
ಚೆನ್ನೈ(ಮೇ.09): ಮಾನವ ಹಕ್ಕು ಉಲ್ಲಂಘನೆ ಆರೋಪದಲ್ಲಿ ಸ್ವಾಮೀಜಿಗಳ ಪಲ್ಲಕ್ಕಿ ಉತ್ಸವದ ಮೇಲೆ ಹೇರಿದ್ದ ನಿಷೇಧವನ್ನು ತಮಿಳುನಾಡು ಸರ್ಕಾರ ಭಾನುವಾರ ಹಿಂದಕ್ಕೆ ಪಡೆದಿದೆ. ಸರ್ಕಾರದ ನಿಷೇಧದ ವಿರುದ್ಧ ಹಲವು ಹಿಂದೂ ಸಂಘಟನೆಗಳು, ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಮೊದಲಾದವರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಮೆತ್ತಗಾದ ಡಿಎಂಕೆ ಸರ್ಕಾರ, ವಿವಾದಿತ ಆದೇಶ ಹಿಂದಕ್ಕೆ ಪಡೆದಿದೆ.
ಇದರೊಂದಿಗೆ ಮೇ 22ರಂದು ಮೈಲಾಡುತುರೈನ ಧರ್ಮಪುರಂ ಆಧೀನಂ ಮಠದಲ್ಲಿ ಸ್ವಾಮಿಗಳ ಪಲ್ಲಕ್ಕಿ ಉತ್ಸವಕ್ಕೆ ದಾರಿ ಸುಗಮವಾಗಿದೆ.
‘ಸ್ವಾಮೀಜಿಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಅದನ್ನು ಭಕ್ತರು ಹೊರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ’ ಎಂದು ಕೆಲವು ಸಂಘಟನೆಗಳು ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಧರ್ಮಪುರಂ ಆಧೀನಂ ಪೀಠದಲ್ಲಿ ಸ್ವಾಮೀಜಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ನಡೆಸುವ ಮೆರವಣಿಗೆಯನ್ನು ಸರ್ಕಾರ ನಿಷೇಧಿಸಿತ್ತು.
ಆದರೆ ಸರ್ಕಾರದ ನಿರ್ಧಾರ ವಿರೋಧಿಸಿದ್ದ ಸ್ವಾಮೀಜಿಗಳು, ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು, ಬೀದಿಗಿಳಿದು ಹೋರಾಟದ ಎಚ್ಚರಿಕೆ ನೀಡಿದ್ದವು. ಮತ್ತೊಂದೆಡೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ಧಾರ್ಮಿಕ ಆಚರಣೆಗಳಿಗೆ ಸ್ಟಾಲಿನ್ ಅಡ್ಡಿ ಉಂಟು ಮಾಡುತ್ತಿದ್ದಾರೆ. ನಿರ್ಬಂಧ ಸಡಿಲಿಸದಿದ್ದರೆ ನಾನೇ ಪಲ್ಲಕ್ಕಿ ಹೊರುವೆ’ ಎಂದು ಗುಡುಗಿದ್ದರು. ಮದುರೈ ಆಧೀನಂ ಪೀಠದ ಮಠಾಧೀಶ ಜ್ಞಾನಸಂಬಂಧ ದೇಶಿಕ ಸ್ವಾಮಿಗಳು ಕೂಡ, ‘ಬ್ರಿಟಿಷರು ಕೂಡ ಈ ಆಚರಣೆಗೆ ಅಡ್ಡಿ ಮಾಡಿರಲಿಲ್ಲ. ಸರ್ಕಾರಗಳು ಧಾರ್ಮಿಕತೆಗೆ ಗೌರವ ನೀಡಬೇಕು’ ಎಂದಿದ್ದರು. ಅದರ ಬೆನ್ನಲ್ಲೇ ಸರ್ಕಾರ ತನ್ನ ವಿವಾದಿತ ಆದೇಶ ಹಿಂದಕ್ಕೆ ಪಡೆದಿದೆ.
ಬೃಂದಾವನಕ್ಕೆ ಅಣ್ಣಾಮಲೈ, ಮುನಿಸ್ವಾಮಿ ವಿಶೇಷ ಪೂಜೆ
ಸಂಸದ ಎಸ್.ಮುನಿಸ್ವಾಮಿ ಮತ್ತು ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಮಲೈ ಅವರು ನಗರದ ನರಸಿಂಹ ತೀರ್ಥದ ನರಸಿಂಹ ಸ್ವಾಮಿ ಮತ್ತು ಶ್ರೀ ಪಾದರಾಜರ ಬೃಂದಾವನಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿದರು. ಶ್ರೀ ಪಾದರಾಜರ ಬೃಂದಾವನಕ್ಕೆ ಪ್ರದಕ್ಷಿಣೆ ಮಾಡಿದರು. ಮಠದ ಗುರುಗಳ ಆಶೀರ್ವಾದ ಪಡೆಯಲಾಯಿತು. ಗರುಡ ಹೋಮದಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿದರು.
ನಂತರ ಕೆ.ಜಿ.ಎಫ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರಟರು. ಸಮಾಜ ಸೇವಕ ಶೀಗೆಹಳ್ಳಿ ಸುಂದರ್ ಅವರ ನೇತೃತ್ವದಲ್ಲಿ ತಾಲ್ಲೂಕಿನ ಯುವಕರ ವತಿಯಿಂದ ಕೆ.ಜಿ.ಎಫ್ ವರೆಗೂ ಬೈಕ್ ಜಾಥಾ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ನಗರ ಅಧ್ಯಕ್ಷ ಮೋಹನ್, ತಾಲ್ಲೂಕು ಅಧ್ಯಕ್ಷ ಅಶೋಕ್, ಉಪಾಧ್ಯಕ್ಷರಾದ ಹೆಬ್ಬಣಿ ರವಿ, ಮಲ್ಲೆಕುಪ್ಪ ಸೋಮಶೇಖರ್, ಸಮಾಜ ಕಲ್ಯಾಣ ಮಂಡಳಿ ಸದಸ್ಯ ಎಂ.ಪಿ.ಅನೀಲ್ ಕುಮಾರ್, ಒಬಿಸಿ ಜಿಲ್ಲಾಧ್ಯಕ್ಷ ಕೋಳಿ ನಾಗರಾಜ್, ತಾಲ್ಲೂಕು ಅಧ್ಯಕ್ಷ ಪಲ್ಲಿಗರಪಾಳ್ಳ ರಮೇಶ್, ಪ್ರಕಾಶ್ ರೆಡ್ಡಿ, ಮೈಕ್ ಶಂಕರ್ ಮತ್ತಿತರರು ಇದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ