ಬಂಗಾಳದಲ್ಲಿ ರಾಜ್ಯಪಾಲರ ಕಾರಿಗೇ ತಡೆ, ಕಪ್ಪು ಬಾವುಟ ಪ್ರದರ್ಶನ!

By Kannadaprabha News  |  First Published May 15, 2021, 9:04 AM IST

* ಬಂಗಾಳದಲ್ಲಿ ರಾಜ್ಯಪಾಲರ ಕಾರಿಗೇ ತಡೆ

* ಹಿಂಸಾಚಾರ ಪೀಡಿತ ಕೂಚ್‌ಬೆಹಾರ್‌ ಭೇಟಿ ವೇಳೆ ಘಟನೆ

* ರಾಜ್ಯಪಾಲ ಧನಖರ್‌ ಕಾರು ತಡೆದು ಕಪ್ಪು ಬಾವುಟ ಪ್ರದರ್ಶನ


ಕೂಚ್‌ಬೆಹಾರ್‌(ಮೇ.15): ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ಟಿಎಂಸಿ ಕಾರ್ಯಕರ್ತರಿಂದ ಬಿಜೆಪಿ ನಾಯಕರು ಮೇಲೆ ದಾಳಿ, ಹತ್ಯೆಯಂಥ ಘಟನೆ ನಡೆದ ಪಶ್ಚಿಮ ಬಂಗಾಳದಲ್ಲಿ ಇದೀಗ ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರನ್ನೇ ಜನರು ಅಡ್ಡಗಟ್ಟಿದ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ. ಇದು ರಾಜ್ಯದಲ್ಲಿನ ಭದ್ರತೆ ಮತ್ತು ಸುರಕ್ಷತೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹಿಂಸಾಚಾರದಿಂದ ತೊಂದರೆಗೆ ಒಳಗಾದ ಜನರ ಅಹವಾಲುಗಳನ್ನು ಆಲಿಸಲು ರಾಜ್ಯಪಾಲ ಜಗದೀಪ್‌ ಧನಖರ್‌ ಅವರು ಕೂಚ್‌ಬೆಹಾರ್‌ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಕಾರನ್ನು ಅಡ್ಡಗಟ್ಟಿದ ಜನರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್‌ ಎಂದು ಘೋಷಣೆ ಕೂಗಿದ್ದಾರೆ.

Tap to resize

Latest Videos

ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಧನಖರ್‌ ‘ದೇಶ ಕೊರೋನಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ, ಪಶ್ಚಿಮ ಬಂಗಾಳ ಕೊರೋನಾ ಜೊತೆಗೆ ಚುನಾವಣೋತ್ತರ ಹಿಂಸಾಚಾರವನ್ನು ಎದುರಿಸುತ್ತಿದೆ. ಜನರು ಯಾರಿಗೆ ಮತ ಹಾಕಬೇಕು ಎಂಬುದನ್ನು ಕೆಲವೇ ಮಂದಿ ನಿರ್ಧರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶಿಷ್ಟಾಚಾರಗಳನ್ನು ಬದಿಗೊತ್ತಿ ರಾಜ್ಯ ಸರ್ಕಾರಕ್ಕೆ ಮಾಹಿತಿಯನ್ನೂ ನೀಡದೇ ಅವರು ಉದ್ದೇಶಪೂರ್ವಕವಾಗಿಯೇ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ದೂರಿದ್ದಾರೆ.

click me!