ಬೆಂಗಳೂರು ಏರ್‌ಪೋರ್ಟ್: ತಮಿಳು ಅಯಾನ್ ಸಿನಿಮಾ ರೀತಿ ಕೊಕೇನ್ ಮಾತ್ರೆಗಳನ್ನು ನುಂಗಿಬಂದ ಡ್ರಗ್ಸ್‌ ಪೆಡ್ಲರ್!

By Sathish Kumar KH  |  First Published Dec 20, 2023, 4:55 PM IST

ತಮಿಳಿನ ಅಯಾನ್ ಸಿನಿಮಾ ಮಾದರಿಯಲ್ಲಿ ಡ್ರಗ್ಸ್‌ ಮಾತ್ರೆಗಳನ್ನು ಹೊಟ್ಟೆಯೊಳಗೆ ನುಂಗಿ ಬೆಂಗಳೂರಿಗೆ ಆಗಮಿಸಿದ ಇಥಿಯೋಪಿಯಾ ಡ್ರಗ್ಸ್‌ ಪೆಡ್ಲರ್ ಬಂಧನ. 20 ಕೋಟಿ ಮೌಲ್ಯದ ಡ್ರಗ್ಸ್‌ ವಶ. 


ಬೆಂಗಳೂರು (ಡಿ.20): ತಮಿಳಿನ ನಟ ಸೂರ್ಯ ಅವರ ಅಯಾನ್ ಸಿನಿಮಾ ಮಾದರಿಯಲ್ಲಿ ಡ್ರಗ್ಸ್‌ ಮಾತ್ರೆಗಳನ್ನು ಹೊಟ್ಟೆಯೊಳಗೆ ನುಂಗಿ ಬೆಂಗಳೂರಿಗೆ ಆಗಮಿಸಿದ ಇಥಿಯೋಪಿಯಾ ಡ್ರಗ್ಸ್‌ ಪೆಡ್ಲರ್‌ನನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ. ಈತನಿಂದ 20 ಕೋಟಿ ಮೌಲ್ಯದ ಕೊಕೇನ್ ಡ್ರಗ್ಸ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಇಲ್ಲಿನ ಸ್ಥಳೀಯರಿಗೆ ಡ್ರಗ್ಸ್ ನಶೆಯನ್ನೇರಿಸಲು ಕೋಟಿ ಕೋಟಿ ರೂ. ಮೌಲ್ಯದ ಕೊಕೇನ್ ವಸ್ತುವನ್ನು ಸಾಗಣೆ ಮಾಡಲಾಗುತ್ತಿದೆ. ಈಗಾಗಲೇ ಹಲವು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಡ್ರಗ್ಸ್ ಪೆಡ್ಲರ್‌ಗಳಿಂದ ಕೋಟ್ಯಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೂ, ಬೆಂಗಳೂರಿನ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಕರ್ನಾಟಕ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವ ನಿಟ್ಟಿನಲ್ಲಿ ತಮಿಳು ನಟ ಸೂರ್ಯ ಅವರ ಅಯಾನ್ ಸಿನಿಮಾದ ರೀತಿಯಲ್ಲಿ ಮಾತ್ರೆಗಳಲ್ಲಿ ಕೊಕೇನ್ ಅಡಗಿಸಿ ಆ ಮಾತ್ರೆಗಳನ್ನು ನುಂಗಿಕೊಂಡು ಬಂದಿದ್ದ ವ್ಯಕ್ತಿಯನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

Tap to resize

Latest Videos

ಚನ್ನಗಿರಿ ಮಾಜಿ ಶಾಸಕ ಮಾಡಾಳು ವಿರುಪಾಕ್ಷಪ್ಪಗೆ ಕ್ಲೀನ್ ಚಿಟ್ ಕೊಟ್ಟ ಹೈಕೋರ್ಟ್!

ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಿಂದ ಕೋಟ್ಯಂತರ ಮೌಲ್ಯದ ಡ್ರಗ್ಸ್ ಸಾಗಣೆ ಜಾಲ ಬಯಲಿಗೆ ಬಂದಿದೆ. ಈ ಮೂಲಕ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟಿ ಕೋಟಿ ಮೌಲ್ಯದ ಕೊಕೇನ್ ವಶಕ್ಕೆ ಪಡೆದಿದ್ದಾರೆ. ಅದಿದಿಸ್ ಅಬಾಬಾದಿಂದ ಇಥೋಪಿಯಾ ಏರ್ಲೈನ್ಸ್ ನಲ್ಲಿ ಬಂದಿದ್ದ ಆರೋಪಿ ಕ್ಯಾಪ್ಸೂಲ್ಸ್ ನಲ್ಲಿ ಡ್ರಗ್ಸ್ ಅಡಗಿಸಿ ನುಂಗಿದ್ದನು. ಈತನ ಮೇಲೆ ಅನುಮಾನ ವ್ಯಕ್ತಪಡಿಸಿದ ಕಸ್ಟಮ್ಸ್ ಅಧಿಕಾರಿಗಳು ಪರೀಕ್ಷೆ ಮಾಡಿದಾಗ ಸತ್ಯ ಬೆಳಕಿಗೆ ಬಂದಿದೆ. ಈ ಆರೋಪಿಯಿಂದ ಒಟ್ಟು 20 ಕೋಟಿ ಮೌಲ್ಯದ 2 ಕೆಜಿ ಕೋಕೆನ್ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.

Bengaluru: ಹೊಸ ವರ್ಷಕ್ಕೆ ಡ್ರಗ್ಸ್ ಸೇಲ್‌ ಮಾಡಲು ಬಂದ ವಿದೇಶ ಪ್ರಜೆ: ಸೋಪು, ಚಾಕೋಲೇಟ್ ಬಾಕ್ಸ್‌ನಲ್ಲಿ ಸಾಗಣೆ

ಇನ್ನು ಆರೋಪಿ 50ಕ್ಕೂ ಅಧಿಕ ಕ್ಯಾಪ್ಸೂಲ್‌ಗಳನ್ನ (ದೊಡ್ಡ ಮಾತ್ರೆಗಳು) ನುಂಗಿಕೊಂಡು ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದನು. ಬೆಂಗಳೂರಿಗೆ ಈಗಾಗಲೇ ಹಲವು ದೇಶಗಳಿಂದ ಡ್ರಗ್ಸ್ ಸರಬರಾಜು ಆಗುತ್ತಿದೆ ಎಂಬ ಮಾಹಿತಿಯನ್ನು ಪಡೆದಿದ್ದ ಏರ್‌ಪೋರ್ಟ್‌ ಅಧಿಕಾರಿಗಳು ಎಲ್ಲ ವಿದೇಶಿ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈತನ ಡನವಳಿಕೆಯಿಂದ ಅನುಮಾನಗೊಂಡು ಪರೀಕ್ಷೆ ಮಾಡಿದಾಗ ಹೊಟ್ಟೆಯಲ್ಲಿ ಡ್ರಗ್ಸ್ ಮಾತ್ರೆಗಳಿರುವುದು ಪತ್ತೆಯಾಗಿದೆ. ಈತನ ಹೊಟ್ಟೆಯಲ್ಲಿದ್ದ ಕ್ಯಾಪ್ಸೂಲ್ಸ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಹೊರಗೆ ತೆಗೆದಿದ್ದಾರೆ. ಇನ್ನು ಆರೋಪಿಯನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು, ಈ ಜಾಲದ ಹಿಂದೆ ಯಾರಿದ್ದಾರೆ ಮತ್ತು ಇನ್ನು ಎಷ್ಟು ಜನರು ಹೀಗೆ ಆಗಮಿಸುತ್ತಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ.

click me!