
ಭೋಪಾಲ್ (ನ.11): 21 ವರ್ಷದ ಮಾಡೆಲ್ ಖುಷ್ಬೂ ಅಹಿರ್ವಾರ್ ಸೋಮವಾರ ಮುಂಜಾನೆ ನಿಗೂಢವಾಗಿ ಸಾವನ್ನಪ್ಪಿದ್ದು, ಆಕೆಯ ಗೆಳೆಯ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಹೊರಗಡೆ ಬಿಟ್ಟು ಹೋಗಿದ್ದ. ನಂತರ ಆತ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಸೆಹೋರ್ ಜಿಲ್ಲೆಯ ಭೈನ್ಸಖೇಡಿ ಆಸ್ಪತ್ರೆಯ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಕುಟುಂಬದ ಆರೋಪದ ಮೇರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು, ಮ್ಯಾಜಿಸ್ಟೀರಿಯಲ್ ಮೇಲ್ವಿಚಾರಣೆಯಲ್ಲಿ ಇದನ್ನು ನಡೆಸಲಾಗುತ್ತಿದೆ.
ಆಸ್ಪತ್ರೆಯ ಹೊರಗೆ ಸಂತ್ರಸ್ತೆಯ ತಾಯಿ ಲಕ್ಷ್ಮಿ ಅಹಿರ್ವಾರ್ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಗೋಳಾಡಿದ್ದಾರೆ. "ಆಕೆಯ ದೇಹದಾದ್ಯಂತ ನೀಲಿ ಕಲೆಗಳಿವೆ. ಆಕೆಯ ಮುಖ ಊದಿಕೊಂಡಿದೆ ಮತ್ತು ಆಕೆಯ ಖಾಸಗಿ ಭಾಗಗಳಿಗೆ ಗಾಯಗಳಾಗಿವೆ. ನನ್ನ ಮಗಳನ್ನು ಕ್ರೂರವಾಗಿ ಥಳಿಸಿ ಕೊಲ್ಲಲಾಗಿದೆ" ಎಂದು ಆರೋಪ ಮಾಡಿದ್ದಾರೆ.
"ಆಕೆಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ. ಎಲ್ಲೆಡೆ ಮೂಗೇಟುಗಳಿವೆ. ನಮಗೆ ನ್ಯಾಯ ಬೇಕು. ಆಕೆಯನ್ನು ಕೊಂದ ವ್ಯಕ್ತಿಗೆ ಶಿಕ್ಷೆಯಾಗಬೇಕು" ಎಂದು ಆಕೆಯ ಸಹೋದರಿ ಹೇಳಿದ್ದಾರೆ.
ಕುಟುಂಬದವರ ಪ್ರಕಾರ, ಖುಷ್ಬೂ 27 ವರ್ಷದ ಖಾಸಿಮ್ ಎಂಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು, ಖಾಸಿಮ್ ಆಕೆಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಕ್ಷಣದಿಂದ ನಾಪತ್ತೆಯಾಗಿದ್ದಾನೆ. ಇಬ್ಬರೂ ಉಜ್ಜಯಿನಿಯಿಂದ ಭೋಪಾಲ್‌ಗೆ ಹಿಂತಿರುಗುತ್ತಿದ್ದಾಗ ಖುಷ್ಬೂ ಅವರ ಸ್ಥಿತಿ ಹದಗೆಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಪ್ರಜ್ಞಾಹೀನರಾಗಿರುವುದನ್ನು ನೋಡಿ ಖಾಸಿಮ್ ಅಲ್ಲಿಯೇ ಉಳಿಯುವ ಬದಲು ಪರಾರಿಯಾಗಿದ್ದ ಎನ್ನಲಾಗಿದೆ.
ದುರಂತಕ್ಕೆ ಮೂರು ದಿನಗಳ ಮೊದಲು, ಖಾಸಿಮ್, ಖುಷ್ಬೂ ಅವರ ತಾಯಿಗೆ ಕರೆ ಮಾಡಿದ್ದಾಗಿ ವರದಿಯಾಗಿದೆ. "ಅವರು, 'ನಾನು ಮುಸ್ಲಿಂ, ಆದರೆ ನಿಮ್ಮ ಮಗಳು ನನ್ನೊಂದಿಗಿದ್ದಾಳೆ. ಚಿಂತಿಸಬೇಡಿ, ನಾನು ಅವಳನ್ನು ಉಜ್ಜಯಿನಿಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದ' ಎಂದು ಲಕ್ಷ್ಮಿ ತಿಳಿಸಿದ್ದಾರೆ. ನಂತರ, ಖುಷ್ಬೂ ಸ್ವತಃ ಕರೆ ಮಾಡಿ, "ಚಿಂತಿಸಬೇಡಿ, ಖಾಸಿಮ್ ಒಳ್ಳೆಯ ವ್ಯಕ್ತಿ. ನಾನು ಅವನೊಂದಿಗಿದ್ದೇನೆ" ಎಂದು ತಮ್ಮ ಕುಟುಂಬಕ್ಕೆ ಭರವಸೆ ನೀಡಿದರು. ಅದು ಆ ಕುಟುಂಬ ಅವಳ ಜೊತೆ ನಡೆಸಿದ ಕೊನೆಯ ಸಂಭಾಷಣೆಯಾಗಿತ್ತು.
@DiamondGirl30 ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಆನ್‌ಲೈನ್‌ನಲ್ಲಿ ಪರಿಚಿತರಾದ ಖುಷ್ಬೂ, ಸಾವಿರಾರು ಫಾಲೋವರ್ಸ್‌ಗಳನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಾಡೆಲ್ ಆಗಿದ್ದರು.ಅವರು ಆಗಾಗ್ಗೆ ಗ್ಲಾಮರಸ್ ಫೋಟೋಗಳು ಮತ್ತು ಬ್ರಾಂಡ್ ಸಹಯೋಗಗಳನ್ನು ಹಂಚಿಕೊಳ್ಳುತ್ತಿದ್ದರು ಮತ್ತು ಭೋಪಾಲ್‌ನ ಮಾಡೆಲಿಂಗ್ ವಲಯಗಳಲ್ಲಿ ಭರವಸೆಯ ಮುಖಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು.
ಬಿಎ ಕೋರ್ಸ್‌ನ ಮೊದಲ ವರ್ಷದ ನಂತರ ಆಕೆ ಕಾಲೇಜು ತೊರೆದಿದ್ದಳು ಮತ್ತು ಮೂರು ವರ್ಷಗಳಿಂದ ಭೋಪಾಲ್‌ನಲ್ಲಿ ವಾಸಿಸುತ್ತಿದ್ದಳು, ತನ್ನ ಮಾಡೆಲಿಂಗ್ ಕನಸುಗಳನ್ನು ಬೆನ್ನಟ್ಟುತ್ತಾ ಅರೆಕಾಲಿಕ ಉದ್ಯೋಗಗಳ ಮೂಲಕ ಜೀವನ ದೂಡುತ್ತಿದ್ದಳು. ಮಾಡೆಲಿಂಗ್ ಜಗತ್ತಿನಲ್ಲಿ ತಾನು ಶೈನ್ ಆಗಬೇಕು ಎನ್ನುವ ಕನಸನ್ನು ಯಾವಾಗಲೂ ಹೇಳಿಕೊಳ್ಳುತ್ತಿದ್ದಳು ಎಂದು ಆಕೆಯ ತಾಯಿ ಹೇಳಿದ್ದಾರೆ.
"ಇದು ನಿಮ್ಮ ಪ್ರದೇಶದಲ್ಲಿ ನಡೆದಿದೆ. ದಯವಿಟ್ಟು ಏನಾದರೂ ಮಾಡಿ ಸರ್. ನನ್ನ ತಂಗಿಗೆ ನ್ಯಾಯ ಸಿಗಬೇಕು" ಎಂದು ಖುಷ್ಬೂ ಅವರ ಸಹೋದರಿ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರಿಗೆ ಮನವಿ ಮಾಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾಣೆಯಾಗಿರುವ ಖಾಸಿಮ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಖುಷ್ಬೂ ಅವರ ಗಾಯಗಳ ಸ್ವರೂಪವು ಹಲ್ಲೆ ಮತ್ತು ಸಂಭವನೀಯ ಲೈಂಗಿಕ ದೌರ್ಜನ್ಯದ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. "ನಾವು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಸೇರಿದಂತೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ" ಎಂದು ಪರ್ವಾಲಿಯಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶವಪರೀಕ್ಷೆ ಮುಂದುವರೆದಂತೆ ಮತ್ತು ಖಾಸಿಮ್‌ಗಾಗಿ ಹುಡುಕಾಟ ತೀವ್ರಗೊಳ್ಳುತ್ತಿದ್ದಂತೆ, ತನ್ನ ಕನಸುಗಳನ್ನು ಬೆನ್ನಟ್ಟಿದ ಯುವತಿಯೊಬ್ಬಳು ಹೇಗೆ ಇಷ್ಟೊಂದು ಕ್ರೂರ ಅಂತ್ಯವನ್ನು ಕಂಡಳು ಎನ್ನುವುದೇ ಕುತೂಹಲದ ಪ್ರಶ್ನೆಯಾಗಿ ಕಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ