ಬಿಜೆಪಿ ನಡತೆ ಹಿಂದುತ್ವದ ರೀತಿ ಇಲ್ಲ: ರಾಹುಲ್‌ ಗಾಂಧಿ

By Kannadaprabha News  |  First Published Sep 11, 2023, 12:30 AM IST

ಭಾರತದ ಆತ್ಮವನ್ನು ರಕ್ಷಿಸಲು ವಿಪಕ್ಷಗಳು ಬದ್ಧವಾಗಿವೆ’ ಎಂದು ಒತ್ತಿ ಹೇಳಿದ ರಾಹುಲ್‌, ಸದ್ಯ ದೇಶ ಪ್ರಕ್ಷುಬ್ಧ ವಾತಾವರಣ ಎದುರಿಸುತ್ತಿದ್ದು ಶೀಘ್ರವೇ ಈ ಪರಿಸ್ಥಿತಿಯಿಂದ ತಿಳಿಯಾದ ವಾತಾವರಣ ಪ್ರವೇಶಿಸಲಿದೆ ಎಂದು ಭವಿಷ್ಯ ನುಡಿದರು.


ಲಂಡನ್‌(ಸೆ.11): ಕೇಂದ್ರದಲ್ಲಿ ಅಧಿಕಾರರೂಢ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಆಡಳಿತಾರೂಢ ಪಕ್ಷ ಅಧಿಕಾರ ಹಿಡಿಯಲು ಏನು ಬೇಕಾದರೂ ಮಾಡಲು ಸಿದ್ಧ ಎಂಬ ಹಂತದಲ್ಲಿದೆ ಮತ್ತು ಅವರ ನಡೆ ನುಡಿಯಲ್ಲಿ ಯಾವುದೇ ಹಿಂದುತ್ವ ಇಲ್ಲ’ ಎಂದಿದ್ದಾರೆ.

ಪ್ಯಾರಿಸ್‌ನ ಪಿಒ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ರಾಹುಲ್‌ ಗಾಂಧಿ, ಅಲ್ಲಿ ಭಾರತ್‌ ಜೋಡೋ ಯಾತ್ರೆ, ಭಾರತದ ಪ್ರಜಾಸತಾತ್ಮಕ ಚೌಕಟ್ಟು ರಕ್ಷಿಸಲು ವಿಪಕ್ಷಗಳ ಮೈತ್ರಿಕೂಟ, ಜಾಗತಿಕ ಸವಾಲುಗಳು ಮತ್ತು ಇತರೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು.

Tap to resize

Latest Videos

ಮೋದಿ ಸರ್ಕಾರ ದೇಶದ ನಿಜ ಸ್ವರೂಪವನ್ನು ಜಿ20 ಅತಿಥಿಗಳಿಂದ ಮರೆ ಮಾಡಿದೆ: ರಾಹುಲ್‌ ಕಿಡಿ

ಸಂವಾದದ ವೇಳೆ ‘ಭಾರತದ ಆತ್ಮವನ್ನು ರಕ್ಷಿಸಲು ವಿಪಕ್ಷಗಳು ಬದ್ಧವಾಗಿವೆ’ ಎಂದು ಒತ್ತಿ ಹೇಳಿದ ರಾಹುಲ್‌, ಸದ್ಯ ದೇಶ ಪ್ರಕ್ಷುಬ್ಧ ವಾತಾವರಣ ಎದುರಿಸುತ್ತಿದ್ದು ಶೀಘ್ರವೇ ಈ ಪರಿಸ್ಥಿತಿಯಿಂದ ತಿಳಿಯಾದ ವಾತಾವರಣ ಪ್ರವೇಶಿಸಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ನಡತೆ ಹಿಂದುತ್ವದ ರೀತಿ ಇಲ್ಲ:

ಇದೇ ವೇಳೆ ಭಾರತದಲ್ಲಿ ಹಿಂದೂ ರಾಷ್ಟ್ರೀಯತೆಯ ಹೆಚ್ಚುತ್ತಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್‌ ‘ನಾನು ಭಗವದ್ಗೀತೆ ಓದಿದ್ದೇನೆ, ನಾನು ಹಲವು ಉಪನಿಷತ್‌ ಓದಿದ್ದೇನೆ, ನಾನು ಹಲವು ಹಿಂದೂ ಪುಸ್ತಕಗಳನ್ನು ಓದಿದ್ದೇನೆ; ಆದರೆ ಅಲ್ಲೆಲ್ಲೂ ಬಿಜೆಪಿ ನಡೆದುಕೊಳ್ಳುವ ರೀತಿಯ ಹಿಂದುತ್ವ ಪ್ರತಿಪಾದಿಸಿಲ್ಲ, ಖಂಡಿತವಾಗಿಯೂ ಏನೂ ಇಲ್ಲ’ ಎಂದರು.

‘ನಾನು ಎಲ್ಲೂ, ಯಾವುದೇ ಹಿಂದೂ ಪುಸ್ತಕದಲ್ಲೂ, ಯಾವುದೇ ಹಿಂದೂ ವ್ಯಕ್ತಿಯಿಂದಲೂ, ನಿಮಗಿಂತ ದುರ್ಬಲ ವ್ಯಕ್ತಿಯನ್ನು ನೀವು ಹೆದರಿಸಬೇಕು ಎಂದು ಹೇಳಿದ್ದು ಕೇಳಿಲ್ಲ. ಹೀಗಾಗಿ, ಹಿಂದು ರಾಷ್ಟ್ರೀಯವಾದಿಗಳು ಎಂಬ ಈ ಚಿಂತನೆ; ಈ ಪದ ತಪ್ಪು ಎಂಬುದು ನನ್ನ ಅಭಿಪ್ರಾಯ. ಅವರಾರ‍ಯರೂ ಹಿಂದೂ ರಾಷ್ಟ್ರೀಯವಾದಿಗಳಲ್ಲ. ಅವರಿಗೂ ಹಿಂದುತ್ವಕ್ಕೂ ಸಂಬಂಧವಿಲ್ಲ. ಅವರು ಏನಾದರೂ ಮಾಡಿ ಅಧಿಕಾರ ಹಿಡಿಯಲು ಮುಂದಾದವರು ಮತ್ತು ಅಧಿಕಾರ ಹಿಡಿಯಲು ಅವರು ಏನು ಬೇಕಾದರೂ ಮಾಡಲು ಸಿದ್ಧರಾಗಿರುವವರು. ಅವರು ಕೆಲವು ವ್ಯಕ್ತಿಗಳ ಮೇಲೆ ತಮ್ಮ ಪ್ರಾಬಲ್ಯ ಸಾಧಿಸಲು ಬಯಸುತ್ತಾರೆ, ಅವರ ಉದ್ದೇಶ ಅಷ್ಟೇ. ಅವರಲ್ಲಿ ಯಾವುದೇ ಹಿಂದುತ್ವ ಇಲ್ಲ’ ಎಂದು ರಾಹುಲ್‌ ಹೇಳಿದರು.

ದಲಿತರು ಮತ್ತು ಇತರೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ‘ಇವುಗಳ ನಿಗ್ರಹಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಾಗಿದೆ. ಇದನ್ನು ಸಾಧಿಸುವ ಬದ್ಧತೆ ವಿಪಕ್ಷಗಳಿಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜನರ ಅಭಿಪ್ರಾಯ ಹತ್ತಿಕ್ಕಲು ಪ್ರಯತ್ನಿಸುತ್ತಿವೆ, ಕೆಳ ಜಾತಿಗಳು ಮತ್ತು ಇತರೆ ಹಿಂದುಳಿದ ವರ್ಗಗಳು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಭಾಗಿದಾರಿಕೆಯನ್ನು ತಡೆಯಲು ಯತ್ನಿಸಲಾಗುತ್ತಿದೆ. ಇದು ನಾನು ಬಯಸುವ ಭಾರತ ಅಲ್ಲ’ ಎಂದರು.

ಭಾರತ ವಿರೋಧಿ ಸಂಸದನ ಜೊತೆ ರಾಹುಲ್‌ ವಿವಾದ, ಚೀನಾ ಬಗ್ಗೆ ಹೊಗಳಿಕೆ ಮೋದಿಯ ತೆಗಳಿಕೆ

‘ನಾಳೆ ಬೆಳಗ್ಗೆ ಪ್ರಧಾನಿ ದೇಶದಲ್ಲಿ ಹಿಂಸಾಚಾರ ನಡೆಯಬಾರದು ಎಂದು ನಿರ್ಧರಿಸಿದರೆ, ಹಿಂಸಾಚಾರ ಸ್ಥಗಿತವಾಗುತ್ತದೆ. ದೇಶದ ನಾಯಕತ್ವ ಯಾವ ರೀತಿಯ ಸಂದೇಶ ರವಾನಿಸುತ್ತದೆ, ದೇಶದ ನಾಯಕನ ಚಿಂತನೆಗಳು ಏನು ಎಂಬ ವಿಷಯವೇ ದೇಶದ ಜನರನ್ನು ರೂಪಿಸುತ್ತವೆ. ಆದರೆ ಸದ್ಯ ದೇಶದಲ್ಲಿ ನೀವು ಬೇಕಾದ್ದು ಮಾಡಿ, ನಿಮಗೆ ಏನೂ ಆಗದು ಎಂಬ ಭಾವನೆ ಇದೆ. ಇದು ಭಾರತದ ಆತ್ಮದ ಮೇಲಿನ ದಾಳಿ. ಆದರೆ ಇದನ್ನು ಮಾಡುತ್ತಿರುವವರು ಅದಕ್ಕೆ ತಕ್ಕ ಬೆಲೆ ತೆರಲೇಬೇಕಾಗುತ್ತದೆ’ ಎಂದು ರಾಹುಲ್‌ ಎಚ್ಚರಿಸಿದರು.

ಇದೇ ವೇಳೆ ಇಂಥ ದಾಳಿಗೆ ತಾವು ಕೂಡಾ ತುತ್ತಾಗಿರುವುದಾಗಿ ಉದಾಹರಿಸಿದ ರಾಹುಲ್‌ ಗಾಂಧಿ, ನನ್ನ ಮೇಲೆ 24 ಕಾನೂನು ಕೇಸುಗಳು ದಾಖಲಾಗಿವೆ. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರಿಮಿನಲ್‌ ಮಾನನಷ್ಟಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ಗರಿಷ್ಠ ಶಿಕ್ಷೆ ನೀಡಲಾಗಿದೆ. ಆದರೆ ಇದರ ವಿರುದ್ಧ ಹೋರಾಟ ನಿಲ್ಲದು. ಭಾರತದ ಪ್ರಜಾಸತಾತ್ಮಕ ಚೌಕಟ್ಟಿನ ರಕ್ಷಣೆಗಾಗಿ ಹೋರಾಟ ಮುಂದುವರೆಯಲಿದೆ ಮತ್ತು ಅದು ಅತ್ಯಂತ ಸ್ಪಂದನಶೀಲವಾಗಿದೆ’ ಎಂದು ಹೇಳಿದರು.

click me!