
ಪಟನಾ (ಏ.14): ಹಿಂದಿ ಭಾಷಿಕ ಪ್ರದೇಶಗಳ ಪೈಕಿ ಇದುವರೆಗೂ ಬಿಜೆಪಿ ಮುಖ್ಯಮಂತ್ರಿ ಕಾಣದ ಏಕೈಕ ರಾಜ್ಯವಾಗಿದ್ದ ಬಿಹಾರ, ಮಂಗಳವಾರ ಮೊದಲ ಬಿಜೆಪಿ ಮುಖ್ಯಮಂತ್ರಿ ಆಯ್ಕೆಗೆ ಸಾಕ್ಷಿಯಾಗಲಿದೆ. ಹಾಲಿ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಬಳಿಕ ಸರ್ಕಾರದ ನೇತೃತ್ವವನ್ನು ಬಿಜೆಪಿ ಮೊದಲ ಬಾರಿಗೆ ವಹಿಸಿಕೊಳ್ಳಲಿದೆ. ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿತೀಶ್ ಕುಮಾರ್ ಮಂಗಳವಾರ ಬೆಳಗ್ಗೆ 11 ಗಂಟೆಗೆ ತಮ್ಮ ಸಂಪುಟದ ಸಭೆ ಕರೆದಿದ್ದು, ಅಲ್ಲಿ ತಮ್ಮ ರಾಜೀನಾಮೆ ಪ್ರಕಟಿಸಲಿದ್ದಾರೆ. ಬಳಿಕ ರಾಜ್ಯಪಾಲರ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ.
ನಿತೀಶ್ ರಾಜೀನಾಮೆ ಬಳಿಕ ಮಧ್ಯಾಹ್ನ 4 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ಪಕ್ಷ ತನ್ನ ನೂತನ ಆಯ್ಕೆ ಮಾಡಲಿದೆ. ಬಳಿಕ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ನೂತನ ಸಿಎಂ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಸಿಎಂ ಹುದ್ದೆ ರೇಸ್‌ನಲ್ಲಿ ಸಾಮ್ರಾಟ್ ಚೌಧರಿ ಮುಂಚೂಣಿಯಲ್ಲಿದ್ದಾರೆ. ಆದರೆ ಚೌಧರಿ ಮೂಲ ಬಿಜೆಪಿಗರಲ್ಲ. ಆರ್‌ಜೆಡಿ, ಜೆಡಿಯು ಸುತ್ತಿ ಬಂದವರು. ರೇಸ್‌ನಲ್ಲಿರುವ ಮತ್ತೊಬ್ಬರು ಕೇಂದ್ರ ಸಚಿವ ನಿತ್ಯಾನಂದ್ ರೈ. ಎಬಿವಿಪಿ ಮೂಲಕ ರಾಜಕೀಯ ಪ್ರವೇಶಿಸಿ, ರಾಮಜನ್ಮಭೂಮಿ ಹೋರಾಟ ಮೂಲಕ ಮುನ್ನೆಲೆಗೆ ಬಂದವರು. 2019ರಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವವರೆಗೂ ಅವರು ಬಿಹಾರ ಬಿಜೆಪಿಯ ನೇತೃತ್ವವಹಿಸಿದ್ದರು.
ಬಿಜೆಪಿ ಮೂಲಗಳ ಪ್ರಕಾರ ಹೊಸ ಮುಖ್ಯಮಂತ್ರಿ ಒಬಿಸಿ ಅಥವಾ ದಲಿತ ಸಮುದಾಯದವರೇ ಆಗಿರಲಿದ್ದಾರೆ.
ಈ ಹಿಂದೆ ಬಿಜೆಪಿ- ಜೆಡಿಯು ನಡುವೆ ಆದ ಒಪ್ಪಂದ ಅನ್ವಯ, ಬಿಜೆಪಿಗೆ ಸಿಎಂ ಸ್ಥಾನ ಸಿಗಲಿದ್ದು, ನಿತೀಶ್ ಅವರ ಪುತ್ರ ಉಪಮುಖ್ಯಮಂತ್ರಿ ಪಟ್ಟ ಏರುವ ಸಾಧ್ಯತೆ ಇದೆ. 243 ಸದಸ್ಯ ಸ್ಥಾನದ ಬಿಹಾರ ಅಸೆಂಬ್ಲಿಯಲ್ಲಿ ಬಿಜೆಪಿ 89, ಜೆಡಿಯು 85 ಮತ್ತು ಇತರೆ ಪಕ್ಷಗಳು ಸೇರಿ ಎನ್‌ಡಿಎ ಮೈತ್ರಿಕೂಟ ಒಟ್ಟಾರೆ 202 ಸ್ಥಾನಗಳ ಸ್ಪಷ್ಟಬಹುಮತ ಹೊಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ