
ನವದೆಹಲಿ(ಸೆ.19) ಖಲಿಸ್ತಾನ ಹೋರಾಟ, ಖಲಿಸ್ತಾನ ಪ್ರತಿಭಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ರೈತ ಪ್ರತಿಭಟನೆ ವೇಳೆ ಖಲಿಸ್ತಾನ ಹೋರಾಟ ಭಾರತದಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಿತ್ತು. ಕೆಂಪು ಕೋಟೆ ಮೇಲೆ ಮುತ್ತಿಗೆ ಹಾಕಿತ್ತು. ಇನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ ಸಮುದಾಯವಿರುವ ಕೆನಾಡದಲ್ಲಿ ಖಲಿಸ್ತಾನ ಹೋರಾಟ ತೀವ್ರಗೊಳ್ಳುತ್ತಲೇ ಇದೆ. ಇದೀಗ ಇದೇ ಖಲಿಸ್ತಾನ ಭಾರತ ಹಾಗೂ ಕೆನಡಾ ಸಂಬಂಧವನ್ನೇ ಹಳಸಿದೆ. ಇದರ ನಡುವೆ ಭಾರತದ ನಿವೃತ್ತ ರಾ ಅಧಿಕಾರಿ ದಾಖಲೆ ಸಮೇತ ನೀಡಿದ ಕೆಲ ಸ್ಫೋಟಕ ಮಾಹಿತಿ ಕಾಂಗ್ರೆಸ್‌ಗೆ ಮುಖವಾಡ ಬಯಲು ಮಾಡಿದೆ. ಖಲಿಸ್ತಾನ ಹೋರಾಟವನ್ನ ಸೃಷ್ಟಿಸಿದ್ದೇ ಕಾಂಗ್ರೆಸ್. ಉಗ್ರ ಬ್ರಿಂದನ್‌ವಾಲೆಗೆ ಇಂದಿರಾ ಗಾಂಧಿ ಹಣ ನೀಡಿ ತಮ್ಮ ರಾಜಕೀಯ ಉದ್ದೇಶ ಈಡೇರಿಕೆಗೆ ಬಳಸಿಕೊಂಡಿದ್ದರು. ಕಾಂಗ್ರೆಸ್ ನಾಯಕರಾದ ಕಮಲ್‌ನಾಥ್ ಹಾಗೂ ಸಂಜಯ್ ಗಾಂಧಿ ಮೂಲಕ ಉಗ್ರ ಬಿಂದ್ರನ್‌ವಾಲೆಗೆ ಹಣ ಸಂದಾಯವಾಗಿತ್ತು ಅನ್ನೋ ಮಾಹಿತಿಯನ್ನು ನಿವೃತ್ತ ರಾ ಅಧಿಕಾರಿ ಜಿಬಿಎಸ್ ಸಿಧು ಹೇಳಿದ್ದಾರೆ.
ಎಎನ್ಐ ಸುದ್ಧಿ ಸಂಸ್ಥೆ ನಡೆಸಿದ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡ ಜಿಬಿಎಸ್ ಸಿಧು, ಖಲಿಸ್ತಾನ ಹೋರಾಟ ಹಾಗೂ ಕಾಂಗ್ರೆಸ್ ಕೈವಾಡ ಕುರಿತು ವಿಸ್ತಾರವಾಗಿ ಹೇಳಿದ್ದಾರೆ. ಖಲಿಸ್ತಾನ ಹೋರಾಟ ಸೃಷ್ಟಿಸಲು ಕಾಂಗ್ರೆಸ್‌ಗೆ ಹಲವು ರಾಜಕೀಯ ಕಾರಣಗಳಿತ್ತು. ಇದರಲ್ಲಿ ಜನತಾ ಪಾರ್ಟಿಯಿಂದ ಪ್ರಧಾನಿಯಾದ ಮೊರಾರ್ಜಿ ದೇಸಾಯಿ ಸರ್ಕಾರವನ್ನು ಬೀಳಿಸುವ ಉದ್ದೇಶವೂ ಅಡಗಿತ್ತು ಎಂದು ಜಿಬಿಎಸ್ ಸಿಧು ಹೇಳಿದ್ದಾರೆ.
ಆಪರೇಶನ್ ಬ್ಲೂ ಸ್ಟಾರ್‌ಗೆ 37ನೇ ವರ್ಷ; ಸ್ವರ್ಣ ಮಂದಿರದಲ್ಲಿ ಮತ್ತೆ ಹಾರಾಡಿದ ಖಲಿಸ್ತಾನ ಧ್ವಜ!
ಖಲಿಸ್ತಾನ ಹೋರಾಟ ಕಾಂಗ್ರೆಸ್ ಸೃಷ್ಟಿಸಿದ್ದ ರಾಜಕೀಯ ದಾಳ. ಆದರೆ ಇದೇ ಹೋರಾಟ ಕಾಂಗ್ರೆಸ್‌ಗೆ ಮುಳ್ಳಾಯಿತು. ಇಷ್ಟೇ ಅಲ್ಲ ಭಾರತದ ಸೌರ್ವಭೌಮತ್ವ ಹಾಗೂ ಐಕ್ಯತೆಗೆ ಈಗಲೂ ಧಕ್ಕೆಯಾಗುತ್ತಿದೆ. ಅಕ್ಬರ್ ರೋಡ್ 1 ಇಂದಿರಾ ಗಾಂಧಿಯಾ ಗೃಹ ಕಚೇರಿಯಾಗಿದ್ದರೆ, ಸಫ್ದರ್‌ಜಂಗ್ ರೋಡ್ ಇಂದಿರಾ ಗಾಂಧಿಯ ನಿವಾಸವಾಗಿತ್ತು. ಇವೆರಡು ಅಕ್ಕಪಕ್ಕದಲ್ಲಿತ್ತು. ಅಧಿಕೃತ ಕಚೇರಿ ಹಾಗೂ ನಿವಾಸದಲ್ಲೇ ಖಲಿಸ್ತಾನ ಹೋರಾಟ ರೂಪುರೇಷೆ ಸಿದ್ದವಾಗಿತ್ತು. ಈ ರೂಪುರೇಶೆಯಲ್ಲಿ ಕಮಲನಾಥ್ ಹಾಗೂ ಸಂಜಯ್ ಗಾಂಧಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ಜಿಬಿಎಸ್ ಸಿಧು ಹೇಳಿದ್ದಾರೆ.
ಹೊಸ ವಿಚಾರ ಸೃಷ್ಟಿಸಿ ಭಾರತದ ಹಿಂದೂಗಳಲ್ಲಿ ಸೌರ್ವಭೌಮತ್ವ ಹಾಗೂ ಐಕ್ಯತೆ ಆತಂಕ ಹುಟ್ಟಿಸುವ ಅನಿವಾರ್ಯತೆಗೆ ಕಾಂಗ್ರೆಸ್ ಇಳಿದಿತ್ತು. ಇದರ ಹಿಂದೆ ದೇಸಾಯಿ ಸರ್ಕಾರವನ್ನು ಪತನಗೊಳಿಸುವುದು ಸೇರಿದಂತೆ ಹಲವು ಅಜೆಂಡಾಗಳಿತ್ತು. ಹೀಗಾಗಿ ಸಿಖ್ ಸಮುದಾಯಕ್ಕೆ ಪ್ರತ್ಯೇಕ ರಾಜ್ಯ ಖಲಿಸ್ತಾನ ಹೋರಾಟಕ್ಕೆ ಕಾಂಗ್ರೆಸ್ ಪ್ಲಾನ್ ರೆಡಿ ಮಾಡಿತ್ತು. ಆ ಸಮಯದಲ್ಲಿ ಖಲಿಸ್ತಾನ ಹೋರಾಟ ಅನ್ನೋದು ಇರಲೇ ಇಲ್ಲ. ಇದು ಕಾಂಗ್ರೆಸ್ ಸೃಷ್ಟಿಸಿದ ಹೋರಾಟವಾಗಿತ್ತು.
ಈ ಸಮಯದಲ್ಲಿ ನಾನು ಕೆನಡಾದಲ್ಲಿದ್ದೆ. ಈ ವೇಳೆ ಕನಾಡದಲ್ಲಿನ ಸಿಖ್ ಸಮುದಾಯದಲ್ಲಿ ಚರ್ಚೆ ಶುರುವಾಗಿತ್ತು. ಕಾಂಗ್ರೆಸ್ ಯಾಕೆ ಬಿಂದ್ರನ್‌ವಾಲೆ ಜೊತೆ ಸಲುಗೆಯಿಂದ ಇದೆ. ರಹಸ್ಯ ಮಾತುಕತೆಗಳನ್ನು ನಡೆಸುತ್ತಿದೆ ಅನ್ನೋ ಚರ್ಚೆಗಳು ಶುರುವಾಗಿತ್ತು. ಸಿಖ್ ಸಮುದಾಯದಿಂದ ಭಾರತದ ಹಿಂದೂಗಳಿಗೆ ಆತಂಕವಿದೆ ಅನ್ನೋದನ್ನು ಕಾಂಗ್ರೆಸ್ ಸೃಷ್ಟಿಸಲು ಪ್ರಖರ ಸಂತನನ್ನು ನೇಮಕ ಮಾಡಲು ಕಾಂಗ್ರೆಸ್ ಬಯಸಿತ್ತು. ಇದಕ್ಕಾಗಿ ಇಬ್ಬರು ಸಿಖ್ ಸಂತರನ್ನು ಸಂದರ್ಶನ ಮಾಡಲಾಗಿತ್ತು. ಇದರಲ್ಲಿ ಓರ್ವ ಸಂತ ಕಾಂಗ್ರೆಸ್ ಉದ್ದೇಶ ಈಡೇರಿಸಲು ಹಿಂದೇಟು ಹಾಕಿದ್ದರು. ಆದರೆ ಬಿಂದ್ರನ್‌ವಾಲೆ ಕಾಂಗ್ರೆಸ್ ಬಿಡ್ಡಿಂಗ್ ಸ್ವೀಕರಿಸಿದರು.
ಆಪರೇಶನ್ 1 ಗ್ರೂಪ್‌ನಲ್ಲಿ ಕಾಂಗ್ರೆಸ್‌ನ ಕೆಲವೇ ಕೆಲವು ನಾಯಕರಿದ್ದರು. ಮುಖ್ಯವಾಗಿ ಇಂದಿರಾ ಗಾಂಧಿ, ಕಮಲನಾಥ್ ಹಾಗೂ ಸಂಜಯ್ ಗಾಂಧಿ. ಈ ಆಪರೇಶನ್ 1 ಹೆಸರಿನಲ್ಲಿ ಖಲಿಸ್ತಾನ ಹೋರಾಟದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಕಮಲನಾಥ್ ಹಾಗೂ ಸಂಜಯ್ ಗಾಂಧಿ ದೊಡ್ಡ ಮೊತ್ತವನ್ನು ಬಿಂದ್ರನವಾಲೆಗೆ ತಲುಪಿಸಿದ್ದರು.
ಆಪರೇಷನ್ ಬ್ಲೂ ಸ್ಟಾರ್ ಮಾಹಿತಿ ಬಹಿರಂಗಕ್ಕೆ ಬ್ರಿಟನ್ ಕೋರ್ಟ್ ಆದೇಶ
ಪಂಜಾಬ್‌ನಲ್ಲಿ ಅಕಾಲಿ ದಳ ಹಾಗೂ ಜನತಾ ಪಾರ್ಟಿ ಸರ್ಕಾರವನ್ನು ಬೀಳಿಸುವ ಜೊತೆಗೆ ಕೇಂದ್ರದಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರವನ್ನು ಪತನಗೊಳಿಸಲು ಸಂಜಯ್ ಹಾಗೂ ಕಮಲನಾಥ್ ಆಪರೇಶನ್ 1 ಮೂಲಕ ತಯಾರಿ ನಡೆಸುತ್ತಿದ್ದರು. ಬಿಂದ್ರನ್‌ವಾಲೆ ಖಲಿಸ್ತಾವನ್ನು ಕೇಳೇ ಇಲ್ಲ. ಆತನ ತನ್ನ ಬದುಕಿನಲ್ಲಿ ಖಲಿಸ್ತಾನ ಹೋರಾಟ ಮಾಡುವ ಕುರಿತು ಆಲೋಚನೆ ಮಾಡಿರಲಿಲ್ಲ. ಆದರೆ ಬಿಬಿ(ಇಂದಿರಾ ಗಾಂಧಿ) ನನ್ನ ಜೇಬು ತುಂಬಿಸಿದ ಬಳಿಕ ನಾನು ಇಲ್ಲ ಎಂದು ಹೇಗೆ ಹೇಳಲಿ ಎಂದು ಬಿಂದ್ರನ್‌ವಾಲೆ ಎಂದಿದ್ದರು. ಧಾರ್ಮಿಕ ಕಾರಣಕ್ಕಾಗಿ ಬಿಂದ್ರನ್‌ವಾಲೆಯನ್ನು ಬಳಸಿಕೊಳ್ಳುವುದು ಕಾಂಗ್ರೆಸ್ ಉದ್ದೇಶವಾಗಿರಲಿಲ್ಲ. ರಾಜಕೀಯವಾಗಿ ಬಳಸಿಕೊಳ್ಳಲೇ ತಂತ್ರ ಹೆಣೆಯಲಾಗಿತ್ತು. ಇದೇ ವೇಳೆ 1978ರಲ್ಲಿ ಝೈಲ್ ಸಿಂಗ್ ನೇತೃತ್ವದ ಗುಂಪು ದಲ್ ಖಲ್ಸಾ ಖಲಿಸ್ತಾನ ಹೋರಾಟ ಆರಂಭಿಸಿತ್ತು. ಇದರ ಮೊದಲ ಸಭೆ ಖಾಸಗಿ ಹೋಟೆಲ್‌ನಲ್ಲಿ ನಡೆದಿತ್ತು. ಈ ಹೊಟೆಲ್ ಬಿಲ್ 600 ರೂಪಾಯಿಯನ್ನು ಝೈಲ್ ಸಿಂಗ್ ಪಾವತಿ ಮಾಡಿದ್ದರು. 2 ದಿನದ ಬಳಿಕ ದಲ್ ಖಾಲ್ಸಾ ಗ್ರೂಪ್ ಸುದ್ದಿಗೋಷ್ಠಿ ನಡೆಸಿ ನಮ್ಮ ಗುರಿ ಸ್ವತಂತ್ರ ಖಲಿಸ್ತಾನ ರಾಷ್ಟ್ರ ಎಂದು ಘೋಷಣೆ ಮಾಡಿತ್ತು. ಈ ಕುರಿತು ಇಂಚಿಂಚು ಮಾಹಿತಿಯನ್ನು ಜಿಬಿಎಸ್ ಸಿಧು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ