ಬುಧವಾರ ಅಪ್ಪಳಿಸಲಿದೆ ಪ್ರಚಂಡಮಾರುತ ದಾಳಿ!

Published : May 24, 2021, 08:33 AM ISTUpdated : May 24, 2021, 08:45 AM IST
ಬುಧವಾರ ಅಪ್ಪಳಿಸಲಿದೆ ಪ್ರಚಂಡಮಾರುತ ದಾಳಿ!

ಸಾರಾಂಶ

* ನಾಡಿದ್ದು ಸಂಜೆ ಪ್ರಚಂಡಮಾರುತ ದಾಳಿ * ಪಶ್ಚಿಮ ಬಂಗಾಳ, ಒಡಿಶಾಕ್ಕೆ ಅಪ್ಪಳಿಸಲಿದೆ ಭೀಕರ ‘ಯಾಸ್‌’ ಮಾರುತ * 180 ಕಿ.ಮೀ. ವೇಗದಲ್ಲಿ ಲಗ್ಗೆ ಸಂಭವ, ಸಿದ್ಧತೆ ಪರಾಮರ್ಶಿಸಿದ ಪ್ರಧಾನಿ

ನವದೆಹಲಿ(ಮೇ.24): ‘ತೌಕ್ಟೆ’ ಚಂಡಮಾರುತದ ದಾಳಿಯಿಂದ ದೇಶದ ಪಶ್ಚಿಮ ಕರಾವಳಿ ಚೇತರಿಸಿಕೊಳ್ಳುತ್ತಿರುವಾಗಲೇ, ಪೂರ್ವ ಕರಾವಳಿಗೆ ಈಗ ತೀವ್ರ ಸ್ವರೂಪದ ಚಂಡಮಾರುತದ ಆತಂಕ ಎದುರಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಸೋಮವಾರದ ವೇಳೆಗೆ ಚಂಡಮಾರುತದ ಸ್ವರೂಪ ಪಡೆದುಕೊಳ್ಳಲಿದೆ. ಮಂಗಳವಾರ ಇದು ಮತ್ತಷ್ಟುಶಕ್ತಿಯನ್ನು ಗಳಿಸಿಕೊಂಡು ಬುಧವಾರ ಸಂಜೆ ಪಶ್ಚಿಮ ಬಂಗಾಳ ಹಾಗೂ ಉತ್ತರ ಒಡಿಶಾ ಕರಾವಳಿಗೆ ಗಂಟೆಗೆ 185 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಚಂಡಮಾರುತಕ್ಕೆ ಒಮಾನ್‌ ದೇಶ ‘ಯಾಸ್‌’ ಎಂದು ನಾಮಕರಣ ಮಾಡಿದೆ. ಪರ್ಷಿಯಾ ಭಾಷೆಯ ಪದ ಅದಾಗಿದ್ದು, ಮಲ್ಲಿಗೆ ಎಂಬ ಅರ್ಥವಿದೆ.

ಯಾಸ್ ಚಂಡಮಾರುತ: ಜನರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲು ಮೋದಿ ಸೂಚನೆ!

ಚಂಡಮಾರುತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಸಭೆ ನಡೆಸಿ, ಅಪಾಯದಂಚಿನಲ್ಲಿರುವ ಜನರ ಸ್ಥಳಾಂತರ ಸೇರಿದಂತೆ ಹಲವು ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ.

ಗಂಭೀರ ಸ್ವರೂಪ:

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸೋಮವಾರ ಬೆಳಗ್ಗೆ ಅದು ಚಂಡಮಾರುತವಾಗಿ ಬದಲಾಗಲಿದೆ. ಉತ್ತರ ಹಾಗೂ ವಾಯವ್ಯ ದಿಕ್ಕಿನಡೆಗೆ ಸಾಗಿ ಬುಧವಾರ ಸಂಜೆ ವೇಳೆಗೆ ಪೂರ್ವ ಕರಾವಳಿಯನ್ನು ಅಪ್ಪಳಿಸಲಿದೆ. ಒಡಿಶಾದ ಪಾರಾದೀಪ್‌ ಹಾಗೂ ಬಂಗಾಳದ ಸಾಗರ ದ್ವೀಪಸಮೂಹದ ನಡುವೆ ಹಾದು ಹೋಗಲಿದೆ. ಈ ಚಂಡಮಾರುತದಿಂದ 155ರಿಂದ 165 ಕಿ.ಮೀ. ವೇಗದ ಗಾಳಿ ಇರಲಿದೆ. ಅದು 185 ಕಿ.ಮೀ. ವರೆಗೂ ತಲುಪಲಿದೆ. ಬಂಗಾಳ ಹಾಗೂ ಒಡಿಶಾ ಕರಾವಳಿಯುದ್ದಕ್ಕೂ ಚಂಡಮಾರುತದಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾಸ್‌’ ಚಂಡಮಾರುತ ಹಿನ್ನೆಲೆ: 12 ರೈಲುಗಳು ರದ್ದು

ಪ್ರಧಾನಿ ಸಭೆ:

ಚಂಡಮಾರುತ ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಸಭೆ ನಡೆಸಿ ಸಿದ್ಧತೆ ಪರಿಶೀಲಿಸಿದರು. ಅಪಾಯದಂಚಿನಲ್ಲಿರುವ ಜನರನ್ನು ಸಕಾಲಕ್ಕೆ ಸ್ಥಳಾಂತರಿಸಬೇಕು. ರಾಜ್ಯಗಳ ಜತೆ ಉತ್ತಮ ಸಮನ್ವಯತೆಯಿಂದ ಕೆಲಸ ಮಾಡಬೇಕು. ಚಂಡಮಾರುತದಿಂದ ವಿದ್ಯುತ್‌, ಸಂವಹನ ಸಂಪರ್ಕದಲ್ಲಿ ವ್ಯತ್ಯಯ ಉಂಟಾದರೆ ಅದನ್ನು ತೀರಾ ಕಡಿಮೆ ಸಮಯದಲ್ಲಿ ಪುನಾಸ್ಥಾಪಿಸಬೇಕು ಎಂದು ಸೂಚನೆ ನೀಡಿದರು ಎಂದು ಪ್ರಧಾನಿ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ಚಂಡಮಾರುತದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರು ಹಾಗೂ ಲಸಿಕೆ ಪಡೆಯುವವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು ಎಂದೂ ಹೇಳಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತೀಯನ ಬಳಿ ಇದ್ದ ಬ್ರಾಡ್ಮನ್‌ರ ಕ್ಯಾಪ್‌ ಹರಾಜು- 1947-48ರ ಭಾರತ ವಿರುದ್ಧ ಸರಣೀಲಿ ಧರಿಸಿದ್ದ ಟೋಪಿ
2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ