
ಚೆನ್ನೈ(ಜ.19): ತಮಿಳು ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕೀಳಾಗಿ ಬಿಂಬಿಸಿದ ಆರೋಪದಡಿಯಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಝೀ ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸೆಸ್‌ಗೆ ನೋಟಿಸ್ ನೀಡಿದ್ದು ಈ ಕುರಿತು ಸ್ಪಷ್ಟನೆ ಕೇಳಿದೆ.
ಝೀ ತಮಿಳು ವಾಹಿನಿಯಲ್ಲಿ ಜ. 15 ರಂದು ಜ್ಯೂನಿಯರ್ ಸೂಪರ್ ಸ್ಟಾರ್ ಸೀಜನ್ 4 ಟೀವಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿತ್ತು. ಇದರಲ್ಲಿ ಪ್ರಧಾನಿಯನ್ನು ಕೀಳಾಗಿ ಬಿಂಬಿಸಿದ್ದಕ್ಕಾಗಿ ರಾಜ್ಯ ಬಿಜೆಪಿಯ ಮಾಹಿತಿ ಹಾಗೂ ಪ್ರಸಾರ ಇಲಾಖೆಯ ಹಾಗೂ ಸಾಮಾಜಿಕ ಮಾಧ್ಯಮ ಕೋಶದ ಮುಖ್ಯಸ್ಥ ಸಿ.ಟಿ.ಆರ್ ನಿರ್ಮಲ್ ಕುಮಾರ್ ದೂರು ದಾಖಲಿಸಿದ್ದರು. ಅಲ್ಲದೇ ಝೀ ವಾಹಿನಿಯ ಮುಖ್ಯ ಕ್ಲಸ್ಟರ್ ಆಧಿಕಾರಿ ಸಿಜು ಪ್ರಭಾಕರನ್‌ಗೆ ಪತ್ರ ಬರೆದಿದ್ದು, ಸುಮಾರು 10 ವರ್ಷದ ಮಕ್ಕಳನ್ನು ಬಳಸಿಕೊಂಡು ಉದ್ದೇಶಪೂರ್ವಕವಾಗಿಯೇ ಪ್ರಧಾನಿಯ ಅವಹೇಳನ ಮಾಡಲಾಗಿದೆ. ಇದರ ವಿರುದ್ಧ ಚಾನೆಲ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.
ಅಲ್ಲದೇ ಬಿಜೆಪಿಗರು ಶೋನ ನಿರ್ಣಾಯಕರನ್ನು ಅವರ ಪ್ರೋತ್ಸಾಹಕ ಪ್ರತಿಕ್ರಿಯೆ ಕುರಿತು ಪ್ರಶ್ನಿಸಿದಾಗ, ಅವರು ಬೇರೆ ಪ್ರದರ್ಶನಕ್ಕಾಗಿ ನೀಡಿದ ತಮ್ಮ ಪ್ರತಿಕ್ರಿಯೆಗಳನ್ನು ಇಲ್ಲಿ ಎಡಿಟ್ ಮಾಡಿ ಸೇರಿಸಲಾಗಿದೆ ಎಂದಿದ್ದಾರೆ. ಅಲ್ಲದೇ ಝೀ ಕಾರ್ಯಕ್ರಮದ ವಿವಾದಾತ್ಮಕ ಭಾಗವನ್ನು ತೆಗೆದುಹಾಕುವುದಾಗಿ ಹಾಗೂ ಅದನ್ನು ಮರುಪ್ರಸಾರ ಮಾಡದಿರುವುದಾಗಿ ಭರವಸೆ ನೀಡಿದೆ ಎಂದು ನಿರ್ಮಲ್ ತಿಳಿಸಿದ್ದಾರೆ.
ಮೋದಿಗೆ ಗಣರಾಜ್ಯ ದಿನದ ವೇಳೆ ಉಗ್ರ ಬೆದರಿಕೆ: ಹೈ ಅಲರ್ಟ್
ಗಣರಾಜ್ಯೋತ್ಸವದ ದಿನದಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರ ಜೀವಕ್ಕೆ ಬೆದರಿಕೆ ಒಡ್ಡುವ ಸಂಭಾವ್ಯ ಭಯೋತ್ಪಾದಕ ಸಂಚಿನ ಬಗ್ಗೆ ಗುಪ್ತಚರ ಸಂಸ್ಥೆಗೆ ಎಚ್ಚರಿಕೆ ಮಾಹಿತಿ ಸಿಕ್ಕಿದೆ.
ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮೋದಿ ಸೇರಿದಂತೆ ಈ ನಾಯಕರ ಜೀವಕ್ಕೆ ಅಪಾಯವಿರುವುದರ ಕುರಿತು ಗುಪ್ತಚರ ಸಂಸ್ಥೆಗಳು ಮಾಹಿತಿ ಸಂಗ್ರಹಿಸಿವೆ. ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ಮೂಲಕ ಗುಂಪುಗಳಿಂದ ಬೆದರಿಕೆ ಬಂದಿದೆ ಎಂದು ಈ ಸಂಸ್ಥೆಗಳ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಗಣ್ಯರನ್ನು ಗುರಿಯಾಗಿಸಿಕೊಂಡು ಸಾರ್ವಜನಿಕ ಸಭೆಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ ವಿದ್ವಂಸಕ ಕೃತ್ಯ ಎಸಗುವ ಉದ್ದೇಶ ಹೊಂದಿವೆ ಎಂದು ಹೇಳಲಾಗಿದೆ.
ಈ ಗುಂಪುಗಳು ಡ್ರೋನ್ ಮೂಲಕ ದಾಳಿ ನಡೆಸುವ ಸಾಧ್ಯತೆ ಸಹ ಇದೆ. ಲಷ್ಕರ್-ಎ-ತೊಯ್ಬಾ, ದಿ ರೆಸಿಸ್ಟೆನ್ಸ್ ಫೋರ್ಸ್, ಜೈಶ್-ಎ-ಮೊಹಮ್ಮದ್‌ನಂತಹ ಭಯೋತ್ಪಾದಕ ಗುಂಪುಗಳು ಇದರ ಹಿಂದೆ ಇರಬಹುದು. ಪಾಕಿಸ್ತಾನಿ ಮೂಲದ ಖಲಿಸ್ತಾನಿ ಗುಂಪುಗಳು ಪಂಜಾಬ್‌ನಲ್ಲಿ ಭಯೋತ್ಪಾದನೆಯನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ತಿಳಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ