ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಲ್ಲಾನ ಮೂರ್ತಿಯೂ ಮುಗುಳ್ನಗುತ್ತಾ ತನ್ನ ತಲೆಯನ್ನು ಅತ್ತಿತ್ತ ತಿರುಗಿಸುತ್ತಾ ನೋಡುತ್ತಿರುವಂತೆ ಭಾಸವಾಗುವ ವೀಡಿಯೋವೊಂದನ್ನು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮನ ಮೂರ್ತಿಯ ಸೊಬಗು ಜಗತ್ತಿನೆಲ್ಲೆಡೆ ಇರುವ ರಾಮಭಕ್ತರ ಮನವ ಸೆಳೆದಿದೆ. ಮಗುವಿನ ಮಂದಸ್ಮಿತದಿಂದ ಕಂಗೊಳಿಸುವ ರಾಮಮೂರ್ತಿಯನ್ನು ನೋಡಿ ಜನ ಬಾಲರಾಮನೇ ಧರೆಗಿಳಿದು ಬಂದಷ್ಟು ಭಾವುಕರಾಗಿದ್ದಾರೆ. ದೇಶದ ಬಹುತೇಕ ನಾಗರಿಕರು ತಮ್ಮ ಸಾಮಾಜಿಕ ಜಾತಾಣಗಳಾದ ಫೇಸ್‌ಬುಕ್ ಇನ್ಸ್ಟಾಗ್ರಾಮ್ ಯೂಟ್ಯೂಬ್‌ಗಳಲ್ಲಿ ಮುದ್ದು ಕಂದನಂತೆ ಕಾಣುವ ರಾಮನ ಫೋಟೋಗಳನ್ನು ಶೇರ್ ಮಾಡಿಕೊಂಡು ಭಕ್ತಿ ಮೆರೆದರು.
ಇದರ ಜೊತೆಗೆ ಎಐ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಕಲಾವಿದರೊಬ್ಬರು ಸೃಷ್ಟಿಸಿದ ಈ ಅದ್ಭುತ ವೀಡಿಯೋ ವೈರಲ್ ಆಗಿದ್ದು, ನೋಡುಗರ ಮನವನ್ನು ರೋಮಾಂಚನಗೊಳಿಸುತ್ತದೆ. ನಿನ್ನೆ ರಾಮನ ನೆಲ ಅಯೋಧ್ಯೆಯಲ್ಲಿ ಚಿನ್ನದ ಬಣ್ಣದ ಕುರ್ತಾ ಹಾಗೂ ಕೆನೆ ಬಣ್ಣದ ಧೋತಿ ಧರಿಸಿದ್ದ ಪ್ರಧಾನಿ ಮೋದಿ ಕೈಯಲ್ಲಿ, ಛತ್ರ ಹಾಗೂ ಕೆಂಪುವಸ್ತ್ರ ಹಿಡಿದು ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಮಮಂದಿರ ಪ್ರವೇಶಿಸಿದರು. ನಂತರ ಕಾಶಿಯ ಗಣೇಶ್ವರ ಶಾಸ್ತ್ರಿಗಳು, ಕರ್ನಾಟಕದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು, ವಿವಿಧ ಸಾಧು-ಸಂತರು, ಪುರೋಹಿತರ ಸಮ್ಮುಖದಲ್ಲಿ 12.20ಕ್ಕೆ ಪ್ರತಿ ಷ್ಠಾಪನಾ ವಿಧಿಗಳು ಆರಂಭವಾದವು. ಮೋದಿ ಪ್ರತಿಷ್ಠಾಪನೆಯ ಯಜಮಾನತ್ವ ವಹಿಸಿದ್ದರಿಂದ ಮಣೆಯ ಮೇಲೆ ಅವರನ್ನು ಕೂರಿಸಿ ಪ್ರತಿಷ್ಠಾಪನೆಯ ಸಂಕಲ್ಪ ನೆರವೇರಿಸಲಾಯಿತು.
ಇದಾದ ನಂತರ ಬಿಡುಗಡೆಯಾದ ಮುದ್ದು ಬಾಲರಾಮನ ಚಿತ್ರವನ್ನು ಬಳಸಿಕೊಂಡು ಈ ವೀಡಿಯೋ ಮಾಡಲಾಗಿತ್ತು. ನಿಜವಾಗಿಯೂ ಬಾಲರಾಮನೇ ತಲೆ ಅಲ್ಲಾಡಿಸುತ್ತಾ ಅತ್ತಿತ್ತ ನೋಡುವಂತಿದೆ ಈ ವೀಡಿಯೋ. ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ಚೌಧರಿ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋ ನೋಡಿ ಮೈ ರೋಮಾಂಚನವಾಯ್ತ, ಇದನ್ನು ನಿರ್ಮಿಸಿದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ವೀಡಿಯೋ ನೋಡಿದ ಬಹುತೇಕರು ಇದಕ್ಕೆ ಅದ್ಭುತ, ಸುಂದರ ಅತೀ ಸುಂದರ ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ನಡೆಸಿದ ಧಾರ್ಮಿಕ ವಿಧಿ ವಿಧಾನಗಳ ವೇಳೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳು, ಸಾಧು-ಸಂತರು ಗರ್ಭಗುಡಿಯೊಳಗೆ ಉಪಸ್ಥಿತರಿದ್ದರು. ಮಂದಿರದ ಹೊರಗೆ ಸುಮಾರು 8000 ಗಣ್ಯರು ಕುರ್ಚಿಗಳಲ್ಲಿ ಆಸೀನರಾಗಿ ಪರದೆಯಲ್ಲಿ ಪ್ರತಿಷ್ಠಾಪನೆ ವೀಕ್ಷಿಸಿದರು. ದೇಶಾದ್ಯಂತ ಜನರು ಟೀವಿಗಳಲ್ಲಿ ಇದರ ನೇರಪ್ರಸಾರ ವೀಕ್ಷಿಸಿ ಧನ್ಯತಾ ಭಾವನೆ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ