
ಇತ್ತೀಚಿನ ದಿನಗಳಲ್ಲಿ ಕಾಮಿಡಿ ಹೆಸರಿನಲ್ಲಿ ದೇವತೆಗಳನ್ನು ನಿಂದನೆ ಮಾಡುವುದು, ಅಪಹಾಸ್ಯ ಮಾಡುವುದು ನಡೆದೇ ಇದೆ. ಕೆಲವೊಮ್ಮೆ ಏನೋ ಮಾತಿಗೆ ತಮಾಷೆಯಾಗಿ ಹೇಳುವುದು ಇದ್ದರೆ, ಕೆಲವೊಮ್ಮೆ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸುವುದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಅಸಭ್ಯ ಎನ್ನಿಸುವ ಮಾತುಗಳನ್ನೂ ಹೇಳುವುದೂ ಇದೆ. ಕೆಲವೊಮ್ಮೆ ಇದನ್ನು ಕೆಲವರು ಕಾಮಿಡಿಯಾಗಿ ತೆಗೆದುಕೊಂಡರೆ, ಕೆಲವರು ಕೇಸ್ ದಾಖಲು ಮಾಡುತ್ತಾರೆ. ಈಗ ಅಂಥದ್ದೇ ಒಂದು ಕೇಸ್ ಹಾಸ್ಯನಟರಾಗಿರುವ ಹಾಸ್ಯನಟ ಭಾರ್ತಿ ಸಿಂಗ್ ಮತ್ತು ನಟ ಶೇಖರ್ ಸುಮನ್ ಅವರ ಮೇಲೆಯೂ ದಾಖಲಾಗಿತ್ತು. ಅಷ್ಟಕ್ಕೂ ಇದು ದಾಖಲಾಗಿದ್ದು 2010ರಲ್ಲಿ.
ಈ ಪ್ರಕರಣದಲ್ಲಿ, ಕಾಮಿಡಿ ಷೋ ಒಂದರಲ್ಲಿ ಭಾರ್ತಿ ಸಿಂಗ್ ಮತ್ತು ಶೇಖರ್ ಸುಮನ್ ಭಾಗವಹಿಸಿದ್ದರು. ಆಗ ಭಾರ್ತಿ ಸಿಂಗ್ ಅವರು ತಮಾಷೆ ಮಾಡುವಾಗ ಯಾ ಅಲ್ಲಾ, ರಸಗುಲ್ಲಾ, ದಹಿ ಭಲ್ಲಾ ಎಂದಿದ್ದರು. ಅಲ್ಲಿಯೇ ಇದ್ದ ಶೇಖರ್ ಸುಮನ್ ನಕ್ಕಿದ್ದರು. ಈ ಹಿನ್ನೆಲೆಯಲ್ಲಿ ಅಂದು ಇಬ್ಬರ ವಿರುದ್ಧವೂ ಕೇಸ್ ದಾಖಲು ಮಾಡಲಾಗಿತ್ತು. ಇದೀಗ 16 ವರ್ಷಗಳ ಬಳಿಕ ಕೋರ್ಟ್ ಈ ಪ್ರಕರಣದ ತೀರ್ಪು ನೀಡಿದೆ. ವಿಚಾರಣೆಯ ಸಮಯದಲ್ಲಿ, ಹಾಸ್ಯ, ವಿಡಂಬನೆ ಅಥವಾ ಪ್ರಾಸದ ಉದ್ದೇಶಕ್ಕಾಗಿ ಮಾಡಿದ ಕಾಮೆಂಟ್‌ಗಳು ಯಾವುದೇ ಸಮುದಾಯದ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ವಾದಿಸಿರುವ ವಕೀಲರ ವಾದವನ್ನು ಮಾನ್ಯ ಮಾಡಿರುವ ಕೋರ್ಟ್, 2010 ರಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ.
ವಿಚಾರಣೆಯ ಸಮಯದಲ್ಲಿ, ಟೀಕಿಸಲಾದ ಪದಗಳನ್ನು (ಯಾ ಅಲ್ಲಾ! ರಸಗುಲ್ಲಾ! ದಹಿ ಭಲ್ಲಾ!) ಕೇವಲ ಪ್ರಾಸ ಮತ್ತು ಹಾಸ್ಯಕ್ಕಾಗಿ ಬಳಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ರಸಗುಲ್ಲಾ ಮತ್ತು "ದಹಿ ಭಲ್ಲಾ" ಎರಡೂ ಎಲ್ಲಾ ಸಮುದಾಯದವರು ಜನರು ಸೇವಿಸುವ ಸಾಮಾನ್ಯ ಆಹಾರಗಳಾಗಿವೆ. ಇದರಲ್ಲಿ ಅಪಾರ್ಥವಾಗುವಂಥದ್ದು ಏನೂ ಇಲ್ಲ. ಇದು ಸಿಹಿ ಪದಾರ್ಥವಾಗಿದ್ದು, ಇದನ್ನು ಎಲ್ಲ ಸಮುದಾಯದವರೂ ಸೇವಿಸುತ್ತಾರೆ. ಆದ್ದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಎನ್ನುವಂಥದ್ದು ಏನೂ ಇಲ್ಲ. ಅಷ್ಟೇ ಅಲ್ಲದೇ, ಈ ಪದಗಳು ಅವುಗಳ ಸಾಮಾನ್ಯ ಸಾಮಾಜಿಕ ಬಳಕೆಯಲ್ಲಿ ತಟಸ್ಥವಾಗಿವೆ. ಹಾಸ್ಯದಲ್ಲಿ ಆಹಾರ ಪದಾರ್ಥಗಳ ಉಲ್ಲೇಖವನ್ನು ಧರ್ಮಕ್ಕೆ ಅವಮಾನವೆಂದು ಪರಿಗಣಿಸಲಾಗುವುದಿಲ್ಲ. ಈ ಪದಗಳನ್ನು ಅವಮಾನದ ಅಸ್ತ್ರವಾಗಿ ಆಯ್ಕೆ ಮಾಡಲಾಗಿದೆ ಎನ್ನುವುದಕ್ಕೆ ಪುರಾವೆಗಳಿಲ್ಲ ಎಂಬ ವಕೀಲರ ವಾದವನ್ನು ಕೋರ್ಟ್ ಮಾನ್ಯ ಮಾಡಿದೆ.
ಈ ಹಾಸ್ಯ ನಟರು ಇದನ್ನು ಯಾವುದೇ ದುರುದ್ದೇಶಪೂರ್ವಕವಾಗಿ ಹೇಳಿದಂತೆ ಕಂಡುಬರುವುದಿಲ್ಲ. ಪ್ರಾಸಕ್ಕಾಗಿ ಬಳಸಿದ್ದಾರೆ. ವೇದಿಕೆಯಲ್ಲಿ ಪ್ರದರ್ಶನ ನೀಡುವ ಕಲಾವಿದರು ಸಾಮಾನ್ಯವಾಗಿ ನಿಗದಿತ ಸ್ಕ್ರಿಪ್ಟ್ ಪ್ರಕಾರ ವರ್ತಿಸುತ್ತಾರೆ. ಅಷ್ಟೇ ಅಲ್ಲದೇ, ಇದು ಎಲ್ಲಾ ಸಮುದಾಯದವರೂ ಸೇವಿಸುವ ಆಹಾರ. ಈ ಆಹಾರದಲ್ಲಿ ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆ ಎನ್ನಲು ಆಗುವುದಿಲ್ಲ. ಈ ಕಾರ್ಯಕ್ರಮವು ಕುಟುಂಬ ಮನರಂಜನಾ ಕಾರ್ಯಕ್ರಮವಾಗಿ ಪ್ರಸಾರವಾಗಿತ್ತು ಎನ್ನುವುದನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿಗಳು FIR ರದ್ದತಿಗೆ ಆದೇಶಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ