
ಚೆನ್ನೈ/ನವದೆಹಲಿ: ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ವಿರುದ್ಧ ತಮಿಳುನಾಡಿನಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಯ ಹಿಂದೆ ಕ್ರಿಶ್ಚಿಯನ್ ಮಿಷನರಿಗಳಿಗೆ ಸೇರಿದ ಎನ್‌ಜಿಒಗಳ ಕೈವಾಡ ಇದೆ ಎಂದು ಅಣ್ಣಾಮಲೈ ಸಂದರ್ಶನವೊಂದರಲ್ಲಿ ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.
ಸೇಲಂ ಮೂಲದ ಸಾಮಾಜಿಕ ಕಾರ್ಯಕರ್ತ ವಿ. ಪಿಯೂಷ್ ಅವರು ಅಣ್ಣಾಮಲೈ ವಿರುದ್ಧ ಈ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ವಜಾ ಮಾಡುವಂತೆ ಮದ್ರಾಸ್ ಹೈಕೋರ್ಟ್‌ಗೆ ಅಣ್ಣಾಮಲೈ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಮದ್ರಾಸ್ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಣ್ಣಾಮಲೈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಸ್ಟೀಸ್ ಸಂಜೀವ ಖನ್ನಾ ಅವರಿದ್ದ ಏಕಸದಸ್ಯ ಪೀಠ ಪ್ರಕರಣಕ್ಕೆ ತಡೆ ನೀಡಿ ದೂರು ದಾಖಲಿಸಿದ ವಿ. ಪಿಯೂಷ್ ಅವರಿಗೆ ನೋಟಿಸ್ ನೀಡಿದ್ದಾರೆ. ಇವರ ಪರ ಹಿರಿಯ ವಕೀಲರಾದ ಸಿದ್ಧಾರ್ಥ್ ಲೂತ್ರಾ, ಎಂ.ಎ ಚಿನ್ನಸ್ವಾಮಿ ವಾದ ಮಂಡಿಸಿದ್ದರು.
ತಮಿಳುನಾಡಿನ ಹಲವು ನಾಯಕರು ಬಿಜೆಪಿಗೆ: ಎನ್‌ಡಿಎ ಜೊತೆ ಮತ್ತೆ ಮೈತ್ರಿಗೆ ಚಂದ್ರಬಾಬು ನಾಯ್ಡು ಒಲವು
ಸೇಲಂನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಅಣ್ಣಾಮಲೈ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಆಕ್ಟೋಬರ್ 2022ರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಣ್ಣಾಮಲೈ, ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧ ಮಾಡುವಂತೆ ಕ್ರಿಶ್ಚಿಯನ್ ಮಿಷನರಿಯೊಂದು ಸುಪ್ರೀಂಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದೆ ಎಂದು ಹೇಳಿದ್ದರು. ಈ ಬಗ್ಗೆ ವಿ. ಪಿಯೂಷ್ ಅವರ ದೂರಿನ ನಂತರ ತಮಿಳುನಾಡಿನ ಸೈಬರ್ ಪೊಲೀಸರು ಇದು ದ್ವೇಷದ ಮಾತು ಎಂಬ ಆರೋಪದಡಿ ಬರುವುದಿಲ್ಲ ಎಂದು ಹೇಳಿದ್ದರು. ಹಾಗಿದ್ದೂ ತಮಿಳುನಾಡಿನ ಸೇಲಂನ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರಕರಣ ದಾಖಲಿಸಿತ್ತು. ಮ್ಯಾಜಿಸ್ಟ್ರೇಟ್ ಅವರು ತಮಿಳುನಾಡು ಪೊಲೀಸರ ಸೈಬರ್ ಸೆಲ್‌ನ ಹೇಳಿಕೆಯ ನಂತರವೂ ಅಣ್ಣಾಮಲೈ ಅವರ ಸಂದರ್ಶನದ ವೀಡಿಯೋವನ್ನು ವೀಕ್ಷಿಸದೇ ಪಿಯೂಷ್ ಅವರ ದೂರನ್ನು ವಿಚಾರಣೆಗೆ ತೆಗೆದುಕೊಂಡಿದ್ದಾರೆ ಎಂದು ಮೇಲ್ಮನವಿಯಲ್ಲಿ ಅಣ್ಣಾಮಲೈ ಪರ ವಕೀಲರು ಹೇಳಿದ್ದರು.
ಅಣ್ಣಾಮಲೈ ತಮಿಳುನಾಡಿನ ಮುಖ್ಯಮಂತ್ರಿಯಾಗ್ತಾರೆ: ವಿನಯ್ ಗುರೂಜಿ
ತನ್ನ ವಿರುದ್ಧ ಯಾವುದೇ ಪ್ರಾಥಮಿಕ ಪ್ರಕರಣ ಇಲ್ಲ ಎಂಬ ಹಿಂದಿನ ಅವಲೋಕನಗಳ ಹೊರತಾಗಿಯೂ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ ಎಂದು ಅಣ್ಣಾಮಲೈ ಪರ ವಕೀಲರು ವಾದಿಸಿದರು. ಈ ವೀಡಿಯೋ ಸಂದರ್ಶನದ ನಂತರ ಸಾರ್ವಜನಿಕರಿಂದ ಯಾವುದೇ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತವಾದ ಬಗ್ಗೆ ಅಥವಾ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿಲ್ಲ ಎಂಬುದನ್ನು ಅವರು ಗಮನಿಸಿದರು. ಹೇಳಿಕೆಗಳ ಆಧಾರದ ಮೇಲೆ ಯಾವುದೇ ಸಾರ್ವಜನಿಕ ಅವ್ಯವಸ್ಥೆ ಅಥವಾ ಹಿಂಸಾಚಾರ ನಡೆದಿಲ್ಲ, ಹೈಕೋರ್ಟ್ ದ್ವೇಷದ ಭಾಷಣಕ್ಕಿಂತ ಹೆಚ್ಚು ಕುಂದು ಕೊರತೆಯನ್ನು ಗಮನಿಸಲು ವಿಫಲವಾಗಿದೆ. ಯಾವುದೇ ಪ್ರತಿಕ್ರಿಯೆಗಳಿಲ್ಲದ ಕಾರಣ, ಅಣ್ಣಾಮಲೈ ಮನವಿಯನ್ನು ಪರಿಗಣಿಸಬೇಕಾಗಿದೆ ಮತ್ತು ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಹಗೆತನವನ್ನು ಉತ್ತೇಜಿಸುವುದು) ಮತ್ತು 505 (1) (ಬಿ) (ಸಾರ್ವಜನಿಕ ನೆಮ್ಮದಿಯ ವಿರುದ್ಧ ನೀಡಿದ ಹೇಳಿಕೆಗಳು) ರ ಅಡಿಯಲ್ಲಿ ಬರುವುದಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿ ಪ್ರಕರಣಕ್ಕೆ ತಡೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ