
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ಯೋಗಗುರು ಹಾಗೂ ಬೆಂಗಳೂರಿನ ಪ್ರಖ್ಯಾತ ಯೋಗ ತಜ್ಞ ಎಚ್. ಆರ್. ನಾಗೇಂದ್ರ ಜೂ.21ರಂದು ನ್ಯೂಯಾರ್ಕ್‌ನ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (ಐಡಿವೈ) ನೇತೃತ್ವ ವಹಿಸಲಿದ್ದಾರೆ.
ಇದಕ್ಕೂ ಮುನ್ನ ಅವರು ಜೂ.12-14ರವರೆಗೆ ನ್ಯೂಯಾರ್ಕ್‌ನ ಮಾಂಟಿಸೆಲ್ಲೊದಲ್ಲಿ ವಿಶೇಷ ಯೋಗ ಮತ್ತು ಸ್ವಾಸ್ಥ್ಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
‘ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ನ್ಯೂಯಾರ್ಕ್‌ಗೆ ಭೇಟಿ ನೀಡಲು ಸಂತೋಷವಾಗುತ್ತಿದೆ. ಅಲ್ಲಿನ ಭಾರತೀಯ ಕಾನ್ಸುಲೇಟ್ ಜನರಲ್ ಆಹ್ವಾನದ ಮೇರೆಗೆ ಟೈಮ್ಸ್ ಸ್ಕ್ವೇರ್ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅತೀವ ಗೌರವ ತಂದಿದೆ’ ಎಂದು ನಾಗೇಂದ್ರ ತಿಳಿಸಿದ್ದಾರೆ.
ನಾಗೇಂದ್ರ ಪ್ರಖ್ಯಾತ ಯೋಗ ಶಿಕ್ಷಕ, ಸಾಹಿತಿ ಹಾಗೂ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (ಎಸ್-ವ್ಯಾಸ) ಸಂಸ್ಥಾಪಕ ಉಪಕುಲಪತಿ. ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಇವರು ಸುಮಾರು 35 ಕೃತಿಗಳನ್ನು ರಚಿಸಿದ್ದಾರೆ. ಯೋಗಸಾಧನೆಗಾಗಿ 2016ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ವರ್ಷದ ಯೋಗ ದಿನದ ಥೀಂ ‘ಆರೋಗ್ಯಕರ ವಯಸ್ಸಿಗಾಗಿ ಯೋಗ’. ಇದು ದೀರ್ಘಾಯುಷ್ಯ, ಸಕ್ರಿಯತೆ ಮತ್ತು ಮುಂಚಿತ ಆರೋಗ್ಯ ರಕ್ಷಣೆಗಾಗಿ ಯೋಗವನ್ನು ಸಾಧನವನ್ನಾಗಿ ಬಳಸುವುದನ್ನು ಉತ್ತೇಜಿಸುತ್ತದೆ. 2014ರ ಡಿ.11ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು.
ಮೊದಲ ಯೋಗ ದಿನವನ್ನು 2015ರ ಜೂ.21ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವಾದ್ಯಂತ ಲಕ್ಷಾಂತರ ಜನ ಈ ದಿನವನ್ನು ಆಚರಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ