
ಲಕ್ನೋ (ಅ.24): ಬರೋಬ್ಬರಿ 200 ಟನ್ ತೂಕದ ಭಾರಿ ಯಂತ್ರವನ್ನು ಹೊತ್ತ 308 ಚಕ್ರಗಳ 'ಬಾಹುಬಲಿ ಟ್ರಕ್' (Bahubali Truck) ಸುದೀರ್ಘ 6 ತಿಂಗಳ ಪ್ರಯಾಣದ ನಂತರ ಕೊನೆಗೂ ತನ್ನ ಗುರಿಯಾದ ಉತ್ತರ ಪ್ರದೇಶದ ಲಖಿಂಪುರ್-ಖೇರಿ (Lakhimpur-Kheri) ಜಿಲ್ಲೆಯನ್ನು ತಲುಪಿದೆ. ಜಗತ್ತಿನ ಗಮನ ಸೆಳೆದ ಈ 'ಮಹಾಟ್ರಕ್' ಯುರೋಪ್ ಖಂಡದ ಬೆಲ್ಜಿಯಂ ದೇಶದಿಂದ ಹೊರಟು ಒಡಿಶಾ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ ಮೂಲಕ ಸಾಗಿ ಯುಪಿಗೆ ಬಂದಿಳಿದಿದೆ. ದಿನಕ್ಕೆ ಕೇವಲ 10 ರಿಂದ 20 ಕಿಲೋಮೀಟರ್ಗಳಷ್ಟು ದೂರವನ್ನು ಮಾತ್ರ ಕ್ರಮಿಸುತ್ತಿದ್ದ ಈ ವಾಹನವು, ಗಂಟೆಗೆ ಸರಾಸರಿ 4 ರಿಂದ 5 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿತ್ತು. ಹೋದಲ್ಲೆಲ್ಲಾ ಈ ರಾಕ್ಷಸ ವಾಹನವನ್ನು ನೋಡಲು ರಸ್ತೆಗಳ ಇಕ್ಕೆಲಗಳಲ್ಲಿ ಜನಸಾಗರವೇ ಹರಿದುಬರುತ್ತಿತ್ತು.
ಉತ್ತರ ಪ್ರದೇಶದ ಲಖಿಂಪುರ್-ಖೇರಿ ಜಿಲ್ಲೆಯ ಕುಂಭಿ ಎನ್ನುವಲ್ಲಿ ಸ್ಥಾಪನೆಯಾಗುತ್ತಿರುವ ಭಾರತದ ಮೊದಲ 'ಪಾಲಿಲ್ಯಾಕ್ಟಿಕ್ ಆಸಿಡ್' (Polylactic Acid) ಆಧಾರಿತ ಬಯೋಪ್ಲಾಸ್ಟಿಕ್ ತಯಾರಿಕಾ ಘಟಕಕ್ಕಾಗಿ ಬೆಲ್ಜಿಯಂನಿಂದ ಈ 200 ಟನ್ ತೂಕದ ಬೃಹತ್ 'ವ್ಯಾಕ್ಯೂಮ್ ಬಾಯ್ಲರ್' (Vacuum Boiler) ಅನ್ನು ತರಿಸಲಾಗಿದೆ. ಈ ಯಂತ್ರವು ಕಳೆದ ಮೇ ತಿಂಗಳಿನಲ್ಲಿ ಬೆಲ್ಜಿಯಂನಿಂದ ಸಮುದ್ರ ಮಾರ್ಗವಾಗಿ ಒಡಿಶಾದ 'ಪ್ಯಾರಾದೀಪ್' ಬಂದರಿಗೆ (Paradip Port) ತಲುಪಿತ್ತು. ಅಲ್ಲಿಂದ ಇದನ್ನು ರಸ್ತೆ ಮಾರ್ಗವಾಗಿ ಸಾಗಿಸಲು ಅತ್ಯಾಧುನಿಕ ಹೈಡ್ರಾಲಿಕ್ ಮಲ್ಟಿ-ಆಕ್ಸಲ್ ಟ್ರೇಲರ್ಗೆ (Hydraulic Multi-axle Trailer) ಲೋಡ್ ಮಾಡಲಾಗಿತ್ತು.
ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ ಮೂಲಕ ಸಾಗುವಾಗ ಅತ್ಯಂತ ಕಿರಿದಾದ ರಸ್ತೆ ತಿರುವುಗಳು, ಸೇತುವೆಗಳು, ವಿದ್ಯುತ್ ಕಂಬಗಳು ಹಾಗೂ ಮರಗಳ ಕಾರಣದಿಂದ ವಾಹನದ ಚಲನೆಗೆ ಭಾರಿ ಅಡಚಣೆಗಳು ಎದುರಾಗಿದ್ದವು. ಇದನ್ನು ನಿವಾರಿಸಲು ವಿವಿದ ಇಲಾಖೆಗಳ ತಜ್ಞರ ತಂಡವೇ ವಾಹನದ ಜೊತೆಗೆ ಸಾಗಿತ್ತು.
ವಾರಣಾಸಿ ಜಿಲ್ಲೆಯ ಒಂದು ಭಾಗದಲ್ಲಿ ಈ ಬೃಹತ್ ಟ್ರಕ್ ಸಾಗಲು ಜಾಗವಿಲ್ಲದೆ, ರಸ್ತೆಗೆ ಅಡ್ಡವಾಗಿದ್ದ ಪಾದಚಾರಿ ಮೇಲ್ಸೇತುವೆಯನ್ನೇ (Footbridge) ತೆರವುಗೊಳಿಸಲಾಯಿತು. ಇನ್ನು ಚಲನೆಯ ಸುಲಭಕ್ಕಾಗಿ ಆರಂಭದಲ್ಲಿದ್ದ 308 ಚಕ್ರಗಳ ಸಂಖ್ಯೆಯನ್ನು ನಂತರ 240 ಕ್ಕೆ ಇಳಿಸಲಾಯಿತು. ಮಾರ್ಗದಲ್ಲಿದ್ದ ನೂರಾರು ಸೈನ್ ಬೋರ್ಡ್ಗಳು ಹಾಗೂ ಸ್ವಾಗತ ಕಮಾನುಗಳನ್ನು ತೆರವುಗೊಳಿಸಿ ದಾರಿ ಮಾಡಿಕೊಡಲಾಯಿತು.
ಅಕ್ಟೋಬರ್ 20 ರಂದು ಈ ಟ್ರಕ್ ಲಖಿಂಪುರ್-ಖೇರಿ ಜಿಲ್ಲೆಯ ಗಡಿಯನ್ನು ಪ್ರವೇಶಿಸಿತು. ಹಾದಿಯುದ್ದಕ್ಕೂ ಈ ಅಪರೂಪದ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಮತ್ತು ಮೊಬೈಲ್ಗಳಲ್ಲಿ ಫೋಟೋ, ವಿಡಿಯೋ ಸೆರೆಹಿಡಿಯಲು ನೂರಾರು ಜನರು ಮುಗಿಬಿದ್ದ ಕಾರಣ, ಜನರನ್ನು ಚದುರಿಸಲು ಹಲವೆಡೆ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಸದ್ಯ ಈ 'ಬಾಹುಬಲಿ ಟ್ರಕ್'ನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ.
ಕುಂಭಿಯಲ್ಲಿ ನಿರ್ಮಾಣವಾಗುತ್ತಿರುವ ಈ ಬಯೋಪ್ಲಾಸ್ಟಿಕ್ ಪ್ಲಾಂಟ್ಗೆ ಈ ಬಾಯ್ಲರ್ ಅತ್ಯಂತ ಪ್ರಮುಖ ಭಾಗವಾಗಿದೆ. ಸುಮಾರು ₹3,000 ಕೋಟಿಗೂ ಅಧಿಕ ವೆಚ್ಚದ ಈ ಯೋಜನೆಯು ಕಬ್ಬಿನಿಂದ ಪಡೆಯುವ ಸಕ್ಕರೆಯನ್ನು ಬಳಸಿ 'ಪಾಲಿಲ್ಯಾಕ್ಟಿಕ್ ಆಸಿಡ್' (PLA) ಉತ್ಪಾದಿಸುವ ಗುರಿಯನ್ನು ಹೊಂದಿದೆ. ಈ ಪರಿಸರ ಸ್ನೇಹಿ ವಸ್ತುವಿನಿಂದ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಕಪ್ಗಳು, ಟ್ರೇಗಳು, ಪ್ಯಾಕೇಜಿಂಗ್ ಸಾಮಗ್ರಿಗಳು ಹಾಗೂ ಇತರ ದೈನಂದಿನ ವಸ್ತುಗಳನ್ನು ತಯಾರಿಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ