
ನವದೆಹಲಿ (ನ.09) ಕ್ಯಾನ್ಸರ್ ಅತ್ಯಂತ ಅಪಾಯಕಾರಿ ಕಾಯಿಲೆ. ಆರಂಭಿಕ ಹಂತದಲ್ಲಿ ಯಾವ ಸುಳಿವು ನೀಡುವುದಿಲ್ಲ, ಸುಳಿವು ಸಿಕ್ಕಾಗ ಸಮಯ ಮೀರಿರುತ್ತದೆ. ಇದೀಗ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ರೋಗಿಗಳಿಗೆ ಕೇಂದ್ರ ಸರ್ಕಾರ ಔಷಧಿ ಬೆಲೆ ಕಡಿತಗೊಳಿಸಿ ನೆರವಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಗಿಡಮೂಲಿಕೆ ಮತ್ತು ಔಷಧೀಯ ಪ್ರಾಧಿಕಾರ (NPPA) ಇಂದಿನಿಂದ ಜಾರಿಗೆ ಬರುವಂತೆ ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಔಷಧಿಗಳ ಬೆಲೆ ಭಾರಿ ಕಡಿತಗೊಳಿಸಿದೆ. 40,421 ರೂಪಾಯಿ ಬೆಲೆಯ ಔಷಧಿ ಈಗ ಕೇವಲ 2,720 ರೂಪಾಯಿಗೆ ಲಭ್ಯವಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಕ್ಯಾನ್ಸರ್ ಔಷಧಿಗಳ ಮೇಲಿನ ದುಬಾರಿ ಬೆಲೆ ಕುರಿತು ಪ್ರಶ್ನಿಸಿತ್ತು. ಅಜಗಜಾಂತರ ವ್ಯತ್ಯಾಸಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕರಾ ಲಾಭಾಂಶ ಮಿತಿಯನ್ು ಶೇಕಡಾ 30ಕ್ಕೆ ನಿಗದಿಪಡಿಸಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಶೇಕಡಾ 70 ರಿಂದ ಶೇಕಡಾ 96ರಷ್ಟು ಇಳಿಕೆಯಾಗಿದೆ.
ಕ್ಯಾನ್ಸರ್ ರೋಗಿಗಳು ಪ್ರತಿ ತಿಂಗಳು ಸಾವಿರಾರು ರೂಪಾಯಿ ಔಷಧಿಗಳನ್ನು ಖರೀದಿಸುತ್ತಾರೆ. ಆದರೆ ಕ್ಯಾನ್ಸರ್ ಔಷಧಿಗಳ ಬೆಲೆ ದುಬಾರಿಯಾಗಿದೆ. ಇದೀಗ ಬೆಲೆ ಇಳಿಕೆಯಿಂದ ವಾರ್ಷಿಕವಾಗಿ ಗ್ರಾಹಕರ ಒಟ್ಟು ಮೊತ್ತದಲ್ಲಿ ಬರೋಬ್ಬರಿ 3500 ಕೋಟಿ ರೂಪಾಯಿ ಉಳಿತಾಯವಾಗಲಿದೆ.ಇದು ರೋಗಿಗಳ ಚಿಕಿತ್ಸೆಗೆ ನೆರವು ನೀಡುತ್ತಿರುವ ಕುಟುಂಬಕ್ಕೂ ನೆರವಾಗಲಿದೆ. ಉತ್ತಮ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿದೆ.
ಹಲವು ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ ನೆಮ್ಮದಿಗೆ ಕಾರಣವಾಗಿದೆ. ಈ ಪೈಕಿ ಬೆವಾಸಿಕುಮಾಬ್ 100 ಎಂಜಿ ಇಂಜೆಕ್ಷನ್ (ಶ್ವಾಸಕೋಶ, ಕರುಳು ಮತ್ತು ಗರ್ಭಕೋಶ ಕ್ಯಾನ್ಸರ್) ನೀಡುವ ಜೈಡಸ್ ಲೈಫ್‌ಸೈನ್ಸಸ್‌ನ ‘ಬ್ರೈಕ್ಸ್ಟಾ’ (Bryxta) ಬೆಲೆ 25,995 ರೂಪಾಯಿ ಆಗಿತ್ತು. ಆದರೆ ಹೊಸ ನೀತಿಯಿಂದ ಇದೀಗ 3,318 ರೂಪಾಯಿಗೆ ಇಳಿಕೆಯಾಗಿದೆ.
ರಿಲಯನ್ಸ್ ಲೈಫ್ ಸೈನ್ಸಸ್‌ನ ‘ಬೆವಾಸಿಸುರೆಲ್’ (BevaciRel): ಮೆಡಿಸಿನ್ ಹಳೆಯ ದರ 24,079 ರೂಪಾಯಿ ಆಗಿತ್ತು. ಇದೀಗ ಕೇವಲ 3,985 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಡೆನೋಸುಮಾಬ್ 60 ಎಂಜಿ ಇಂಜೆಕ್ಷನ್ (ಸ್ತನ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್)ಗೆ ನೀಡುವ ರಿಲಯನ್ಸ್‌ನ ‘ಡೆನೋಸ್ಟಿಯೋರೆಲ್’ (DenOsteoRel): ಔಷಧಿ ಬೆಲೆ 24,955 ರೂಪಾಯಿ ಆಗಿತ್ತು. ಇದೀಗ ಹೊಸ ಬೆಲೆ 6,240 ರೂಪಾಯಿ ಆಗಿದೆ. ಇನ್ನು ಅಬಿರಾಟೆರೋನ್ ಅಸಿಟೇಟ್ 250 ಎಂಜಿ ಟ್ಯಾಬ್ಲೆಟ್ (ಪ್ರೊಸ್ಟೇಟ್ ಕ್ಯಾನ್ಸರ್)ಗೆ ನೀಡುವ ಅರ್ವಿನ್‌ಕೇರ್ ಫಾರ್ಮಾದ ‘ಅಬಿರಾನ್’ (ABIRONE): ಹಳೆಯ ಬೆಲೆ 41,250 ರೂಪಾಯಿಯಿಂದಇಂದಿನಿಂದ 5,768 ರೂಪಾಯಿಗೆ ಲಭ್ಯವಿದೆ. ಫುಲ್ವೆಸ್ಟ್ರಾಂಟ್ 250 ಎಂಜಿ ಇಂಜೆಕ್ಷನ್ (ಸ್ತನ ಕ್ಯಾನ್ಸರ್): ನೀಡುವ ಎರಿಸ್ ಲೈಫ್‌ಸೈನ್ಸಸ್‌ನ ‘ಫಾಸ್ನಾರ್ಮ್’ (FASNORM) ಹಿಂದಿನ ಬೆಲೆ ಬೆಲೆ 30,421 ರೂಪಾಯಿ, ಇದೀಗ 3,900 ರೂಪಾಯಿ ಆಗಿದೆ. ಪೆಮೆಟ್ರೆಕ್ಸೆಡ್ 500 ಎಂಜಿ ಇಂಜೆಕ್ಷನ್ (ಶ್ವಾಸಕೋಶ ಕ್ಯಾನ್ಸರ್)ಗೆ ನೀಡುವ ರಿಲಯನ್ಸ್‌ನ ‘ರೆಲಿಟ್ರೆಕ್ಸೆಡ್’ (ReliTrexed): ಹಳೆಯ ದರ 9,977 ರೂಪಾಯಿ, ಇದೀಗ 1,113 ರೂಪಾಯಿಗೆ ಇಳಿಕೆಯಾಗಿದೆ.
ನವೆಂಬರ್ 9 ರಿಂದ ಎಲ್ಲಾ ಮೆಡಿಕಲ್ ಶಾಪ್, ಫಾರ್ಮಸಿ ಹಾಗೂ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಡ್ರಗ್ಸ್ ನಿಯಮಕ್ಕೆ ಅನುಸಾರವಾಗಿ ಮಾರಾಟ ಮಾಡಬೇಕು. ದರ ಪಟ್ಟಿಯನ್ನು ಪ್ರಕಟಿಸಬೇಕು. ಇಷ್ಟೇ ಅಲ್ಲ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ