
ಒಂದು ಮದುವೆ ಮಾಡೋದಿಕೆ ಮನೆ ಮಂದಿ ಸಾಕಷ್ಟು ಕಷ್ಟಪಡುತ್ತಾರೆ. ಮದ್ವೆ ಮಾಡಬೇಕು ಎಂದು ಪ್ಲಾನ್ ಮಾಡಿದಾಗ ಬರುವ ಎಡರು ತೊಡರುಗಳು ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಮದ್ವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂಬ ಗಾದೆ ಮಾತಿದೆ. ಮದುವೆಗೆ ಬರುವ ಹೋಗುವ ನೆಂಟರನ್ನು ಸುಧಾರಿಸುವುದೇ ಒಂದು ದೊಡ್ಡ ಸಾಹಸ. ಇದರ ಜೊತೆಗೆ ಅಡುಗೆ ಡೆಕೋರೇಷನ್ ಬಂಧು ಬಳಗಕ್ಕೆ ಆಮಂತ್ರಣ ನೀಡಬೇಕು ಇಷ್ಟೆಲ್ಲಾ ಮಾಡಿ ಮದುವೆ ಮಾಡಿದ ನಂತರವೂ ಜನ ಏನಾದರೊಂದು ಕೊಂಕು ಹೇಳಿ ಹೋಗೋದು ಇದ್ದೇ ಇದೆ. ಇಷ್ಟೊಂದು ದೊಡ್ಡ ಕಾರ್ಯಕ್ರಮವನ್ನು ಮಾಡಿದಾಗ ಹೆಚ್ಚು ಕಡಿಮೆ ಆಗಿಯೇ ಆಗುತ್ತದೆ. ಕೆಲವೊಮ್ಮೆ ಊಹಿಸಿದಕ್ಕಿಂತಲೂ ಹೆಚ್ಚಿನ ಜನ ಬರ್ತಾರೆ. ಅತಿಥಿಗಳಿಗೆ ಎಂದು ಮಾಡಿದ ಅಡುಗೆಯಲ್ಲಿ ಹೆಚ್ಚು ಕಡಿಮೆ ಆಗುತ್ತದೆ ಕೊನೆ ಕೊನೆಗೆ ಬಂದವರಿಗೆ ಆಹಾರವೇ ಸಿಗುವುದಿಲ್ಲ. ಹೀಗೆ ಏನೇನೋ ಆಗುತ್ತದೆ. ಆದರೆ ಬಹುತೇಕ ಮದುವೆಗಳಲ್ಲಿ ನೆಂಟರು ಬಂಧುಗಳು ಸುಧಾರಿಸಿಕೊಂಡು ಹೋಗುತ್ತಾರೆ. ಮದ್ವೆ ಮನೆಯವರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಕಡೆ ಮದ್ವೆ ಮನೆಯಲ್ಲಿ ರಸಗುಲ್ಲಾ ಖಾಲಿ ಆಯ್ತು ಎಂದು ದೊಡ್ಡ ರಣರಂಗವೇ ನಡೆದಿದೆ.
ಹೌದು ಬಿಹಾರದ ಬುದ್ಧಗಯಾದಲ್ಲಿ ಈ ಗಟನೆ ನಡೆದಿದೆ. ಮದುವೆಗೆ ಮಾಡಿದ ಸಿಹಿತಿನಿಸು ರಸಗುಲ್ಲಾ ಕಡಿಮೆ ಆಯ್ತು ಎಂಬ ಕಾರಣಕ್ಕೆ ಹುಡುಗನ ಮನೆಯವರು ಮದುವೆ ಮನೆಯಲ್ಲಿ ದೊಡ್ಡ ಹೋರಾಟವನ್ನೇ ಮಾಡಿದ್ದಾರೆ. ಮದ್ವೆಗೆ ಬಂದಿದ್ದ ಅತಿಥಿಗಳ ಗಲಾಟೆಯಿಂದಾಗಿ ಮದ್ವೆ ಮನೆ ರಸ್ಲಿಂಗ್ ಸ್ಟೇಜ್ ಆಗಿ ಬದಲಾಗಿದ್ದು, ಅನೇಕರು ಪರಸ್ಪರ ಕುರ್ಚಿಗಳನ್ನು ಎತ್ತಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಹಲವು ಕುರ್ಚಿಗಳನ್ನು ಮುರಿದು ಹಾಕಿ ಕಿತ್ತಾಡಿದ್ದಾರೆ.
ಮದುವೆ ಹಾಲ್‌ನಲ್ಲಿ ಹಾಕಿದ್ದ ಸಿಸಿ ಕ್ಯಾಮರಾದಲ್ಲಿ ಈ ಹೊಡೆದಾಟದ ದೃಶ್ಯಗಳು ಸೆರೆ ಆಗಿದ್ದು, ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಅಥಿತಿಗಳಿಗೆ ಅಡುಗೆಯನ್ನು ಬಳಸುವುದಕ್ಕೆ ಸಾಲಾಗಿ ಇರಿಸಲಾಗಿದ್ದು, ಈ ವೇಳೆ ಈ ಊಟದ ಹಾಲ್‌ಗೆ ಕೈಗಳಲ್ಲಿ ಕುರ್ಚಿಯನ್ನು ಹಿಡಿದುಕೊಂಡು ಮುನ್ನುಗುವ ಯುವಕರು ಅಲ್ಲಿ ಆಹಾರ ಬಡಿಸುತ್ತಿದ್ದವರ ಮೇಲೆ ಮೊದಲಿಗೆ ಹಲ್ಲೆ ನಡೆಸುತ್ತಾರೆ. ಅಲ್ಲದೇ ಅಲ್ಲಿದ್ದ ಆಹಾರದ ಪಾತ್ರಗಳಿಂದಲೂ ಜನ ಪರಸ್ಪರ ಹೊಡೆದಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಕೆಲ ವರದಿಗಳ ಪ್ರಕಾರ ಈ ಘಟನೆಯಿಂದಾಗಿ ಮದ್ವೆಯೇ ನಿಂತು ಹೋಗಿದೆ ಎಂದು ವರದಿಯಾಗಿದೆ. ಎರಡೂ ಕಡೆಯವರು ಪರಸ್ಪರ ಕುರ್ಚಿಗಳಿಂದ ಹೊಡೆದಾಡಿದ್ದಾರೆ. ಅಲ್ಲದೇ ಪರಸ್ಪರರನ್ನು ಕೈಗಳಿಂದ ನೂಕುತ್ತಾ ನೂಕಾಟ ತಳ್ಳಾಟ ನಡೆದಿದೆ. ನವೆಂಬರ್ 29ರಂದು ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಈಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಬಂಧನವಾಗಿಲ್ಲ, ಹಾಗೂ ಪ್ರಕರಣವೂ ದಾಖಲಾಗಿಲ್ಲ ಎಂದು ವರದಿಯಾಗಿದೆ. ವೀಡಿಯೋಗೆ ಹಲವು ಕಾಮೆಂಟ್ ಬಂದಿದೆ. ಕೇವಲ ರಸಗುಲ್ಲಾ ಖಾಲಿ ಆಯ್ತು ಎಂದು ಮದ್ವೆ ಮುರಿದು ಬಿದ್ದಿದೆ ಎಂದರೆ ಇದೊಂದು ವಿಚಿತ್ರ ಘಟನೆ, ನನ್ನ ದೇಶ ನನಗೆ ವಿಭಿನ್ನ ರೀತಿಯಲ್ಲಿ ಅಚ್ಚರಿ ನೀಡುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ