
ಭಾರತದ ರಾಜಕೀಯ ಅಖಾಡದಲ್ಲಿ 2027ರ ವಿಧಾನಸಭಾ ಚುನಾವಣೆಗಳ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಕೆಲ ಸಮೀಕ್ಷೆ, ಕೆಲ ವರದಿಗಳ ಪ್ರಕಾರ, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳ ಇಂಟರ್ನಲ್ಲ ಟೆಕ್ನಿಕಲ್ ರೂಟ್ಸ್ ಪ್ರಮುಖ ಚುನಾವಣಾ ಮುಖ್ಯಾಂಶವಾಗಿ ಹೊರಹೊಮ್ಮಿವೆ. ಒಂದೆಡೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತನ್ನ ರಾಷ್ಟ್ರೀಯ ಮತ್ತು ರಾಜ್ಯ ನಾಯಕತ್ವದ ನಡುವೆ ಅಭೇದ್ಯ ಒಗ್ಗಟ್ಟು ಹಾಗೂ ಬೂತ್ ಮಟ್ಟದ ಸಂಘಟನಾತ್ಮಕ ಬೆಸುಗೆ ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ಆಂತರಿಕ ಬಣ ರಾಜಕೀಯ, ನಾಯಕತ್ವದ ಅಭಾವ ಹಾಗೂ ಸೀಟು ಹಂಚಿಕೆ ಗೊಂದಲಗಳಿಂದಾಗಿ ಎರಡೂ ರಾಜ್ಯಗಳಲ್ಲಿ 'ನಾಮಕಾವಾಸ್ತೆ' ಸ್ಥಿತಿಗೆ ತಲುಪಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ
ಉತ್ತರ ಪ್ರದೇಶದಲ್ಲಿ 2027ರ ಚುನಾವಣಾ ಸಮರಕ್ಕೆ ಬಿಜೆಪಿ ತನ್ನ ಅತ್ಯಂತ ಪ್ರಬಲವಾದ ತಂತ್ರಗಾರಿಕೆ ರೂಪಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಡುವಿನ ಸಮನ್ವಯತೆ ಪಕ್ಷಕ್ಕೆ ದೊಡ್ಡ ಶಕ್ತಿ ನೀಡಿದೆ. ಲಖನೌ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮಿಸಿದ ತಕ್ಷಣವೇ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ 45 ನಿಮಿಷಗಳ ಕಾಲ ಸುದೀರ್ಘವಾದ ಏಕಾಂತ ಚರ್ಚೆ ನಡೆಸಿರುವುದು ಉಭಯ ನಾಯಕರ ನಡುವಿನ ರಾಜಕೀಯ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.
ಲಖನೌನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಯೋಗಿ ಆದಿತ್ಯನಾಥ್ ಸರ್ಕಾರದ ಯೋಜನೆಗಳು ಮತ್ತು ಜಾರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಕರೆ ನೀಡಿದ ಅವರು, ಕಾರ್ಯಕರ್ತರಲ್ಲಿ ಏನಾದರೂ ಸಣ್ಣಪುಟ್ಟ ಅಸಮಾಧಾನಗಳಿದ್ದರೆ ಅದನ್ನು ಲಖನೌದ ಗೋಮತಿ ನದಿಗೆ ಹೋಗಿ ಎಸೆದುಬಿಡಿ. ಬಿಜೆಪಿ ಅಸಂಖ್ಯಾತ ಕಾರ್ಯಕರ್ತರ ಶಕ್ತಿಯೊಂದಿಗೆ ಅಂಗದನ ಕಾಲಿನಂತೆ ಭದ್ರವಾಗಿ ಜಮಾಯಿಸಿದೆ. 2027ರ ಯುಪಿ ಚುನಾವಣೆ ಮತ್ತು 2029ರ ಲೋಕಸಭಾ ಚುನಾವಣೆಗಳೆರಡರಲ್ಲೂ ಬಿಜೆಪಿಯೇ ಅತ್ಯಂತ ಭರ್ಜರಿ ಜಯ ಸಾಧಿಸಲಿದೆ"ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಬ್ರಿಟಿಷ್ ಪತ್ರಿಕೆ 'ಫೈನಾನ್ಷಿಯಲ್ ಟೈಮ್ಸ್' ಯೋಗಿ ಆದಿತ್ಯನಾಥ್ ಅವರ ಕುರಿತು "ದ ಮಂಕ್ ಹೂ ಕ್ಯಾನ್ ಬಿಕಮ್ ಪಿಎಂ"(ಪ್ರಧಾನಿಯಾಗಬಲ್ಲ ಸನ್ಯಾಸಿ) ಎಂದು ಪ್ರಕಟಿಸಿರುವುದು ಅವರ ರಾಷ್ಟ್ರೀಯ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ
ಗೋರಖ್ಪುರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಕೋರ್ ಕಮಿಟಿ ಸಭೆಯು ಯುಪಿ ಬಿಜೆಪಿಯ ಆಂತರಿಕ ಒಗ್ಗಟ್ಟನ್ನು ಬಹಿರಂಗಪಡಿಸಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್, ಯುಪಿ ಉಸ್ತುವಾರಿ ವಿನೋದ್ ತಾವ್ಡೆ ಹಾಗೂ ಸಚಿವರಾದ ಜೆಪಿಎಸ್ ರಾಠೋಡ್ ಮತ್ತು ಸ್ವತಂತ್ರ ದೇವ್ ಸಿಂಗ್ ಭಾಗವಹಿಸಿ ಚುನಾವಣಾ ಕಾರ್ಯತಂತ್ರವನ್ನು ಆಖೈರುಗೊಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ನಾಯಕತ್ವದ ನಡುವೆ ಸಂಪೂರ್ಣ ಸಮನ್ವಯ ಸಾಧಿಸುವುದು ಹಾಗೂ 'ಕಾನೂನು ಮತ್ತು ಸುವ್ಯವಸ್ಥೆ' ಆಧಾರಿತ ಪ್ರಚಾರವನ್ನು ಮುನ್ನೆಲೆಗೆ ತರುವುದು ಈ ಸಭೆಯ ನಿರ್ಣಯ ಎನ್ನುವುದನ್ನು ಬಿಜೆಪಿ ಪ್ರದರ್ಶಿಸಿದಂತೆ ಇತ್ತು. ನಿತಿನ್ ನವೀನ್ ಗೋರಖ್ಪುರ ಕೋರ್ ಕಮಿಟಿ ಸಭೆ ನಡೆಸಿ ಪಕ್ಷದ ಎಲ್ಲಾ ಪ್ರಮುಖ ನಾಯಕರನ್ನು ಒಂದೇ ವೇದಿಕೆಗೆ ತಂದು ಒಗ್ಗಟ್ಟಿನ ಸಂದೇಶ ನೀಡುವುದು ಈ ಸಭೆಯ ಒಂದು ಭಾಗವಾಗಿದ್ದನ್ನು ನೋಡಿರಬಹುದು.
10 ವರ್ಷಗಳ ಆಡಳಿತ ವಿರೋಧಿ ಅಲೆ ಶಮನಗೊಳಿಸಲು ಬಿಜೆಪಿ ಯುಪಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಹಾಲಿ ಶಾಸಕರ ಟಿಕೆಟ್ ರದ್ದುಗೊಳಿಸಿ ಹೊಸ ಮುಖಗಳಿಗೆ ಅವಕಾಶ ನೀಡಲು ಸಿದ್ಧತೆ ನಡೆಸಿದೆ. ಮತ್ತೊಂದೆಡೆ, ವಿರೋಧ ಪಕ್ಷವಾದ ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ತೀವ್ರ ಗೊಂದಲಕ್ಕೆ ಈಡಾಗಿದೆ. ಕಾಂಗ್ರೆಸ್ ಪಕ್ಷವು 100ರಿಂದ 180 ಸೀಟುಗಳಿಗೆ ಪಟ್ಟು ಹಿಡಿದಿದ್ದರೆ, ಅಖಿಲೇಶ್ ಯಾದವ್ ಕೇವಲ 46ರಿಂದ 56 ಸೀಟುಗಳನ್ನು ನೀಡಲು ಒಪ್ಪಿದ್ದಾರೆ. ಇದೇ ವೇಳೆ ಸ್ವಾಮಿ ಪ್ರಸಾದ್ ಮೌರ್ಯ ಅವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿರುವುದು ಸಮಾಜವಾದಿ ಪಾರ್ಟಿಗೆ ಹಿನ್ನಡೆ ತಂದಿದೆ. ಮೈತ್ರಿಕೂಟದ ಆಂತರಿಕ ಬಿರುಕನ್ನು ಎತ್ತಿ ತೋರಿಸಿದೆ.
ಎಎಪಿ ಬಂಡಾಯ, ಬಿಜೆಪಿಗೆ ಪ್ರಮುಖ ನಾಯಕರ ಸೇರ್ಪಡೆ ಹಾಗೂ ಕಾಂಗ್ರೆಸ್ 'ನೋ ಸಿಎಂ ಫೇಸ್' ಗೊಂದಲ ನಿರ್ಮಾಣವಾದರೆ, ಪಂಜಾಬ್ ರಾಜಕೀಯದಲ್ಲೂ ಬಿಜೆಪಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುತ್ತಿದ್ದು, ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಕೊಂಚ ಹಿನ್ನಡೆ ಎದುರಿಸುತ್ತಿದೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ 94 ಶಾಸಕರನ್ನು ಹೊಂದಿರುವ ಎಎಪಿ ಸರ್ಕಾರವು ಡ್ರಗ್ಸ್ ಮಾಫಿಯಾ, ಗ್ಯಾಂಗ್ಸ್ಟರ್ಗಳ ಹಾವಳಿ ಹಾಗೂ ದೆಹಲಿಯಿಂದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರ ಹಸ್ತಕ್ಷೇಪದ ಆರೋಪಗಳಿಂದಾಗಿ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಪರಿಣಾಮವಾಗಿ, ಎಎಪಿಯ ಶೇಕಡಾ 50ರಷ್ಟು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಭೀತಿಯಲ್ಲಿ ಬಂಡಾಯ ಭುಗಿಲೆದ್ದಿದೆ.
ಎಎಪಿಯಿಂದ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಮೂವರು ಪ್ರಮುಖ ಶಾಸಕರು ಪಂಜಾಬ್ನಲ್ಲಿ ಬಿಜೆಪಿಯ ಸಂಘಟನಾ ಬಲವನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಕುಂವರ ವಿಜಯ್ ಪ್ರತಾಪ್ ಸಿಂಗ್ ಮೊದಲಿಗರು. 2015ರ ಗುರು ಗ್ರಂಥ ಸಾಹಿಬ್ ಜಿ ಬೆಅದಬಿ ಮತ್ತು ಕೋಟ್ ಕಪೂರಾ ಪೊಲೀಸ್ ಗುಂಡಿನ ಚಕಮಕಿ ಪ್ರಕರಣದ ತನಿಖೆ ನಡೆಸಿದ್ದ ಮಾಜಿ ಐಪಿಎಸ್ ಅಧಿಕಾರಿ. 2022ರಲ್ಲಿ ಎಎಪಿಯ ಪೋಸ್ಟರ್ ಬಾಯ್ ಆಗಿದ್ದ ಇವರು, ತನಿಖೆಗೆ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ ಬಿಜೆಪಿ ಸೇರಿದ್ದಾರೆ. ಎರನೇಯದ್ದಾಗಿ, ಹರ್ಮೀತ್ ಸಿಂಗ್ ಪಠಾಣ್ಮಾಜ್ರಾ. ಸಿಎಂ ಭಗವಂತ್ ಮಾನ್ ಅವರ ಪತ್ನಿ ಡಾ. ಗುರುಪ್ರೀತ್ ಕೌರ್ ಅವರ ನಿಕಟ ಸಂಬಂಧಿಯಾಗಿದ್ದು, ಎಎಪಿ ತ್ಯಜಿಸಿ ಬಿಜೆಪಿ ತಂಗುದಾಣ ತಲುಪಿದ್ದಾರೆ. ಮೂರನೇಯದ್ದಾಗಿ, ಮಾಜಿ ಆರೋಗ್ಯ ಸಚಿವರಾಗಿದ್ದ ಇವರು ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಜ್ ಬಹಾದ್ದೂರ್ ಪ್ರಸಂಗದ ನಂತರ ಸಚಿವ ಸ್ಥಾನ ಕಳೆದುಕೊಂಡು ಈಗ ಬಿಜೆಪಿ ಪಾಲಾಗಿದ್ದಾರ.
ಪಂಜಾಬ್ ಕಾಂಗ್ರೆಸ್ ಕಳೆದ 25ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯ ಮುಖವಿಲ್ಲದೆ ಅಖಾಡಕ್ಕಿಳಿಯುತ್ತಿದೆ. ಪಂಜಾಬ್ ಕಾಂಗ್ರೆಸ್ನಲ್ಲಿ ಮಾಜಿ ಉಸ್ತುವಾರಿ ಭೋಪೇಶ್ ಬಘೇಲ್ ಅವರು ಮಾಜಿ ಅಧ್ಯಕ್ಷ ರಾಜಾ ವಡಿಂಗ್ ಪರವಾಗಿ ಪಕ್ಷಪಾತಿಯಾಗಿದ್ದರೆಂಬ ಆರೋಪ ಕೇಳಿಬಂದ ನಂತರ ಸಚಿನ್ ಪೈಲಟ್ ಅವರನ್ನು ನೂತನ ಉಸ್ತುವಾರಿಯನ್ನಾಗಿ ತರಲಾಗಿದೆ. ರಾಜಾ ವಡಿಂಗ್ ಅವರನ್ನು ತೆರವುಗೊಳಿಸಿ ಮಾಜಿ ಹಾಕಿ ತಂಡದ ನಾಯಕ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಪ್ರಗಟ್ ಸಿಂಗ್ ಅವರನ್ನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅಲ್ಲದೇ ಮಾಜಿ ಸಿಎಂ ಚರಣ್ಜಿತ್ ಸಿಂಗ್ ಚನ್ನಿ, ಸುಖ್ಜಿಂದರ್ ಸಿಂಗ್ ರಂಧಾವಾ ಮತ್ತು ರಾಜಾ ವಡಿಂಗ್ ಬಣಗಳ ನಡುವಿನ ಆಂತರಿಕ ತಿಕ್ಕಾಟ ಮುಂದುವರಿದಿದೆ. ರಾಹುಲ್ ಗಾಂಧಿ ಸಂಗ್ರೂರ್ ರ್ಯಾಲಿ ನಡೆಸಿದರೂ ಕಾಂಗ್ರೆಸ್ನ ಆಂತರಿಕ ಬಿರುಕುಗಳನ್ನು ಮುಚ್ಚಲು ಸಾಧ್ಯವಾಗಿಲ್ಲ.
ಇದಕ್ಕೆ ಪ್ರತಿಯಾಗಿ, ಪಂಜಾಬ್ನಲ್ಲಿ ಶೇಕಡಾ 57 ರಷ್ಟಿರುವ ಸಿಖ್ ಮತದಾರರು ಮತ್ತು ಸೌಹಾರ್ದಯುತ ಸಮಾಜವನ್ನು ಒಗೂಡಿಸಲು ಬಿಜೆಪಿ ರಾಷ್ಟ್ರೀಯ ನಾಯಕತ್ವವು ಶಿರೋಮಣಿ ಅಕಾಲಿ ದಳದ (SAD) ಸುಖ್ಬೀರ್ ಸಿಂಗ್ ಬಾದಲ್ ಅವರೊಂದಿಗೆ ಮೈತ್ರಿ ಮಾತುಕತೆಗಳನ್ನು ಚುರುಕುಗೊಳಿಸಿದೆ. ಬಿಜೆಪಿಯ ಸತೀಶ್ ಪುನಿಯಾ ಮತ್ತು ಅಮಿತ್ ಶಾ ಅವರು ಅಕಾಲಿ ದಳದ ಜೊತೆ ಮೈತ್ರಿ ಅಂತಿಮಗೊಳಿಸಲು ಶ್ರಮಿಸುತ್ತಿದ್ದು, ಪಂಜಾಬ್ನ ನಗರ ಮತ್ತು ಗ್ರಾಮೀಣ ಮತಬ್ಯಾಂಕ್ಗಳನ್ನು ಬಿಜೆಪಿ ಧ್ರುವೀಕರಿಸುತ್ತಿದೆ.ಉತ್ತರ ಪ್ರದೇಶದಲ್ಲಿ ಅಮಿತ್ ಶಾ - ಯೋಗಿ ಆದಿತ್ಯನಾಥ್ ಜೋಡಿಯ ಕಟ್ಟುನಿಟ್ಟಿನ ನಾಯಕತ್ವ, ಕಾನೂನು-ಸುವ್ಯವಸ್ಥೆ ಆದ್ಯತೆ ಹಾಗೂ 100ಕ್ಕೂ ಹೆಚ್ಚು ಹೊಸ ಅಭ್ಯರ್ಥಿಗಳ ಸ್ಪರ್ಧೆ ಬಿಜೆಪಿಗೆ ಸ್ಪಷ್ಟ ಮೇಲುಗೈ ತಂದುಕೊಡುತ್ತಿದೆ. ಪಂಜಾಬ್ನಲ್ಲಿ ಎಎಪಿಯ ಭ್ರಷ್ಟಾಚಾರ ಮತ್ತು ಬಂಡಾಯದಿಂದಾಗಿ ಬಿಜೆಪಿ ಪ್ರಮುಖ ರಾಜಕೀಯ ಕೇಂದ್ರವಾಗಿ ಬೆಳೆಯುತ್ತಿದ್ದರೆ, ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಬಣ ರಾಜಕೀಯ ಹಾಗೂ ಕಟ್ಟುನಿಟ್ಟಾದ ನಾಯಕತ್ವದ ಅಭಾವದಿಂದಾಗಿ ಕೇವಲ ನಾಮಕಾವಾಸ್ತೆ ಪಕ್ಷವಾಗಿ ಉಳಿದಿದೆ ಎಂದು ಕೆಲ ವರದಿಗಳು ಹೇಳುತ್ತಿವೆ. 2027ರ ಚುನಾವಣಾ ಸಮರದಲ್ಲಿ ಬಿಜೆಪಿಯ ಈ ಒಗ್ಗಟ್ಟಿನ ತಂತ್ರಗಾರಿಕೆ ವಿರೋಧ ಪಕ್ಷಗಳಿಗೆ ಭಾರಿ ಸವಾಲಾಗಿ ಪರಿಣಮಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ