
ಗೆಳೆಯನ ಹುಟ್ಟುಹಬ್ಬದ ಜಾಲಿ ಮೂಡ್‌ನಲ್ಲಿದ್ದ ನಾಲ್ವರು ಸ್ನೇಹಿತರು ಜೊತೆಯಾಗಿ ಮಸಣ ಸೇರಿದ್ದಾರೆ. ಹೌದು ಅವರ ಕೈಯಲ್ಲಿ ಸಿಗರೇಟ್‌ಗಳಿದ್ದವು, ಕಾರಿನೊಳಗೆ ಮ್ಯೂಸಿಕ್ ಕಿವಿಗಡಚಿಕ್ಕುತ್ತಿದ್ದವು. ಅಹ್ಮದಾಬಾದ್‌ನ ಬೈಪಾಸ್ ರಸ್ತೆಯಲ್ಲಿ ಕಾರು ಚಾಲನೆಯಲ್ಲಿದ್ದಾಗಲೇ ಡ್ರೈವಿಂಗ್ ಸೀಟ್‌ನಲ್ಲಿದ್ದ ಓರ್ವ ಗೆಳೆಯ ಕಾರು 140 ವೇಗಕ್ಕೆ ತಲುಪುವವರೆಗೂ ಆಕ್ಸಿಲರೇಟರ್ ಮೇಲೆ ಕಾಲಿಟ್ಟಿದ್ದ ಮುಂದೆ ಆಗಿದ್ದು, ದೊಡ್ಡ ಅನಾಹುತ. ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಆರು ಜನರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತದ ರಭಸಕ್ಕೆ ಗಾಜು ಒಡೆದಂತೆ ಜೋರಾಗಿ ಸದ್ದಾಗಿ ನಂತರ ಕತ್ತಲಾವರಿಸಿತು. ಈ ಎಲ್ಲಾ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಆಗಿತ್ತು. ರಾಜಸ್ಥಾನದ ಉದಯ್‌ಪುರದಲ್ಲಿ ನಡೆದ ಭೀಕರ ಅಪಘಾತದ ಚಿತ್ರಣವಿದು. ಆರು ಜನ ಸ್ನೇಹಿತರು ಕಾರಿನಲ್ಲಿ ಪಯಣಿಸುತ್ತಿದ್ದ ವೇಳೆ 3 ಗಂಟೆ ಸುಮಾರಿಗೆ ಕಾರು ಅಹ್ಮದಾಬಾದ್ ಬೈಪಾಸ್‌ನಲ್ಲಿ ಅಪಘಾತಕ್ಕೀಡಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ ಕಾರಿನಲ್ಲಿದ್ದವರು ಅಪಘಾತದ ನಂತರ 10 ನಿಮಿಷಗಳ ಕಾಲ ಸಹಾಯಕ್ಕಾಗಿ ಬೇಡಿದ್ದಾರೆ. ನಂತರ ಸ್ಥಳಕ್ಕೆ ಜನರು ಹೋದಾಗ ಅಷ್ಟರಲ್ಲೇ ನಾಲ್ವರು ಸ್ನೇಹಿತರು ಪ್ರಾಣ ಬಿಟ್ಟಾಗಿತ್ತು. ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ.
ಉದಯ್‌ಪುರದ ಸವೀನಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಅಪಘಾತಕ್ಕೂ ಮೊದಲು ಸ್ನೇಹಿತರು ಮಾಡಿದ್ದ ವೀಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅದರಲ್ಲಿ ಚಾಲಕನ ಸೀಟಿನಲ್ಲಿದ್ದವನನ್ನು ಶೇರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಈತ ಕಾರನ್ನು ಮೊದಲಿಗೆ 100 ರಲ್ಲಿ ಓಡಿಸುತ್ತಿದ್ದ, ಸ್ವಲ್ಪ ಹೊತ್ತಿನಲ್ಲಿ 120ಕ್ಕೆ ಏರಿಸಿದ್ದು, ನಂತರ 140 ಕ್ಕೆ ಆಕ್ಸಿಲರೇಟ್ ಒತ್ತಿದ್ದಾನೆ. ಇದನ್ನು ರೆಕಾರ್ಡಿಂಗ್ ಮಾಡಲಾಗಿದ್ದು, ಈ ರೆಕಾರ್ಡ್ ಮಾಡಲು ಶುರು ಮಾಡಿದ 1 ನಿಮಿಷ 10 ಸೆಕೆಂಡ್‌ನಲ್ಲಿ ಕಾರು ಅಪಘಾತಕ್ಕೀಡಾಗಿ ನಾಲ್ವರ ಬಲಿ ಪಡೆದಿದೆ.
ಈ ಸಮಯದಲ್ಲಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಹುಡುಗನೋರ್ವ ಕಾರನ್ನು 140 ರ ವೇಗದಲ್ಲಿ ಚಲಾಯಿಸದಂತೆ ಮತ್ತೆ ಮತ್ತೆ ಹೇಳುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಆದರೆ ಆತನ ಮಾತು ಕೇಳದೇ ಎಡವಟ್ಟು ಮಾಡಿಕೊಂಡಿದ್ದು, ತಾನು ಸಾಯುವುದಲ್ಲದೇ ತನ್ನ ಜೊತೆಗೆ ಇನ್ನೂ ಮೂವರ ಬಲಿ ಪಡೆದಿದ್ದಾನೆ ಮೊಹಮ್ಮದ್. ಪರಿಣಾಮ ಗೆಳೆಯನ ಬರ್ತ್‌ಡೇ ಪಾರ್ಟಿ ಸಂಭ್ರಮದ ಬದಲು ಶೋಕದ ಸ್ಥಿತಿ ಆಗಿ ಬದಲಾಗಿದೆ. ಘಟನೆಯಲ್ಲಿ ಈ ಸ್ನೇಹಿತರ ಕಾರು ಮತ್ತೊಬ್ಬರ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಆ ಕಾರು ಕೂಡ ನಜ್ಜುಗುಜ್ಜಾಗಿದೆ.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ನಾಳೆಯೂ ರಕ್ತದೋಕುಳಿ ಮುಂದುವರೆಯುತ್ತಾ? ಮಾರುಕಟ್ಟೆ ತಜ್ಞರು ಏನಂತಾರೆ?
ಈ ಸ್ನೇಹಿತರ ತಂಡ ಸವೀನಾ ಪ್ರದೇಶದ ನೆಲಾ ತಲಾಬ್ ಬಳಿ ಮೆಹ್ಫಿಲ್ ಇ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅಪಘಾತ ನಡೆಯುವುದಕ್ಕೆ ಮೊದಲು ಸ್ವಲ್ಪ ದೂರದ ಒಂದು ಸ್ಥಳದಲ್ಲಿ ಚಹಾ ಕುಡಿಯಲು ಕಾರಿನಲ್ಲಿ ಹೊರಟಿದ್ದರು. ಮೃತರನ್ನು ಮುರ್ಷಿದ್ ನಗರದ ಮೊಹಮ್ಮದ್ ಅಯಾನ್ (17), ಬರ್ಕತ್ ಕಾಲೋನಿಯ ಆದಿಲ್ ಖುರೇಷಿ (14), ಮಲ್ಲತಲೈನ ಶೇರ್ ಮೊಹಮ್ಮದ್ (19) ಮತ್ತು ಸವಿನಾದ ಗುಲಾಮ್ ಖ್ವಾಜಾ (17) ಎಂದು ಗುರುತಿಸಲಾಗಿದ್ದು, ಎಲ್ಲರೂ 20ರೊಳಗಿನ ಹುಡುಗರೇ ಆಗಿದ್ದಾರೆ.
ಇದನ್ನೂ ಓದಿ: ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಅಸಭ್ಯ ವರ್ತನೆ: ವೀಡಿಯೋ ಮಾಡ್ತಿದ್ದಂತೆ ಎಸ್ಕೇಪ್
ಅವರ ಸ್ನೇಹಿತರಾದ ವಾಸಿಮ್ (20) ಮತ್ತು ಮೊಹಮ್ಮದ್ ಕೈಫ್ (19) ಗಂಭೀರವಾಗಿ ಗಾಯಗೊಂಡು ಮೊದಲಿಗೆ ಉದಯಪುರದ ಎಂಬಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ವಾಸಿಮ್ ಅವರನ್ನು ಅವರ ಕುಟುಂಬದವರು ಅಹಮದಾಬಾದ್‌ಗೆ ಕರೆದೊಯ್ದಿದ್ದಾರೆ. ಇವರಿದ್ದ ಕಾರು ಗುಜರಾತ್ ನೋಂದಣಿಯ ಕಾರಿಗೆ ಡಿಕ್ಕಿ ಹೊಡೆದಿದ್ದು, ಆ ಕಾರಿನಲ್ಲಿದ್ದವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಗಾಡಿ ಚುರುವಿನ ರಾಜ್‌ಗಢದಿಂದ ವಾಪಿ (ಗುಜರಾತ್) ಕಡೆಗೆ ಪ್ರಯಾಣಿಸುತ್ತಿತ್ತು. ಕಾರಿನಲ್ಲಿದ್ದ ಮಹಿಪಾಲ್ ಜಾಟ್ (48), ಅವರ ಪತ್ನಿ ರಾಜ್‌ಬಾಲಾ (45), ಮಗ ರಾಜೇಶ್ (26) ಮತ್ತು ಕರ್ಮವೀರ್ ಸಿಂಗ್ (24) ಘಟನೆಯಲ್ಲಿ ಗಾಯಗೊಂಡಿದ್ದು, ಅರನ್ನು ಉದಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ