ಜಲಾಶಯದ 'ಪವಿತ್ರ ನೀರು' ಕುಡಿದ ಬಳಿಕ ಅಸ್ವಸ್ಥರಾದ ಪಂಜಾಬ್‌ ಸಿಎಂ..!

By Kannadaprabha NewsFirst Published Jul 22, 2022, 1:06 PM IST
Highlights

ಪಂಜಾಬ್‌ ಸಿಎಂ ಭಗವಂತ ಮಾನ್‌ ಅಸ್ವಸ್ಥರಾಗಲು ಅವರು ಕುಡಿದ ಜಲಾಶಯದ ಕಲುಷಿತ ನೀರು ಎನ್ನಲಾಗಿದೆ. ಅವರು ಆ ನೀರು ಕುಡಿದ ಎರಡು ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರು ಹೊಟ್ಟೆ ನೋವಿನಿಂದ ಬಳಲಲು ಹಾಗೂ ಸೋಂಕು ಉಂಟಾಗಲು ಕಾರಣ ಏನು ಎಂಬುದು ಚರ್ಚೆಗೆ ಗ್ರಾಸವಾಗುತ್ತಿದೆ. ಅವರ ಅನಾರೋಗ್ಯದ ವಿಚಾರ ಯಾಕಿಷ್ಟು ಚರ್ಚೆಗೆ ಗ್ರಾಸವಾಗಿದೆ ಅಂತೀರಾ..? ವಿವರ ಇಲ್ಲಿದೆ ನೋಡಿ..

ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾದ ಹಾಗೂ ಆ ರಾಜ್ಯದ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅನಾರೋಗ್ಯಕ್ಕೊಳಗಾಗಿದ್ದರು. ಈ ಹಿನ್ನೆಲೆ ಅವರನ್ನು ದೆಹಲಿಯ ಸರಿತಾ ವಿಹಾರ್‌ ಪ್ರದೇಶದಲ್ಲಿರುವ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಆದರೆ, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಗುರುವಾರ ಹೊರಬರುತ್ತಿದ್ದಂತೆ, ಅವರ ಅನಾರೋಗ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 

ಪಂಜಾಬ್‌ ಸಿಎಂ ಭಗವಂತ್‌ ಮಾನ್‌ಗೆ ಅನಾರೋಗ್ಯ: ದೆಹಲಿಯ ಆಸ್ಪತ್ರೆಗೆ ದಾಖಲು
 
ಪಂಜಾಬ್‌ ಜನರಿಗೆ ಪವಿತ್ರವಾದ ‘ಕಾಲಿ ಬೇನ್‌’ ಜಲಾಶಯದ 22ನೇ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಕಳೆದ ಭಾನುವಾರ ಭೇಟಿ ನೀಡಿದ್ದ ಮಾನ್‌ ಅಲ್ಲಿನ ನೀರು ಕುಡಿದಿದ್ದರು. ಈ ಘಟನೆ ನಡೆದ ಎರಡು ದಿನಗಳ ಬಳಿಕ ಅಂದರೆ ಮಂಗಳವಾರ ರಾತ್ರಿಯೇ ಅವರಿಗೆ ಅನಾರೋಗ್ಯ ಉಂಟಾಗಿದೆ ಎಂಬ ಮಾಹಿತಿ ಹೊರಬರುತ್ತಿದೆ. ಜಲಾಶಯದ ನೀರು ಕಲುಷಿತವಾಗಿದ್ದರಿಂದ ಹೊಟ್ಟೆನೋವು ಸಂಭವಿಸಿರಬಹುದು ಎನ್ನಲಾಗಿದೆ.
 
ಭಗವಂತ್‌ ಮಾನ್‌ ಜಲಾಶಯದ ನೀರು ಕುಡಿಯುತ್ತಿರುವ ವಿಡಿಯೋವನ್ನು ಎಎಪಿ ಪಂಜಾಬ್‌ ಸೇರಿ ಆಮ್‌ ಆದ್ಮಿ ಪಕ್ಷದ ಅನೇಕ ನಾಯಕರು ಹಂಚಿಕೊಂಡಿದ್ದರು.  

ಎಎಪಿ ಪಂಜಾಬ್‌ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಅಲ್ಲಿನ ಮುಖ್ಯಮಂತ್ರಿ ಭಗವಂತ್‌ ಮಾನ್‌ ಜಲಾಶಯದ ನೀರನ್ನು ಲೋಟದಲ್ಲಿ ಎತ್ತಿಕೊಂಡು ಕುಡಿದಿದ್ದಾರೆ. ಈ ವೇಳೆ ಪಕ್ಷದ ಹಾಗೂ ಭಗವಂತ್‌ ಮಾನ್‌ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದರು.

 

ਗੁਰੂ ਨਾਨਕ ਸਾਹਿਬ ਦੀ ਚਰਨ ਛੋਹ ਪ੍ਰਾਪਤ ਧਰਤੀ ਸੁਲਤਾਨਪੁਰ ਲੋਧੀ ਵਿਖੇ ਪਵਿੱਤਰ ਵੇਈਂ ਦਾ ਪਾਣੀ ਪੀਂਦੇ ਹੋਏ CM ਜੀ

ਪਵਿੱਤਰ ਵੇਈਂ ਨੂੰ ਸਾਫ਼ ਕਰਨ ਦਾ ਬੀੜਾ ਰਾਜ ਸਭਾ ਮੈਂਬਰ ਸੰਤ ਸੀਚੇਵਾਲ ਜੀ ਨੇ ਚੁੱਕਿਆ ਹੋਇਆ ਹੈ pic.twitter.com/4LnU0U66wQ

— AAP Punjab (@AAPPunjab)

ಆಪ್‌ ನಾಯಕರ ಪ್ರತಿಕ್ರಿಯೆ ಹೀಗಿದೆ:
ಭಗವಂತ್‌ ಮಾನ್‌ ಅಸ್ವಸ್ಥರಾದ ಬಳಿಕ ಅವರನ್ನು ಪಂಜಾಬ್‌ನಿಂದ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೂ, ಆಪ್‌ ನಾಯಕರು ಭಗವಂತ್‌ ಮಾನ್‌ ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಹೇಳಿದ್ದಾರೆ. 

ಅಲ್ಲದೆ, ಪಂಜಾಬ್‌ ಸಿಎಂ ಕೇವಲ ಸಾಮಾನ್ಯ ತಪಾಸಣೆಗಷ್ಟೇ ಆಸ್ಪತ್ರೆಗೆ ಹೋಗಿದ್ದರು. ಹಾಗೂ ಗುರುವಾರ ಸಂಜೆಯೇ ಅವರನ್ನು ಡಿಸ್ಚಾರ್ಜ್‌ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ. 
‘ಕಾಲಿ ಬೇನ್‌’ ಜಲಾಶಯದ 22ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಪಂಜಾಬ್‌ ಸಿಎಂಗೆ ಭಾಗಿಯಾಗಲು ಖ್ಯಾತ ಪರಿಸರವಾದಿ ಹಾಗೂ ರಾಜ್ಯಸಭೆ ಸದಸ್ಯ ಬಾಬಾ ಬಲ್ಬೀರ್‌ ಸಿಂಗ್‌ ಆಹ್ವಾನಿಸಿದ್ದರು. ಅಲ್ಲದೆ, ಪಂಜಾಬ್‌ನ ಸುಲ್ತಾನಪುರ್‌ ಲೋಧಿ ಪ್ರದೇಶದ ನೀರನ್ನು ಕುಡಿಯುವಂತೆಯೂ ಹೇಳಿದ್ದರು ಎನ್ನಲಾಗಿದೆ. 

Punjab: ಗಾಯಕ ಸಿಧು ಮೂಸೇವಾಲ ಹಂತಕರ ಎನ್‌ಕೌಂಟರ್‌

ಅವರ ಈ ಸವಾಲನ್ನು ಒಪ್ಪಿಕೊಂಡ ಭಗವಂತ್‌ ಮಾನ್‌ ಆ ನೀರು ಕುಡಿದಿದ್ದರು ಎಂದು ತಿಳಿದುಬಂದಿದೆ. ಸ್ಥಳೀಯ ನಗರಗಳ ಹಾಗೂ ಗ್ರಾಮಗಳ ಗಲೀಜು, ತ್ಯಾಜ್ಯದಿಂದ ಆ ನೀರು ಕಲುಷಿತವಾಗಿರುತ್ತದೆ ಎನ್ನಲಾಗಿದೆ. ಅಲ್ಲದೆ, ಆ ಪ್ರದೇಶದ ಬಳಿ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಸಸಿಯೊಂದನ್ನೂ ನೆಟ್ಟಿದ್ದಾರೆ ಎನ್ನಲಾಗಿದೆ.

ಕಳೆದ 22 ವರ್ಷಗಳಿಂದಲೂ ‘ಕಾಲಿ ಬೇನ್‌’ ಜಲಾಶಯವನ್ನು ಪವಿತ್ರಗೊಳಿಸಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಈಗ ಆ ನೀರು ಶುಚಿಯಾಗಿದೆ ಎಂದೂ ಹೇಳಿಕೊಳ್ಳಲಾಗಿತ್ತು. ಆದರೀಗ, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಆ ನೀರು ಕುಡಿದ ಎರಡೇ ದಿನಗಳಲ್ಲಿ ಅಸ್ವಸ್ಥರಾಗಿರುವುದು ಆ ಜಲಾಶಯದ ಸ್ವಚ್ಛತೆಯ ಬಗ್ಗೆ ಆತಂಕಕಾರಿ ಮಾತುಗಳು ಕೇಳಿಬರುತ್ತಿದ್ದು, ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ. 

click me!