ಮಂಡ್ಯದಿಂದ ಕಳುವಾಗಿದ್ದ ಬಾಲಾಜಿ ವಿಗ್ರಹ ತಮಿಳ್ನಾಡಲ್ಲಿ ವಶ

By Govindaraj S  |  First Published Nov 10, 2022, 7:15 AM IST

ಕೆಲವು ವರ್ಷಗಳ ಹಿಂದೆ ಮಂಡ್ಯದ ದೇಗುಲವೊಂದರಿಂದ ಕಳವು ಮಾಡಲಾಗಿದ್ದ ಕೋಟ್ಯಂತರ ರು. ಬೆಲೆಬಾಳುವ, 600 ವರ್ಷಗಳ ಪುರಾತನ ಬಾಲಾಜಿ ವಿಗ್ರಹವನ್ನು ತಮಿಳುನಾಡಿನ ಸಿಐಡಿ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ. 


ಚೆನ್ನೈ (ನ.10): ಕೆಲವು ವರ್ಷಗಳ ಹಿಂದೆ ಮಂಡ್ಯದ ದೇಗುಲವೊಂದರಿಂದ ಕಳವು ಮಾಡಲಾಗಿದ್ದ ಕೋಟ್ಯಂತರ ರು. ಬೆಲೆಬಾಳುವ, 600 ವರ್ಷಗಳ ಪುರಾತನ ಬಾಲಾಜಿ ವಿಗ್ರಹವನ್ನು ತಮಿಳುನಾಡಿನ ಸಿಐಡಿ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಓರ್ವ ವಕೀಲ ಮತ್ತು ಮಧ್ಯವರ್ತಿಯೊಬ್ಬನನ್ನು ಬಂಧಿಸಲಾಗಿದೆ.

ಮಂಡ್ಯ ದೇಗುಲದ ಅರ್ಚಕರೊಬ್ಬರು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದು, ಈ ಸಮಸ್ಯೆಯಿಂದ ಪಾರಾಗಲು 2017ರಲ್ಲಿ ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂನ ನಟರಾಜ್‌ ಎಂಬ ವಕೀಲರೊಬ್ಬರಿಗೆ ತಾವು ಪೂಜೆ ಮಾಡುತ್ತಿದ್ದ ದೇಗುಲದ ಬಾಲಾಜಿ ಪ್ರತಿಮೆಯನ್ನೇ ಮಾರಾಟ ಮಾಡಿದ್ದರು. ನಟರಾಜ್‌ ಈ ವಿಗ್ರಹವನ್ನು ಕೊಂಡೊಯ್ಯುವಾಗ ಕರ್ನಾಟಕ ಗಡಿಯಲ್ಲಿ ಸಿಕ್ಕಿಬಿದ್ದಿದ್ದರು. ಈ ಬಗ್ಗೆ ಕರ್ನಾಟಕ ಪೊಲೀಸರು ಪ್ರಕರಣ ಕೂಡಾ ದಾಖಲಿಸಿಕೊಂಡಿದ್ದರು.

Tap to resize

Latest Videos

218 ಟನ್‌ ತೂಕದ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಅಂತಿಮ ಹಂತದ ಸಿದ್ಧತೆ

ಆದರೆ ವಕೀಲ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಕರಣದಿಂದ ಪಾರಾಗಿದ್ದರು ಮತ್ತು ಪೊಲೀಸರ ವಶದಲ್ಲಿದ್ದ ವಿಗ್ರಹವನ್ನು ಕೂಡಾ ಬಿಡಿಸಿಕೊಂಡು ತಮಿಳ್ನಾಡಿಗೆ ಕೊಂಡೊಯ್ದು ಸುಮಾರು 50 ಕೋಟಿ ರು. ಗೆ ಮಾರಾಟ ಮಾಡಲು ಯತ್ನ ಆರಂಭಿಸಿದ್ದರು. ಆದರೆ ದುಬಾರಿ ದರದ ಕಾರಣ ಯಾರೂ ಅದರ ಖರೀದಿಗೆ ಮುಂದೆ ಬಾರದೇ ಇದ್ದಾಗ ತನ್ನ ಜೊತೆಯಲ್ಲಿದ್ದ ಕಿರಿಯ ವಕೀಲ ಪಳನಿಸ್ವಾಮಿ ನೆರವು ಕೋರಿದ್ದರು. ಈ ನಡುವೆ 2018ರಲ್ಲಿ ಹಿರಿಯ ವಕೀಲ ನಟರಾಜ್‌ ದಿಢೀರನೆ ಸಾವನ್ನಪ್ಪಿದ್ದರು. ಹೀಗಾಗಿ ಕಿರಿಯ ವಕೀಲ ತನ್ನ ಬಳಿ ಇದ್ದ ವಿಗ್ರಹದ ಮೊತ್ತವನ್ನು ಕಡಿಮೆ ಮಾಡಿ 33 ಕೋಟಿ ರು.ಗೆ ಮಾರಾಟ ಮಾಡಲು ಮುಂದಾಗಿ, ಮಧ್ಯವರ್ತಿಯೊಬ್ಬರ ನೆರವು ಕೋರಿದ್ದರು.

ಮಾರುವೇಷದ ಕಾರ್ಯಾಚರಣೆ: ಇತ್ತೀಚೆಗೆ ಈ ವಿಷಯದ ಮಾಹಿತಿ ಪಡೆದ ತಮಿಳುನಾಡು ಸಿಐಡಿಯ ವಿಗ್ರಹ ವಿಭಾಗದ ಪೊಲೀಸರು, ವಿಗ್ರಹ ಖರೀದಿದಾರರ ಸೋಗಿನಲ್ಲಿ ತೆರಳಿ, ಮಧ್ಯವರ್ತಿಯ ಮೂಲಕ ಪಳನಿಸ್ವಾಮಿ ಮನೆಗೆ ತೆರಳಿ ವಿಗ್ರಹ ಪರಿಶೀಲಿಸಿ ಬಂದಿದ್ದರು. ವಿಗ್ರಹದ ಕುರಿತು ಸಾಕಷ್ಟು ಚೌಕಾಸಿ ನಡೆದು ಕೊನೆಗೆ 15 ಕೋಟಿ ರು.ಗೆ ವಿಗ್ರಹ ಕೊಂಡುಕೊಳ್ಳುವುದಾಗಿ ಖರೀದಿದಾರರ ಸೋಗಿನಲ್ಲಿದ್ದ ಪೊಲೀಸರು ಹೇಳಿದ್ದರು. 

ಭೂಕಂಪವಾದರೂ ಅಲುಗಾಡದು ಕೆಂಪೇಗೌಡ ಪ್ರತಿಮೆ: ಸಚಿವ ಅಶ್ವತ್ಥ್‌ನಾರಾಯಣ

ಅದರಂತೆ ಮಾರನೇ ದಿನ ದುಡ್ಡಿನೊಂದಿಗೆ ಬರುವುದಾಗಿ ಹೇಳಿ ಇತರೆ ಪೊಲೀಸರನ್ನು ಕರೆದೊಯ್ದು ಪಳನಿಸ್ವಾಮಿ ಮತ್ತು ಮಧ್ಯವರ್ತಿಯನ್ನು ಬಂಧಿಸಿದ್ದಾರೆ. ಜೊತೆಗೆ ಬಾಲಾಜಿ ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ. ವಿಗ್ರಹ ಮಂಡ್ಯದ ಯಾವ ದೇವಸ್ಥಾನಕ್ಕೆ ಸೇರಿದ್ದು ಎಂಬುದು ತಿಳಿದು ಬಂದಿಲ್ಲ. ವಿಗ್ರಹ 22.8 ಕೆಜಿ ತೂಕವಿದ್ದು, 51 ಸೆ.ಮೀ ಎತ್ತರ, 31 ಸೆಂ.ಮೀ.ನಷ್ಟು ಅಗಲಿವೆ.

click me!