ವಿವಾದಿತ ಸ್ಥಳ ರಾಮಮಂದಿರಕ್ಕೆ ಸಿಕ್ಕಿದ್ದು ಹೇಗೆ?

By Kannadaprabha NewsFirst Published Nov 10, 2019, 7:58 AM IST
Highlights

ರಾಮ ಮಂದಿರ ಮಹಾತೀರ್ಪು: ಯಾವ ಆಧಾರದಲ್ಲಿ ಕೋರ್ಟ್ ಈ ಜಡ್ಜ್‌ಮೆಂಟ್ ನೀಡಿದೆ? | ಸುದೀರ್ಘ ತೀರ್ಪಿನಲ್ಲಿದೆ ಕುತೂಹಲಕಾರಿ ಉತ್ತರ | 

ನವದೆಹಲಿ (ನ. 10): ಬಾಬರಿ ಮಸೀದಿ ನಿರ್ಮಾಣವಾದಾಗಿನಿಂದ 1857 ರಲ್ಲಿ ಬ್ರಿಟಿಷರು ಕಬ್ಬಿಣದ ಬೇಲಿ ಹಾಕುವವರೆಗೆ ಆ ಜಾಗ ಸಂಪೂರ್ಣವಾಗಿ ತಮ್ಮ ಸುಪರ್ದಿಯಲ್ಲೇ ಇತ್ತು ಎಂಬುದನ್ನು ಸಾಕ್ಷ್ಯ ಸಮೇತ ನಿರೂಪಿಸಲು ಮುಸ್ಲಿಂ ಕಕ್ಷಿದಾರರು ವಿಫಲರಾಗಿದ್ದು ಹಾಗೂ ಸೀತಾ ರಸೋಯಿ, ರಾಮ ಚಬೂತರಾ, ಭಂಡಾರ ಗೃಹಗಳಲ್ಲಿ ಹಿಂದು ಗಳು ನಿರಂತರವಾಗಿ ಆರಾಧನೆ ಮಾಡಿದ್ದದ್ದು ಶತಮಾನಗಳಿಂದ ಕಗ್ಗಂಟಾಗಿದ್ದ ಅಯೋಧ್ಯೆ ವಿವಾದದ ತೀರ್ಪಿನಲ್ಲಿ ಟರ್ನಿಂಗ್ ಪಾಯಿಂಟ್ ಆಗಿವೆ.

ಅಯೋಧ್ಯೆ ತೀರ್ಪು: ಹಕ್ಕು ಮಂಡಿಸಿದವರಿಗೆ ಸುಪ್ರೀಂಕೋರ್ಟ್ ತೀರ್ಪಿನಿಂದ ಸಿಕ್ಕಿದ್ದೇನು?

ದೇಗುಲವನ್ನು ಕೆಡವಿ ಮಸೀದಿ ನಿರ್ಮಿಸಲಾಗಿತ್ತೆ ಎಂಬುದಕ್ಕೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಾಕ್ಷ್ಯ ಸಿಕ್ಕಿಲ್ಲ. ಆದರೆ ಆ ಜಾಗ ಶ್ರೀರಾಮನ ಜನ್ಮಸ್ಥಳ ಎಂಬ ನಿಲುವಿಗೆ ಬಂದಿದೆ. ಇದಕ್ಕೆ ನೆಚ್ಚಿಕೊಂಡಿರುವುದು ಸೀತಾ ರಸೋಯಿ, ರಾಮ ಚಬೂತರಾ ಹಾಗೂ ಭಂಡಾರ ಗೃಹಗಳನ್ನು. ಜತೆಗೆ ‘ವಿವಾದಿತ ಕಟ್ಟಡದ ಕೆಳಭಾಗದಲ್ಲಿ ಹಳೆಯ ಕಟ್ಟಡವೊಂದು ಇತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಇಲಾಖೆಯ ವರದಿ ತಿಳಿಸಿದೆ. ಆದರೆ ಹಳೆಯ ಕಟ್ಟಡವನ್ನು ಧ್ವಂಸಗೊಳಿಸಿ ವಿವಾದಿತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದು ಎಎಸ್‌ಐ ಹೇಳಿಲ್ಲ. ವರದಿಯ ಪ್ರಕಾರ, ವಿವಾದಿತ ಕಟ್ಟಡದ ಕೆಳಭಾಗದಲ್ಲಿ ಇದ್ದದ್ದು ಇಸ್ಲಾಮಿಕ್ ಕಟ್ಟಡವಲ್ಲ. ಖಾಲಿ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿರಲಿಲ್ಲ’
ಎಂಬ ಅಂಶ ತೀರ್ಪಿನಲ್ಲಿದೆ.

1857 ರಲ್ಲಿ ಹಿಂದು- ಮುಸ್ಲಿಂ ಸಂಘರ್ಷ ತಪ್ಪಿಸಲು ಬ್ರಿಟಿಷರು ಬೇಲಿ ನಿರ್ಮಾಣ ಮಾಡಿದ್ದರು. ಅದಕ್ಕೂ ಮುನ್ನವೇ ಹಿಂದುಗಳು ವಿವಾದಿತ ಜಾಗದ ಹೊರಭಾಗದಲ್ಲಿರುವ ರಾಮ ಚಬೂತರಾ ಹಾಗೂ ಇನ್ನಿತರೆ ಧಾರ್ಮಿಕ ಕೇಂದ್ರಗಳಲ್ಲಿ ಸುದೀರ್ಘ, ನಿರಂತರ, ನಿರ್ಬಂಧರಹಿತವಾಗಿ ಆರಾಧಿಸುತ್ತಿದ್ದರು. ಮಸೀದಿಯ ಒಳಭಾಗ ದಲ್ಲಿ ಕಸೌತಿ ಕಲ್ಲಿನ ಕಂಬಗಳಿದ್ದು, ಅಲ್ಲೂ ಹಿಂದುಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂಬ ಹಿಂದು ಸಾಕ್ಷಿಗಳನ್ನು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಮತ್ತೊಂದೆಡೆ, ಮಸೀದಿಯ ಒಳ ಹಾಗೂ ಹೊರಭಾಗದಲ್ಲಿ ಹಿಂದು ಧಾರ್ಮಿಕ ಮಹತ್ವದ ಚಿಹ್ನೆಗಳು ಇವೆ ಎಂಬುದನ್ನು ಮುಸ್ಲಿಂ ಸಾಕ್ಷಿಗಳು ಹೇಳಿರುವುದನ್ನು ನ್ಯಾಯಾಲಯ ಪರಿಗಣಿಸಿದೆ. ಸುಪ್ರೀಂಕೋರ್ಟ್ ಗಮನಿಸಿರುವ ಮಹತ್ವದ ಸಂಗತಿ ಮತ್ತೊಂದು ಇದೆ. ಮೂರು ಗುಮ್ಮಟಗಳಿಗೆ ಪ್ರವೇಶ ಪಡೆಯಲು ಎರಡೇ ದ್ವಾರಗಳು ಇವೆ.

ಹೊರಾಂಗಣದ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಮಾತ್ರವೇ ಆ ದ್ವಾರಗಳು ಇವೆ. ಆ ಭಾಗ ಹಿಂದುಗಳ ನಿಯಂತ್ರಣದಲ್ಲಿದೆ. 1857 ರಲ್ಲಿ ಬ್ರಿ ಟಿಷರು ಕಬ್ಬಿಣದ ಗೋಡೆ ನಿರ್ಮಿಸಿದ ತರುವಾ ಯವೂ ಆ ಜಾಗದಲ್ಲಿ ಹಿಂದುಗಳ ಆರಾಧನೆ ಮುಂದುವರಿದಿತ್ತು, ಜಾಗ ವಶದಲ್ಲೇ ಇತ್ತು. 1857 ರಲ್ಲಿ ಅವಧ್ ಪ್ರಾಂತ್ಯವನ್ನು ಬ್ರಿಟಿಷರು ಆಕ್ರಮಿಸಿಕೊಳ್ಳುವ ಮುನ್ನ ಹಿಂದುಗಳು ಮಸೀದಿ ಯ ಒಳಭಾಗದಲ್ಲೂ ಹಿಂದುಗಳು ಪೂಜೆ ಸಲ್ಲಿಸುತ್ತಿದ್ದರು ಎಂಬುದನ್ನು ಅಧಿಕ ಸಂಭಾವ್ಯತೆಯ ಸಾಕ್ಷ್ಯಗಳು ಹೇಳುತ್ತವೆ.

ಇದರ ಜತೆಗೆ ಬಾಬರಿ ಮಸೀದಿ ನಿರ್ಮಾಣವಾದಾಗಿನಿಂದ ೧೮೫೭ರವರೆಗೆ ವಿವಾದಿತ ಜಾಗ ತಮ್ಮ ಸಂಪೂರ್ಣ ವಶದಲ್ಲಿತ್ತು ಎಂಬುದಕ್ಕೆ ಮುಸ್ಲಿಂ ಕಕ್ಷಿದಾರರು ಯಾವುದೇ ಸಾಕ್ಷ್ಯ ಕೊಟ್ಟಿಲ್ಲ ಎಂದು ಕೋರ್ಟ್‌ ಹೇಳಿದೆ. ತನ್ಮೂಲಕ ವಿವಾದಿತ ಜಾಗ ಮಂದಿರಕ್ಕೆ ಸೇರಿದ್ದು ಎಂಬ ಅಭಿಪ್ರಾಯಕ್ಕೆ ಬಂದಿದೆ. 

click me!