರಾಬುದ್ದಿನ್ ಶೇಖ್‌ನ ಎನ್‌ಕೌಟರ್ ಪ್ರಕರಣವನ್ನು ಉಲ್ಲೇಖಿಸಿದ್ದ ಮೊಯ್ಲಿ, ‘ಅಮಿತ್ ಶಾ ಇಂದು ಕೇಂದ್ರ ಗೃಹ ಸಚಿವರಾಗಿರುತ್ತಿರಲಿಲ್ಲ. ನ್ಯಾಯಾಲಯದ ಆದೇಶದಂತೆ ಗಡೀಪಾರು ಆಗಿದ್ದ ಶಾ, ಜೈಲಿಗೆ ಹೋದ ಮೊದಲ ಪ್ರಭಾವಶಾಲಿ ನಾಯಕ ಎನಿಸಿಕೊಂಡಿದ್ದರು. ಅವರ ಬಳಿಕ, ಸಿಎಂ ಆಗಿದ್ದ ಮೋದಿ ಕೂಡ ಗಡೀಪಾರಾಗಿ ಜೈಲಿಗೆ ಹೋಗಬೇಕಾಗುತ್ತಿತ್ತು. ಆದರೆ ಕೆಲ ಕಾಂಗ್ರೆಸ್ ನಾಯಕರಿಂದಾಗಿ ಮೋದಿ ವಿರುದ್ಧ ತನಿಖೆ ನಡೆಯಲಿಲ್ಲ. ಅದರಿಂದಾಗಿ ನಾವು ಇಂದು ಕಷ್ಟಪಡುತ್ತಿದ್ದೇವೆ’ ಎಂದು ಹೇಳಿದ್ದರು.
ಇದಕ್ಕೆ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಪ್ರತಿಕ್ರಿಯಿಸಿದ್ದು, ‘ಗುಜರಾತ್ ಸರ್ಕಾರದಲ್ಲಿ ಮೋದಿ ಮತ್ತು ಅಮಿತ್ ಶಾ ಅಧಿಕಾರದಲ್ಲಿದ್ದಾಗ ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಕಾಂಗ್ರೆಸ್ ಪ್ರಯತ್ನಿಸಿತ್ತು ಹಾಗೂ ಆಗ ಅವರ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದವು ಎಂಬುದನ್ನು ಮೊಯ್ಲಿ ಅವರ ಹೇಳಿಕೆಗಳೇ ಸ್ಪಷ್ಟಪಡಿಸಿವೆ. ಕಾಂಗ್ರೆಸ್‌ನ ಮುಖವಾಡ ಕಳಚಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಜತೆಗೆ, ‘ಯುಪಿಎ ಅವಧಿಯಲ್ಲಿ ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಗಳನ್ನು ಕಡೆಗಣಿಸಲಾಗಿತ್ತು ಎಂಬುದೂ ಸ್ಪಷ್ಟವಾಗಿದೆ. ಜತೆಗೆ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಸರ್ಕಾರದ ಮುಖ್ಯಸ್ಥರಾಗಿರಲಿಲ್ಲ ಎಂಬುದೂ ಇದರಿಂದ ತಿಳಿಯುತ್ತದೆ. ’ ಎಂದು ವ್ಯಂಗ್ಯವಾಡಿದರು.
‘ಪ್ರಜಾಪ್ರಭುತ್ವ ಅಂತ್ಯಗೊಂಡಿದೆ ಎಂದು ಕಾಂಗ್ರೆಸಿಗರು ಏಕೆ ಹೇಳುತ್ತಾರೆ ಎಂಬುದು ಈಗ ಸ್ಪಷ್ಟವಾಗುತ್ತದೆ. ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವವೆಂದರೆ ಕೇವಲ ಅವರ ಸ್ವಂತ ಇಚ್ಛೆಗಳಿಗನುಗುಣವಾಗಿ ನಡೆಯುವ ವ್ಯವಸ್ಥೆಯಾಗಿತ್ತು. ಅವರು ಬಯಸಿದರೆ ಯಾರ ಮೇಲಾದರೂ ಸುಳ್ಳು ಆರೋಪ ಹೊರಿಸಬಹುದಿತ್ತು, ಯಾರನ್ನಾದರೂ ಜೈಲಿಗೆ ಕಳುಹಿಸಬಹುದಿತ್ತು’ ಎಂದೂ ತ್ರಿವೇದಿ ಹೇಳಿದ್ದಾರೆ.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿ ಅವರ ಅಪೇಕ್ಷೆಯಂತೆ ಕೆಲಸ ನಡೆದಿದ್ದರೆ ಇವತ್ತು ಗಂಭೀರ ಅಪರಾಧ ಪ್ರಕರಣವೊಂದರಲ್ಲಿ ಅಮಿತ್ ಶಾ, ನಂತರ ನರೇಂದ್ರ ಮೋದಿ ಕೂಡ ಜೈಲಿಗೆ ಹೋಗಿರುತ್ತಿದ್ದರು. ಆದರೆ, ಕಾಂಗ್ರೆಸ್ ನಾಯಕರೇ ಮೋದಿ ವಿರುದ್ಧದ ಪ್ರಕರಣದ ತನಿಖೆಯನ್ನು ಅಂದು ತಡೆದಿದ್ದರಿಂದ ಕಾಂಗ್ರೆಸ್ ಇಂದು ಸಂಕಷ್ಟ ಅನುಭವಿಸುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಅವರು ಈ ವಿಷಯ ಹೊರಹಾಕಿದರು.
ಆಗ ನಾನು ಕೇಂದ್ರದಲ್ಲಿ ಕಾನೂನು ಸಚಿವನಾಗಿದ್ದೆ. ಪಕ್ಷದಲ್ಲಿ ದೊಡ್ಡ ಕ್ರಾಂತಿಕಾರಿ ಬದಲಾವಣೆ ಮಾಡುವ ಇಚ್ಛೆ ಸೋನಿಯಾಗಾಂಧಿ ಅವರಲ್ಲಿತ್ತು. ಇದಕ್ಕಾಗಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಪಕ್ಷದ ಹಲವು ಪ್ರಮುಖ ನಾಯಕರು ಸಮಿತಿಯಲ್ಲಿದ್ದರು. ನಾವೆಲ್ಲಾ ಅಧ್ಯಯನ ಮಾಡಿ ಕೊಟ್ಟ ವರದಿಯನ್ನು ಅನುಷ್ಠಾನಕ್ಕೆ ತರಲು ಸೋನಿಯಾ ಗಾಂಧಿ ಅವರು ಆಸಕ್ತಿ ತೋರಿದರೂ ಪಕ್ಷದ ಕೆಲ ಮುಖಂಡರೇ ವಿರೋಧಿಸಿದರು. ಸೋನಿಯಾ ಗಾಂಧಿ ಅವರ ಅಪೇಕ್ಷೆಯ ಪ್ರಕಾರ ನಮ್ಮ ಸರ್ಕಾರ ಅಂದು ಕೆಲಸ ಮಾಡಿದ್ದರೆ ಅಮಿತ್ ಶಾ ಇಂದು ಗೃಹ ಸಚಿವ ಆಗುತ್ತಿರಲಿಲ್ಲ, ಮೊದಲು ಜೈಲಿಗೆ ಹೋಗಿರುತ್ತಿದ್ದರು. ಅವರ ನಂತರ ಮೋದಿಯೂ ಜೈಲಿಗೆ ಹೋಗುವ, ಗಡೀಪಾರಾಗುವ ಸರದಿಯಲ್ಲಿ ಇರುತ್ತಿದ್ದರು ಎಂದು ಹೇಳಿದರು.
ಗುಜರಾತ್‌ನ ಅಂದಿನ ಗೃಹ ಸಚಿವರಾಗಿದ್ದ ಅಮಿತ್ ಶಾರನ್ನು ಗಂಭೀರ ಅಪರಾಧ ಪ್ರಕರಣವೊಂದರಲ್ಲಿ ಗಡೀಪಾರು ಮಾಡಲಾಗಿತ್ತು. ಜತೆಗೆ ಆವರ ಮೇಲಿನ ಪ್ರಕರಣದ ವಿಚಾರಣೆಯನ್ನು ಬೇರೆ ರಾಜ್ಯದಲ್ಲಿ ಮಾಡಲು ಕೋರ್ಟ್ ಆದೇಶಿಸಿತ್ತು. ಜೈಲಿಗೆ ಹೋಗುವುದರಲ್ಲಿ ಮತ್ತು ಗಡೀಪಾರು ಆಗುವುದರಲ್ಲಿ ಅಮಿತ್ ಶಾ ನಂತರ ಮೋದಿ ಸರದಿ ಇತ್ತು. ಆದರೆ, ಮೋದಿ ವಿರುದ್ಧದ ವಿಚಾರಣೆ ಮತ್ತು ತನಿಖೆಯನ್ನು ನಮ್ಮ ಸ್ವಪಕ್ಷೀಯ ನಾಯಕರೇ ತನಿಖೆ ನಿಲ್ಲಿಸಿದರು. ಇದರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರವಿರಲಿಲ್ಲ. ಬದಲಾಗಿ ಕಾಂಗ್ರೆಸ್ ಸರ್ಕಾರದಲ್ಲಿದ್ದ ಇತರ ಕೆಲವು ನಾಯಕರು ತನಿಖೆಗೆ ತಡೆಯೊಡ್ಡಿದರು. ಇದರಿಂದ ನಮ್ಮ ಪಕ್ಷ ಇವತ್ತು ದೊಡ್ಡ ಸಂಕಷ್ಟ ಅನುಭವಿವಂತಾಗಿದೆ. ರಾಜಕಾರಣದಲ್ಲಿ ಶತೃಗಳನ್ನು ಬಿಡಬಾರದು ಎಂಬುದಕ್ಕೆ ಇದೊಂದು ಪಾಠವೇ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ