ಜಪಾನ್‌ನ ಬಹುಕೋಟಿ ಉದ್ಯಮಿಯ ಬದುಕು ಬದಲಿಸಿದ ತಮಿಳುನಾಡಿನ ನಾಡಿ ಜ್ಯೋತಿಷಿಯ ಭವಿಷ್ಯ

Published : Jul 26, 2025, 12:16 PM ISTUpdated : Jul 26, 2025, 12:17 PM IST
Japanese devotee in Kanwar Yatra

ಸಾರಾಂಶ

ಅನಾದಿ ಕಾಲದಿಂದಲೂ ಅನೇಕ ಪಾಶ್ಚಿಮಾತ್ಯ ದೇಶಗಳ ಜನರು ಕೂಡ ಮುಕ್ತಿ ಹಾಗೂ ಮೋಕ್ಷವನ್ನು ಅರಸಿ ಭಾರತಕ್ಕೆ ಬಂದಿದ್ದಾರೆ. ಅದೇ ರೀತಿ ಈಗ ಜಪಾನ್‌ನ ಉದ್ಯಮಿಯೊಬ್ಬರು ಭಾರತಕ್ಕೆ ಬಂದಿದ್ದು ಕನ್ವರ್‌ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರ ಕತೆ ಇಲ್ಲಿದೆ.

ಒಂದು ಹಂತದವರೆಗೆ ಶ್ರೀಮಂತಿಕೆ ಬಂದ ನಂತರ ಕೆಲವರಿಗೆ ಗಳಿಸಿದೆಲ್ಲವೂ ನಶ್ವರ ಎಂಬ ಭಾವನೆ ಮೂಡಲು ಶುರುವಾಗುತ್ತದೆ. ಅನೇಕರು ಎಲ್ಲವನ್ನೂ ಗಳಿಸಿದ ನಂತರ ಆಧ್ಯಾತ್ಮದ ಮೇಲೆ ಒಲವು ಮೂಡಿ ಎಲ್ಲವನ್ನು ತ್ಯಜಿಸಿ ಸನ್ಯಾಸಿಗಳಾದವರಿದ್ದಾರೆ. ಆಧ್ಮಾತ್ಮದಲ್ಲಿ ನೆಮ್ಮದಿ ಅರಸಿ ಬರುವ ಅನೇಕರಿಗೆ ಭಾರತ ನೆಲೆಯಾಗಿದೆ. ಅನಾದಿ ಕಾಲದಿಂದಲೂ ಅನೇಕ ಪಾಶ್ಚಿಮಾತ್ಯ ದೇಶಗಳ ಜನರು ಕೂಡ ಮುಕ್ತಿ ಹಾಗೂ ಮೋಕ್ಷವನ್ನು ಅರಸಿ ಭಾರತಕ್ಕೆ ಬಂದಿದ್ದಾರೆ. ಅದೇ ರೀತಿ ಈಗ ಜಪಾನ್‌ನ ಉದ್ಯಮಿಯೊಬ್ಬರು ಭಾರತಕ್ಕೆ ಬಂದಿದ್ದು ಕನ್ವರ್‌ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರ ಕತೆ ಇಲ್ಲಿದೆ.

ಎಲ್ಲವನ್ನು ತೊರೆದು ಸನ್ಯಾಸಿಯಾದ ಜಪಾನ್‌ನ ಉದ್ಯಮಿ

ಜಪಾನ್‌ನ 40 ವರ್ಷದ ಹೊಶಿ ತಕಾಯುಕಿ ಈಗ ಭಾರತದಲ್ಲಿ ಕನ್ವರ್‌ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹಾಗಂತ ಈ ಹೊಶಿ ತಕಾಯುಕಿ ಏನೂ ಇಲ್ಲದವರಲ್ಲ. ಅವರು ಈ ಹಿಂದೆ ಜಪಾನ್‌ನ ಬಹುಕೋಟಿ ಮೌಲ್ಯದ ಉದ್ಯಮಿ. ಜಪಾನ್‌ 15 ಸೌಂದರ್ಯವರ್ಧಕಗಳ ಸ್ಟೋರ್‌ಗಳನ್ನು ಹೊಂದಿದ್ದ ಅವರು ಈಗ ಅವರು ಶಿವನ ಬರಿಗಾಲ ದಾಸ. ತಮ್ಮ ಹಿಂದಿನ ಜನ್ಮದಲ್ಲಿ ತಾವು ಹಿಮಾಲಯದಲ್ಲಿ ಸನ್ಯಾಸಿಯಾಗಿದ್ದೆ ಎಂಬುದನ್ನು ಅರಿತ ಅವರು ತಮ್ಮೆಲ್ಲಾ ಅಸ್ತಿಯನ್ನು ತೊರೆದು ಸನ್ಯಾಸತ್ವವನ್ನು ಸ್ವೀಕರಿಸಿದ್ದು, ಈಗ ಕಷಾಯ ವಸ್ತ್ರ ಧರಿಸಿ ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಕನ್ವರ್‌ಯಾತ್ರೆಯಲ್ಲಿ ಬರಿಗಾಲಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಬದುಕನ್ನೇ ಬದಲಿಸಿತ್ತು 2023ರ ಆ ತಮಿಳುನಾಡಿನ ಪ್ರವಾಸ

ಹೊಶಿ ತಕಾಯುಕಿ ಅವರು ತಮ್ಮ ಹೆಸರನ್ನು ಬಾಲಕುಂಬ ಗುರುಮಣಿ ಎಂದು ಬದಲಾಯಿಸಿಕೊಂಡಿದ್ದಾರೆ. ಹೊಶಿ ತಕಾಯುಕಿ ಅವರ ಬಳಿ ಎಲ್ಲ ಸುಖ ಸೌಲಭ್ಯಗಳು ಇದ್ದವು. ಬೆಳೆಯುತ್ತಿದ್ದ ಸೌಂದರ್ಯವರ್ಧಕ ಉದ್ಯಮ, ನಿಷ್ಠಾವಂತ ಗ್ರಾಹಕರು ಹಾಗೂ ಆರಾಮದಾಯಕ ಬದುಕು ಎಲ್ಲವೂ ಇದ್ದವು. ಆಧ್ಯಾತ್ಮಿಕತೆ ಅವರ ಬದುಕಿನ ಭಾಗವೇ ಆಗಿರಲಿಲ್ಲ. ಅವರಿಗೆ ಅದರ ಬಗ್ಗೆ ಯೋಚನೆಯೂ ಇರಲಿಲ್ಲ, ಆದರೆ 2023ರಲ್ಲಿ ಅವರ ತಮಿಳುನಾಡು ಪ್ರವಾಸ ಅವರ ಬದುಕಿನ ಚಿಂತನೆಯನ್ನೇ ಬದಲಿಸಿತು.

ಗತ, ವಾಸ್ತವ ಹಾಗೂ ಭವಿಷ್ಯದ ಬಗ್ಗೆ ನಿಖರವಾಗಿ ಹೇಳಿದ ನಾಡಿ ತಜ್ಞ

ತಮಿಳುನಾಡಿನಲ್ಲಿರುವ ಅವರ ಸ್ನೇಹಿತರೊಬ್ಬರು ಒಬ್ಬರು ನಾಡಿ ಆಸ್ಟ್ರಾಲಾಜರ್ (ನಾಡಿ ತಜ್ಞ ಅಥವಾ ಜ್ಯೋತಿಷಿ) ಒಬ್ಬರನ್ನು ಭೇಟಿಯಾಗುವಂತೆ ಹೇಳಿದರು. ಅವರು ಪ್ರಾಚೀನ ಕಾಲದ ತಾಳೆಗರಿಯಲ್ಲಿ ಬರೆದ ಹಸ್ತಪ್ರತಿಗಳನ್ನು ನೋಡಿ ಒಬ್ಬ ವ್ಯಕ್ತಿಯ ಹಿಂದಿನ ಮುಂದಿನ ಹಾಗೂ ಪ್ರಸ್ತುತ ಭವಿಷ್ಯವನ್ನು ಹೇಳುವ ಸಾಮರ್ಥ್ಯವನ್ನು ಹೊಂದಿದ್ದರ. ಇವರನ್ನು ಭೇಟಿಯಾದ ಹೊಶಿ ತಕಾಯುಕಿ ಅವರಿಗೆ ಆ ನಾಡಿತಜ್ಞರು ಹೊಶಿ ಅವರ ಹಿಂದಿನ ಜೀವನದ ಘಟನೆಗಳನ್ನು ಹಾಗೂ ಪ್ರಸ್ತುತ ಜೀವನದ ಬಗ್ಗೆ ಕಣ್ಣ ಮುಂದೆ ನೋಡಿದವರಂತೆ ಹೇಳಿದ್ದನ್ನು ನೋಡಿ ಅಚ್ಚರಿಯಾಗಿತ್ತು. ಅಲ್ಲದೇ ಹೊಶಿ ತಮ್ಮ ಹಿಂದಿನ ಜನ್ಮದಲ್ಲಿ ಶಿವನ ಭಕ್ತರಾಗಿದ್ದರು ಹಾಗೂ ಸನ್ಯಾಸಿಯಾಗಿದ್ದರು ಎಂಬುದನ್ನು ಕೂಡ ಈ ನಾಡಿತಜ್ಞರು ಹೇಳಿದ್ದರು.

ಜಪಾನ್‌ಗೆ ಹೋಗಿ ಐಷಾರಾಮಿ ಬದುಕನ್ನು ತೊರೆದ ಹೊಶಿ

ಅದೇ ದಿನ ರಾತ್ರಿ ಅವರಿಗೆ ಕನಸಿನಲ್ಲಿ ಹಿಮಭರಿತ ಬೆಟ್ಟ ಹಾಗೂ ಕೇಸರಿ ವಸ್ತ್ರ ಹಾಗೂ ಮಂತ್ರಗಳ ಪಠಣದ ಕನಸು ಬಿತ್ತು. ಇದು ಹೊಶಿ ಅವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. ತಮಿಳುನಾಡಿನಿಂದ ಸೀದಾ ಜಪಾನ್‌ಗೆ ಹೋದ ಹೊಶಿ, ತಮ್ಮ ಉದ್ಯಮವನ್ನು ಸಂಪೂರ್ಣವಾಗಿ ಬೇರೆಯವರಿಗೆ ಹಸ್ತಾಂತರಿಸಿದರು. ತಮ್ಮೆಲ್ಲಾ ಐಷಾರಾಮ ಜೀವನವನ್ನು ತೊರೆದರು. ತಮ್ಮ ಹೆಸರನ್ನು ಬಾಲ ಕುಂಭ ಗುರುಮಣಿ ಎಂದು ಬದಲಾಯಿಸಿದರು. ಟೋಕಿಯೋದಲ್ಲಿದ್ದ ತಮ್ಮ ಮನೆಯನ್ನು ಶಿವನ ದೇಗುಲವಾಗಿ ಪರಿವರ್ತಿಸಿದರು. ಹಾಗೂ ಶಿವನ ಆರಾಧನೆಯಲ್ಲಿ ಉಳಿದ ಜೀವನವನ್ನು ಕಳೆಯುವುದಕ್ಕ ನಿರ್ಧರಿಸಿದರು.

ಇಂತಹ ಶಿವಭಕ್ತ ಈ ಬಾರಿ ಕನ್ವರ್‌ಯಾತ್ರೆಯಲ್ಲಿ ತಮ್ಮ 20 ಜಪಾನ್ ಮೂಲದ ಭಕ್ತರೊಂದಿಗೆ ಬರಿಗಾಲಲ್ಲಿ ಹೆಜ್ಜೆ ಹಾಕುತ್ತಿದ್ದು, ಗಂಗೆಯನ್ನು ಹೊತ್ತು ಹರಿದ್ವಾರ ಹಾಗೂ ಡೆಹ್ರಾಡೂನ್‌ ಸೇರಿದಂತೆ ಹಲವು ಶಿವನ ಆಲಯಗಳಿಗೆ ಭೇಟಿ ನೀಡಿ ಶಿವನಿಗೆ ಗಂಗೆಯ ಅಭಿಷೇಕ ಮಾಡುತ್ತಿದ್ದಾರೆ. ಪ್ರಸ್ತುತ ಪುದುಚೇರಿಯಲ್ಲಿ 35 ಎಕರೆ ಭೂಮಿಯನ್ನು ಖರೀದಿ ಮಾಡಿರುವ ಅವರು ಅಲ್ಲಿ ಬೃಹತ್ ಗಾತ್ರದ ಶಿವನ ದೇಗುಲವನ್ನು ನಿರ್ಮಿಸಲು ಚಿಂತನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಹಿಂದೂ ಧರ್ಮದಲ್ಲಿ ಪುನರ್ಜನ್ಮದ ಬಗ್ಗೆ ಬಹಳ ನಂಬಿಕೆ ಇದೆ. ಸಾವು ದೇಹಕ್ಕೆ ಮಾತ್ರ ಆತ್ಮಕಲ್ಲ ಎಂಬುದು ನಮ್ಮ ಧಾರ್ಮಿಕ ನಂಬಿಕೆ ಹಾಗೂ ಪುರಾಣಗಳಲ್ಲೂ ಇದರ ಬಗ್ಗೆ ಉಲ್ಲೇಖಗಳಿವೆ. ಈ ಜನ್ಮದಲ್ಲಿ ಮಾಡಿದ ಪಾಪ ಪುಣ್ಯ ಮುಂತಾದ ಕರ್ಮಗಳಿಗೆ ತಕ್ಕಂತೆ ಮುಂದಿನ ಜನ್ಮದಲ್ಲಿ ಫಲ ನಿಗದಿಯಾಗಿರುತ್ತದೆ ಎಂಬುದನ್ನು ಅನೇಕರು ನಂಬುತ್ತಾರೆ. ಆದರೆ ಎಲ್ಲಾ ಐಷಾರಾಮಿ ಜೀವನವನ್ನು ತೊರೆದು ಕೇವಲ ಮಂತ್ರಗಳನ್ನು ಪಠಿಸುತ್ತಾ ಸನ್ಯಾಸಿಯಾಗಿ ಬದಲಾಗುವುದು ಅತೀ ಅಪರೂಪ. ಈ ಬಗ್ಗೆ ನಿಮಗೇನನಿಸುತ್ತೆ ಕಾಮೆಂಟ್ ಮಾಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು