
ಅಯೋಧ್ಯೆ ರಾಮಮಂದಿರದ ದೇಣಿಗೆಯನ್ನು 105 ಬಾರಿ ಕಳ್ಳತನ ಮಾಡಿದ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿವೆ ಎಂಬ ಆಘಾತಕಾರಿ ಸಂಗತಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ರಾಮಮಂದಿರದ ದೇಣಿಕೆ ಕಳವು ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಿತು. ಈ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎಸ್‌ಐಟಿ ವರದಿಯನ್ನು ಉಲ್ಲೇಖಿಸಿ ಕೋರ್ಟ್‌ಗೆ ಮಾಹಿತಿ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟೀವಿ ದೃಶ್ಯಾವಳಿಗಳು, ಸಾಕ್ಷಿಗಳ ಹೇಳಿಕೆಗಳು ಹಾಗೂ ಲಭ್ಯವಿರುವ ಎಲ್ಲಾ ತಾಂತ್ರಿಕ ಆಧಾರಗಳನ್ನು ಕೋರ್ಟ್‌ಗೆ ಸಲ್ಲಿಸಲಾಯಿತು. ಈವರೆಗೆ ಕೈಗೊಂಡಿರುವ ತನಿಖೆಯ ಸಂಪೂರ್ಣ ವಿವರವನ್ನು ಮುಖ್ಯ ನ್ಯಾ. ಸೂರ್ಯಕಾಂತ್, ನ್ಯಾ. ಜಯಮಾಲ್ಯ ಬಾಗ್ಚಿ ಹಾಗೂ ನ್ಯಾ. ವಿ. ಮೋಹನ ಅವರ ಪೀಠ ದಾಖಲಿಸಿಕೊಂಡಿತು.
‘ಮಂದಿರದ ಸಂಕೀರ್ಣದಲ್ಲಿ ಅಳವಡಿಸಲಾದ ಸಿಸಿಟೀವಿ ಕ್ಯಾಮೆರಾಗಳಲ್ಲಿ ಒಟ್ಟು 105 ಬಾರಿ ಕಳ್ಳತನ ನಡೆದ ದೃಶ್ಯಗಳು ಸೆರೆಯಾಗಿವೆ. ಇವುಗಳ ಹಾಗೂ ಇನ್ನಿತರ ಸಾಕ್ಷ್ಯಗಳ ಆಧಾರದ ಮೇಲೆ, ಅಕ್ರಮದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಭಕ್ತರು ನೀಡುತ್ತಿದ್ದ ಬೆಲೆಬಾಳುವ ಕಾಣಿಕೆಗಳಿಗೆ ಸಾಫ್ಟ್‌ವೇರ್ ಮೂಲಕ ರಶೀದಿಯನ್ನು ಜನರೇಟ್ ಮಾಡಿ ನೀಡಲಾಗುತ್ತಿತ್ತು. ನಂತರ ಆ ವಸ್ತುಗಳನ್ನು ಎಸ್‌ಬಿಐನ ಲಾಕರ್‌ನಲ್ಲಿ ಇಡಲಾಗುತ್ತಿತ್ತು’ ಎಂದು ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯು ಬಹುತೇಕ ಪೂರ್ಣಗೊಂಡಿದ್ದು, ಬರುವ ಸೆ.25 ಅಥವಾ ಅದರ ಒಳಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುವುದು ಎಂದು ಎಸ್‌ಐಟಿ ತಿಳಿಸಿದೆ. ‘ಪ್ರಕರಣಕ್ಕೆ ಸಂಬಂಧಿಸಿ ನಡೆದ ಮೊದಲ ಬಂಧನಕ್ಕೆ ಸೆ.25ರಂದು 90 ದಿನಗಳು ಮುಗಿಯುತ್ತವೆ. ಆದ್ದರಿಂದ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ, ಆರೋಪಿಗಳಿಗೆ ಸ್ವಯಂಚಾಲಿತವಾಗಿ ಜಾಮೀನು ಸಿಕ್ಕಿಬಿಡುತ್ತದೆ’ ಎಂದು ಮೆಹ್ತಾ ಸುಪ್ರೀಂಗೆ ತಿಳಿಸಿದ್ದಾರೆ. ಕಾನೂನಿನ ನಿಯಮಾವಳಿಗಳಂತೆ ಚಾರ್ಜ್‌ಶೀಟ್ ಆಧಾರದ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ