Assembly Polls 2022: ಭೌತಿಕ ರ‍್ಯಾಲಿ, ರೋಡ್ ಶೋ ನಿಷೇಧ, ಗೆಲುವಿಗಾಗಿ ಹೊಸ ತಂತ್ರ ಕಂಡುಕೊಂಡ ಬಿಜೆಪಿ!

By Suvarna NewsFirst Published Jan 19, 2022, 10:45 AM IST
Highlights

* ಪಂಚರಾಜ್ಯ ಚುನಾವಣೆಗೆ ದಿನಾಂಕ ಫಿಕ್ಸ್, ಭೌತಿಕ ರ‍್ಯಾಲಿ, ರೋಡ್ ಶೋ ನಿಷೇಧ

* ಜನರ ಮತ ಗಳಿಸಲು ಬಿಜೆಪಿ ರಣತಂತ್ರ

* ಹೆಚ್ಚು ಜನರನ್ನು ತಲುಪಲು ವಿಭಿನ್ನ ಮಾರ್ಗ ಹುಡುಕಿದ ಕೇಸರಿ ಪಾಳಯ

ನವದೆಹಲಿ(ಜ.19) ಹೆಚ್ಚುತ್ತಿರುವ ಕೊರೋನಾ (COVID-19) ಪ್ರಕರಣಗಳಿಂದಾಗಿ, ಚುನಾವಣಾ ಆಯೋಗವು ಐದು ರಾಜ್ಯಗಳಲ್ಲಿ (Assembly Polls 2022) ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗಾಗಿ ಭೌತಿಕ ರ‍್ಯಾಲಿ, ರೋಡ್ ಶೋ ಅನ್ನು ನಿಷೇಧಿಸಿದೆ. ಈ ನಿರ್ಬಂಧಗಳ ನಡುವೆಯೇ ಬಿಜೆಪಿ ಈಗ ಚುನಾವಣಾ ಕಣದಲ್ಲಿರುವ ರಾಜ್ಯಗಳಲ್ಲಿ ಹೈಬ್ರಿಡ್ ಮೋಡ್‌ನಲ್ಲಿ ರ‍್ಯಾಲಿಗಳನ್ನು ನಡೆಸಲು ಹೊರಟಿದೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಹೆಚ್ಚು ಹೆಚ್ಚು ಜನರು ರ‍್ಯಾಲಿಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

COVID-19 ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೊಸ ತಂತ್ರವನ್ನು ಸಿದ್ಧಪಡಿಸಿದೆ. ಕಿರು ರ‍್ಯಾಲಿಗಳನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುವುದು, ಸುಮಾರು ಒಂದರಿಂದ ಎರಡು ಲಕ್ಷ ಜನರು ಭಾಗವಹಿಸುತ್ತಾರೆ. ಚುನಾವಣಾ ಆಯೋಗವು ಐದು ಚುನಾವಣಾ ರಾಜ್ಯಗಳಲ್ಲಿ ಭೌತಿಕ ರ‍್ಯಾಲಿಗಳು ಮತ್ತು ರೋಡ್ ಶೋಗಳ ಮೇಲಿನ ನಿಷೇಧವನ್ನು ಜನವರಿ 22 ರವರೆಗೆ ವಿಸ್ತರಿಸಿದೆ.

ಇದಕ್ಕೂ ಮೊದಲು ಜನವರಿ 8 ರಂದು, ಆಯೋಗವು ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವಾಗ, ಹೆಚ್ಚುತ್ತಿರುವ COVID-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಜನವರಿ 15 ರವರೆಗೆ ಭೌತಿಕ ರ್ಯಾಲಿಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಆದಾಗ್ಯೂ, ಫೆಬ್ರವರಿ 10 ರಿಂದ ಮಾರ್ಚ್ 10 ರವರೆಗೆ ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ ಮತ್ತು ಉತ್ತರಾಖಂಡದಲ್ಲಿ ರಾಜಕೀಯ ಪಕ್ಷಗಳಿಗೆ ಆಯೋಗವು ಹಲವು ಸಡಿಲಿಕೆಗಳನ್ನು ನೀಡಿದೆ. 403 ಕ್ಷೇತ್ರಗಳನ್ನು ಒಳಗೊಂಡ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯು ಎಲ್ಲಾ ಏಳು ಹಂತಗಳಲ್ಲಿ ನಡೆಯಲಿದೆ.

ಮಣಿಪುರದ 60 ಸ್ಥಾನಗಳಿಗೆ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಮತದಾನ ನಡೆಯಲಿದೆ. 117 ಸ್ಥಾನಗಳ ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಈ ಹಿಂದೆ ಫೆ.14ರಂದು ಇಲ್ಲಿ ಮತದಾನ ನಡೆಯಬೇಕಿತ್ತು. 70 ಕ್ಷೇತ್ರಗಳನ್ನು ಹೊಂದಿರುವ ಉತ್ತರಾಖಂಡ ಮತ್ತು 40 ಕ್ಷೇತ್ರಗಳನ್ನು ಹೊಂದಿರುವ ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಐದು ರಾಜ್ಯಗಳ ಎಲ್ಲಾ ವಿಧಾನಸಭಾ ಸ್ಥಾನಗಳ ಮತ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.
 

click me!