ಬಿಜೆಪಿ ಕಾರ್ಪೊರೇಟರ್ ‘ಕೈ’ ಹಿಡಿದು 3 ಗಂಟೆಯಲ್ಲೇ ವಾಪಸ್, 'ಇಡಿ' ಫೋನ್‌ ಬಂದಿರ್ಬೇಕು ಎಂದ ನೆಟ್ಟಿಗರು!

Published : Apr 11, 2026, 03:06 PM IST
sejal gohel

ಸಾರಾಂಶ

ಗುಜರಾತ್‌ನ ಭಾವನಗರದಲ್ಲಿ, ಬಿಜೆಪಿ ಮಹಿಳಾ ಕಾರ್ಪೊರೇಟರ್ ಸೆಜಲ್ ಗೋಹೇಲ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. ಆದರೆ, ಕೇವಲ ಮೂರು ಗಂಟೆಗಳ ಅಂತರದಲ್ಲಿ, ಅವರು ಮತ್ತೆ ಬಿಜೆಪಿ ಪಾಳಯಕ್ಕೆ ಮರಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಭಾವನಗರ (ಏ.11): ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನಲು ಗುಜರಾತ್‌ನ ಭಾವನಗರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮುಂಬರುವ ಪೌರಸಂಸ್ಥೆ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿಯ ಮಹಿಳಾ ಕಾರ್ಪೊರೇಟರ್ ಒಬ್ಬರು ಕೇವಲ ಮೂರು ಗಂಟೆಗಳ ಅಂತರದಲ್ಲಿ ಕಾಂಗ್ರೆಸ್ ಸೇರಿ, ಮತ್ತೆ ಮರಳಿ ಬಿಜೆಪಿ ಪಾಳಯಕ್ಕೆ ಬರುವ ಮೂಲಕ ಎಲ್ಲರನ್ನೂ ಅಚ್ಚರಿಗೆ ನೂಕಿದ್ದಾರೆ. ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು, ಬಹುಶಃ ಇಡಿಯಿಂದ ಆಕೆಗೆ ಫೋನ್‌ ಬಂದಿರಬೇಕು ಅದಕ್ಕೆ ವಾಪಾಸ್‌ ಬಿಜೆಪಿಗೆ ಬಂದಿದ್ದಾರೆ ಎಂದು ಆಕೆಯನ್ನು ಟ್ರೋಲ್‌ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಬಂಡಾಯ, ಕಾಂಗ್ರೆಸ್‌ಗೆ ಸೇರ್ಪಡೆ!

ವಾರ್ಡ್ ಸಂಖ್ಯೆ 3ರ ಬಿಜೆಪಿ ಕಾರ್ಪೊರೇಟರ್ ಸೆಜಲ್ ಗೋಹೇಲ್ ಕಳೆದ ಸೋಮವಾರ ಬೆಳಿಗ್ಗೆ ದಿಢೀರನೆ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಸಂಚಲನ ಮೂಡಿಸಿದ್ದರು. ಅಷ್ಟೇ ಅಲ್ಲದೆ, ಬಿಜೆಪಿ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಯನ್ನೇ ಗೈದಿದ್ದರು. "ಬಿಜೆಪಿಯಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ರಕ್ಷಣೆ ಇಲ್ಲ. ಕಾರ್ಪೊರೇಟರ್ ಆಗಿರುವ ನನಗೇ ಅಸುರಕ್ಷತೆ ಕಾಡುತ್ತಿದೆ. ಅಕ್ರಮ ಮದ್ಯ ಮಾರಾಟದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನ ಪತಿಯ ಮೇಲೆ ಹಲ್ಲೆಯಾದರೂ ಪಕ್ಷ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ" ಎಂದು ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಸ್ತ ಪಾಳಯ ಸೇರಿದ್ದರು.

ಮೂರೇ ಗಂಟೆಯಲ್ಲಿ ಉಲ್ಟಾ ಹೊಡೆದ ಕಾರ್ಪೊರೇಟರ್!

ಸೆಜಲ್ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಬೀಗುತ್ತಿದ್ದರೆ, ಇತ್ತ ಬಿಜೆಪಿ ಪಾಳಯದಲ್ಲಿ ಆತಂಕ ಶುರುವಾಗಿತ್ತು. ಆದರೆ, ಈ ಸಂಭ್ರಮ ಮೂರು ಗಂಟೆ ಕೂಡ ಉಳಿಯಲಿಲ್ಲ. ಕಾಂಗ್ರೆಸ್ ಸೇರಿದ ಕೆಲವೇ ಹೊತ್ತಿನಲ್ಲಿ ಸೆಜಲ್ ಮತ್ತೆ ಬಿಜೆಪಿ ಕಚೇರಿಯಲ್ಲಿ ಪ್ರತ್ಯಕ್ಷರಾಗಿ ಎಲ್ಲರ ಹುಬ್ಬೇರಿಸಿದರು. ಪತ್ರಿಕಾಗೋಷ್ಠಿ ನಡೆಸಿದ ಅವರು, "ನನ್ನನ್ನು ಕಾಂಗ್ರೆಸ್ ನಾಯಕರು ದಾರಿ ತಪ್ಪಿಸಿದ್ದರು. ಅವರು ಹೇಳಿಕೊಟ್ಟಂತೆ ನಾನು ಬಿಜೆಪಿ ವಿರುದ್ಧ ಮಾತನಾಡಿದ್ದೆ. ಈಗ ನನ್ನ ತಪ್ಪಿನ ಅರಿವಾಗಿದೆ, ಕ್ಷಮೆಯಿರಲಿ. ನಾನು ಜೀವನ ಪರ್ಯಂತ ಬಿಜೆಪಿಯಲ್ಲೇ ಇರುತ್ತೇನೆ" ಎಂದು ಹೇಳುವ ಮೂಲಕ ದೊಡ್ಡ ಯು-ಟರ್ನ್ ಹೊಡೆದಿದ್ದಾರೆ.

ಕಾಂಗ್ರೆಸ್ ಕಿಡಿ: ‘ಇದು ಒತ್ತಡದ ತಂತ್ರ’

ಈ ನಾಟಕೀಯ ಬೆಳವಣಿಗೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. "ನಾವು ಯಾರನ್ನೂ ಬಲವಂತವಾಗಿ ಪಕ್ಷಕ್ಕೆ ಕರೆತಂದಿಲ್ಲ. ಅವರೇ ಸಿದ್ಧಾಂತ ಮೆಚ್ಚಿ ಬಂದಿದ್ದರು. ಆದರೆ, ಕೇವಲ ಮೂರು ಗಂಟೆಯಲ್ಲಿ ಅವರು ಮನಸ್ಸು ಬದಲಿಸಿರುವುದರ ಹಿಂದೆ ಬಿಜೆಪಿಯ ದೊಡ್ಡ ಮಟ್ಟದ ಒತ್ತಡದ ತಂತ್ರ ಕೆಲಸ ಮಾಡಿದೆ" ಎಂದು ಭಾವನಗರ ನಗರ ಕಾಂಗ್ರೆಸ್ ಅಧ್ಯಕ್ಷ ಮನೋಹರಸಿಂಹ ಗೋಹಿಲ್ ಕಿಡಿಕಾರಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಡಿಬಿಲ್ಡಿಂಗ್ ಚಾಂಪಿಯನ್‌ಗಳ ಪೊಲೀಸ್ ನೇಮಕಾತಿ: ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಖ್ಯಾತ ಬಾಡಿಬಿಲ್ಡರ್‌ಗೆ ನಿರಾಸೆ
ಮೋದಿ-ರಾಹುಲ್ ಅಪರೂಪದ ಆತ್ಮೀಯ ಮಾತುಕತೆಯಲ್ಲಿ ಪ್ರಜಾಪ್ರಭುತ್ವದ ಸೌಂದರ್ಯ ಕಂಡ ನೆಟ್ಟಿಗರು