ಹಸೀನಾ ತವರಿನಲ್ಲಿ ಭಾರಿ ಹಿಂಸಾಚಾರಕ್ಕೆ 4 ಜನ ಬಲಿ: ಸತ್ಯಜಿತ್ ರೇ ನಿವಾಸ ಧ್ವಂಸ ನಿಲ್ಲಿಸಿದ ಬಾಂಗ್ಲಾದೇಶ

Published : Jul 17, 2025, 09:49 AM ISTUpdated : Jul 17, 2025, 10:02 AM IST
Sheikh Hasina

ಸಾರಾಂಶ

ಬಾಂಗ್ಲಾದೇಶದ ಗೋಪಾಲಗಂಜ್‌ನಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 

ಢಾಕಾ: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ತಂದೆ ವಂಗಬಂಧು ಮುಜಿಬುರ್ ರೆಹಮಾನ್ ಅವರ ತವರೂರು ಗೋಪಾಲಗಂಜ್‌ನಲ್ಲಿ ಬುಧವಾರ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ನಡೆಸಿದ ಸಮಾವೇಶದ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ಈ ವೇಳೆ ಹಸೀನಾ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಕಾದಾಟ ನಡೆದು 4 ಮಂದಿ ಸಾವನ್ನಪ್ಪಿದ್ದಾರೆ.

ಸತ್ಯಜಿತ್ ರೇ ನಿವಾಸ ಧ್ವಂಸ ನಿಲ್ಲಿಸಿದ ಬಾಂಗ್ಲಾದೇಶ

ಢಾಕಾ: ಬಾಂಗ್ಲಾದೇಶದ ರಾಜಧಾನಿ ಬಳಿ ಖ್ಯಾತ ನಿರ್ಮಾಪಕ ಸತ್ಯಜಿತ್ ರೇ ಅವರ ಪೂರ್ವಜರ ಮನೆಯ ಧ್ವಂಸವನ್ನು ಬುಧವಾರ ನಿಲ್ಲಿಸಲಾಗಿದೆ ಎಂದು ಗೊತ್ತಾಗಿದೆ. ಧ್ವಂಸಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ. ಮನೆಯನ್ನು ಸ್ಮಾರಕ ಮಾಡಲು ನೆರವು ನೀಡುವುದಾಗಿ ಭಾರತ ಮಂಗಳವಾರ ಹೇಳಿತ್ತು.

ಏರ್ ಇಂಡಿಯಾ ಬಿ787 ಲಾಕ್ ಸಮಸ್ಯೆ ಇಲ್ಲ:

ನವದೆಹಲಿ: ಏ‌ರ್ ಇಂಡಿಯಾ ಬುಧವಾರ ತನ್ನ ಬೋಯಿಂಗ್ 787 ವಿಮಾನಗಳಲ್ಲಿನ ಇಂಧನ ನಿಯಂತ್ರಣ ಸ್ವಿಚ್‌ಗಳ ಲಾಕಿಂಗ್ ಕಾರ್ಯವಿಧಾನ ಪರಿಶೀಲನೆ ಪೂರ್ಣಗೊಳಿಸಿದೆ ಮತ್ತು ಅದರಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಅಹಮದಾಬಾದ್ ವಿಮಾನ ಅಪಘಾತ ಕ್ಕೂ ಮುನ್ನ ಇಂಧನ ಸ್ವಿಚ್ ಕಡಿತಗೊಳಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿತ್ತು. ಹೀಗಾಗಿ ಬಿ787 ಹಾಗೂ 737 ವಿಮಾನಗಳ ಸ್ವಿಚ್ ತಪಾಸಣೆ ನಡೆದಿದೆ.

ಇಂಡಿಗೋ ಎಂಜಿನ್ ವೈಫಲ್ಯ: ತುರ್ತು ಭೂಸ್ಪರ್ಶ

ಮುಂಬೈ: ದೆಹಲಿಯಿಂದ ಗೋವಾಗೆ ಹೊರಟ ಇಂಡಿಗೋ ವಿಮಾನ ಎಂಜಿನ್ ವೈಫಲ್ಯ ಕಾರಣ ಮುಂಬೈನಲ್ಲಿ ಬುಧವಾರ ರಾತ್ರಿ 9.52ಕ್ಕೆ ತುರ್ತು ಭೂಸ್ಪರ್ಶ ಮಾಡಿದೆ. ಇದು ಏರ್‌ಬಸ್ 320 ವಿಮಾನವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಮೂಲಗಳು ಹೇಳಿವೆ.

ಚಪ್ಪಲಿ ನಕಲು ಬಳಿಕ ಡ್ಯಾಮೇಜ್ ಕಂಟ್ರೋಲ್

ಕೊಲ್ಲಾಪುರ: 300 ರು.ನಷ್ಟು ಬೆಲೆ ಬಾಳುವ ಪ್ರಸಿದ್ಧ ಕೊಲ್ಲಾಪುರಿ ಚಪ್ಪಲಿಯ ವಿನ್ಯಾಸವನ್ನು ನಕಲು ಮಾಡಿ, ಅದನ್ನು 1.20 ಲಕ್ಷ ರು.ಗಳಿಗೆ ಮಾರಾಟ ಮಾಡಲು ಮುಂದಾಗಿ ಆಕ್ರೋಶಕ್ಕೆ ತುತ್ತಾಗಿದ್ದ ಇಟಲಿಯ ಫ್ಯಾಷನ್ ಕಂಪನಿ 'ಪ್ರಾಡಾ', ಇದೀಗ ತನ್ನ ತಜ್ಞರ ತಂಡವನ್ನು ಕೊಲ್ಲಾಪುರಕ್ಕೆ ಕಳಿಸಿ ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದೆ. ಪ್ರಾಡಾದ ಸಿಬ್ಬಂದಿ ಕೊಲ್ಲಾಪುರಕ್ಕೆ ಬಂದು ಸ್ಥಳೀಯ ಚಪ್ಪಲಿ ತಯಾರಿಕೆ ವಿಭಾಗಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿನ ಕುಶಲಕರ್ಮಿಗಳ ಜೊತೆ ಮಾತುಕತೆ ನಡೆಸಿ ಚಪ್ಪಲಿ ತಯಾರಿಕೆ ಕುರಿತು ಮಾಹಿತಿ ಪಡೆದಿದ್ದಾರೆ. ಇದು ಕೊಲ್ಲಾಪುರಿ ಚಪ್ಪಲಿ ತಯಾರಕರ ಜತೆ ಪ್ರಾಡಾ ಒಪ್ಪಂದಕ್ಕೆ ಮುಂದಾಗಿದೆಯೇ ಎಂಬ ಕುತೂಹಲ ಹುಟ್ಟುಹಾಕಿದೆ.

ಸರ್ಕಾರ ಸೇರಿ: ಉದ್ಧವ್‌ಗೆ ಫಡ್ನವೀಸ್ ನೇರ ಆಹ್ವಾನ!

ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ರಾಜಕೀಯ ವೈರಿ ಶಿವಸೇನೆ (ಯುಬಿಟಿ) ನಾಯಕ ಉದ್ದವ್ ಠಾಕ್ರೆಯನ್ನು ಬಹಿರಂಗ ವಾಗಿಯೇ ತಮ್ಮ ಪಕ್ಷಕ್ಕೆ ಆಹ್ವಾನಿಸಿದ ಪ್ರಸಂಗ ವಿಧಾನ ಪರಿಷತ್ತಿನಲ್ಲಿ ನಡೆಯಿತು. ಸದನದಲ್ಲಿ ಮಾತನಾಡಿದ ಫಡ್ನವೀಸ್, 'ನಮಗೆ 2029ರವರೆಗೆ ವಿಪಕ್ಷಕ್ಕೆ ಹೋಗಲು ಯಾವುದೇ ಅವಕಾಶವಿಲ್ಲ. ಆದರೆ ನಿಮಗೆ ಬರಬೇಕು ಅನಿಸಿದರೆ ಪರಿಗಣಿಸಿ. ಅದು ನಿಮಗೆ ಬಿಟ್ಟಿದ್ದು ಪರಿಗಣಿಸಬಹುದು' ಎಂದರು.

ಏಕಾಂಗಿ ಆಗಿ ಅಣ್ಣಾ ಡಿಎಂಕೆ ಸರ್ಕಾರ ರಚನೆ: ಎಡಪ್ಪಾಡಿ

ಚೆನ್ನೈ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಕೂಟ ಜಯ ಗಳಿಸಲಿದೆಯಾದರೂ, ಎಐಎಡಿಎಂಕೆ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ. ಹೀಗಾಗಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಬಿಜೆಪಿಗೆ ಅವರು ಕೈ ಕೊಡುತ್ತಾರಾ ಎಂಬ ಊಹಾಪೋಹ ಎದ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್