ಅಯೋಧ್ಯೆ ಬಾಬ್ರಿ ಮಸೀದಿ ಮರು ನಿರ್ಮಾಣಕ್ಕೆ ಸ್ವಧರ್ಮಿಯರಿಂದಲೇ ನಿರ್ಲಕ್ಷ್ಯ, ಬೃಹತ್ ಯೋಜನೆ ಕೈಬಿಟ್ಟ ಟ್ರಸ್ಟ್!

Published : Jul 10, 2026, 01:54 PM IST
Ayodhya Mosque in Dhannipur

ಸಾರಾಂಶ

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಹಂಚಿಕೆಯಾದ ಜಾಗದಲ್ಲಿ ಬೃಹತ್ ಇಸ್ಲಾಮಿಕ್ ಸಂಕೀರ್ಣ ನಿರ್ಮಿಸುವ ಯೋಜನೆಗೆ ತೀವ್ರ ಆರ್ಥಿಕ ಹಿನ್ನಡೆಯಾಗಿದೆ. ಮುಸ್ಲಿಂ ಸಮುದಾಯದಿಂದ ನಿರೀಕ್ಷಿತ ದೇಣಿಗೆ ಬಾರದ ಕಾರಣ, ಸದ್ಯಕ್ಕೆ ಆಸ್ಪತ್ರೆ, ಗ್ರಂಥಾಲಯದಂತಹ ಯೋಜನೆಗಳನ್ನು ಕೈಬಿಟ್ಟು, ಕೇವಲ ಒಂದು ಸಣ್ಣ ಮಸೀದಿಯನ್ನು ಮಾತ್ರ ನಿರ್ಮಿಸಲು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ನಿರ್ಧರಿಸಿದೆ.

ಅಯೋಧ್ಯೆ: 2019ರ ಐತಿಹಾಸಿಕ ಶ್ರೀ ರಾಮಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನ್ವಯ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಪುನರ್ ನಿರ್ಮಾಣಕ್ಕಾಗಿ ಹಂಚಿಕೆಯಾಗಿದ್ದ 5 ಎಕರೆ ಜಾಗದಲ್ಲಿ ಉದ್ದೇಶಿತ ಬೃಹತ್ ಯೋಜನೆಗೆ ಈಗ ತೀವ್ರ ಆರ್ಥಿಕ ಹಿನ್ನಡೆಯಾಗಿದೆ. ಮುಸ್ಲಿಂ ಸಮುದಾಯದಿಂದ ನಿರೀಕ್ಷಿತ ಮಟ್ಟದಲ್ಲಿ ದೇಣಿಗೆ ಹರಿದುಬರದ ಕಾರಣ, ಈ ಹಿಂದೆ ಯೋಜಿಸಲಾಗಿದ್ದ ಬೃಹತ್ ಇಸ್ಲಾಮಿಕ್ ಸಂಕೀರ್ಣದ ಬದಲಿಗೆ ಕೇವಲ ಒಂದು ಸಾಧಾರಣ ಹಾಗೂ ಚಿಕ್ಕ ಮಸೀದಿಯನ್ನು ಮಾತ್ರ ನಿರ್ಮಿಸಲು ಮುಸ್ಲಿಂ ಟ್ರಸ್ಟ್ ನಿರ್ಧರಿಸಿದೆ ಎಂದು ಜಾಗತಿಕ ಸುದ್ದಿಸಂಸ್ಥೆ 'ರಾಯಿಟರ್ಸ್' ವರದಿ ಮಾಡಿದೆ.

ಭಾರತದ ಅತ್ಯಂತ ಸುದೀರ್ಘ ಕಾನೂನು ಮತ್ತು ಧಾರ್ಮಿಕ ವಿವಾದಕ್ಕೆ ತೆರೆ ಎಳೆದ ಸುಪ್ರೀಂಕೋರ್ಟ್ ತೀರ್ಪು ಬಂದು ವರ್ಷಗಳೇ ಕಳೆದರೂ, ಕೋರ್ಟ್ ಆದೇಶದ ಭಾಗವಾಗಿಯೇ ನಿರ್ಮಾಣವಾಗಬೇಕಿದ್ದ ಮಸೀದಿ ಯೋಜನೆ ಮಾತ್ರ ಹಣಕಾಸಿನ ಕೊರತೆಯಿಂದಾಗಿ ಸೊರಗಿದೆ.

ಮೂಲ ಯೋಜನೆ ಏನಾಗಿತ್ತು?

2019ರ ನವೆಂಬರ್ 9 ರಂದು ಸುಪ್ರೀಂಕೋರ್ಟ್ ವಿವಾದಿತ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕಾಗಿ ಹಂಚಿಕೆ ಮಾಡಿತ್ತು. ಜೊತೆಗೆ, ಮುಸ್ಲಿಂ ಸಮುದಾಯಕ್ಕೆ ಮಸೀದಿ ನಿರ್ಮಿಸಲು ಅಯೋಧ್ಯೆಯಲ್ಲೇ ಪ್ರತ್ಯೇಕ 5 ಎಕರೆ ಪರ್ಯಾಯ ಭೂಮಿಯನ್ನು ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿತ್ತು.

ಈ ಯೋಜನೆಯ ಉಸ್ತುವಾರಿಗಾಗಿ 'ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್' (IICF) ಎಂಬ ಟ್ರಸ್ಟ್ ಸ್ಥಾಪಿಸಲಾಯಿತು. ಯುಪಿ ಸರ್ಕಾರವು ಅಯೋಧ್ಯೆಯ ಸೊಹಾವಾಲ್ ತಹಸಿಲ್‌ನ ಧನ್ನಿಪುರ ಗ್ರಾಮದಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡಿತು. 2020ರಲ್ಲಿ ಭೂಮಿ ಹಂಚಿಕೆಯಾದ ಬಳಿಕ IICF ಟ್ರಸ್ಟ್ ಕೇವಲ ಮಸೀದಿಯನ್ನಷ್ಟೇ ಅಲ್ಲದೆ, ಒಂದು ಭವ್ಯ ಸಾಮಾಜಿಕ-ಸಾಂಸ್ಕೃತಿಕ ಸಂಕೀರ್ಣದ ಮಾಸ್ಟರ್‌ಪ್ಲಾನ್ ಸಿದ್ಧಪಡಿಸಿತ್ತು. ಈ ಯೋಜನೆಯಲ್ಲಿ 300 ಹಾಸಿಗೆಗಳ ಅತ್ಯಾಧುನಿಕ ಸಾರ್ವಜನಿಕ ಆಸ್ಪತ್ರೆ, ಬೃಹತ್ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಉಚಿತ ಸಮುದಾಯ ದಾಸೋಹ ಭವನ(ಊಟದ ಮನೆ). ಇಸ್ಲಾಮಿಕ್ ಕಲೆ ಮತ್ತು ಇತಿಹಾಸ ಸಾರುವ ವಸ್ತುಸಂಗ್ರಹಾಲಯ ಮಾಡಲು ಉದ್ದೇಶಿಸಲಾಗಿತ್ತು.

ಧನಸಹಾಯದ ಕೊರತೆ ಮತ್ತು ಸಮುದಾಯದ ನಿರಾಸಕ್ತಿ

ಈ ಭವ್ಯ ಯೋಜನೆ ಸಂಪೂರ್ಣವಾಗಿ ಸಾರ್ವಜನಿಕ ಮತ್ತು ಸಮುದಾಯದ ದೇಣಿಗೆಯನ್ನೇ ನೆಚ್ಚಿಕೊಂಡಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ತದ್ವಿರುದ್ಧವಾಗಿದೆ. ಈ ಕುರಿತು ರಾಯಿಟರ್ಸ್ ಸಂಸ್ಥೆಯೊಂದಿಗೆ ಮಾತನಾಡಿರುವ IICF ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ, ಮಸೀದಿ ಯೋಜನೆಯ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಒಂದು ರೀತಿಯ ನಿರಾಸಕ್ತಿ ಕಂಡುಬಂದಿದೆ. ಸಮುದಾಯದಿಂದ ಬರುತ್ತಿರುವ ದೇಣಿಗೆಯು ನಮ್ಮ ನಿರೀಕ್ಷೆಯ ಹತ್ತಿರಕ್ಕೂ ತಲುಪಿಲ್ಲ. ಹೀಗಾಗಿ ಲಭ್ಯವಿರುವ ನಿಧಿಗೆ ಅನುಗುಣವಾಗಿ ನಾವು ಮೂಲ ಯೋಜನೆಯನ್ನು ಪರಿಷ್ಕರಿಸುವುದು ಅನಿವಾರ್ಯವಾಗಿದೆ, ದೊಡ್ಡ ಮಟ್ಟದ ಬಹುಪಯೋಗಿ ಸಂಕೀರ್ಣ, ಆಸ್ಪತ್ರೆ ಮತ್ತು ಮ್ಯೂಸಿಯಂ ನಿರ್ಮಾಣದ ಯೋಜನೆಗಳನ್ನು ಸದ್ಯಕ್ಕೆ ಸಂಪೂರ್ಣವಾಗಿ ತಡೆಹಿಡಿಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಜೆಟ್ ಮತ್ತು ಸಂಗ್ರಹವಾದ ಹಣದ ವಿವರ:

IICF ಕಾರ್ಯದರ್ಶಿ ಅಥರ್ ಹುಸೇನ್ ನೀಡಿರುವ ಮಾಹಿತಿಯ ಪ್ರಕಾರ, ಈಗ ರೂಪಿಸಲಾಗಿರುವ ಪರಿಷ್ಕೃತ ಚಿಕ್ಕ ಮಸೀದಿ ಯೋಜನೆಗೇ ಕನಿಷ್ಠ ₹3 ಕೋಟಿಯಿಂದ ₹5 ಕೋಟಿ ಹಣದ ಅಗತ್ಯವಿದೆ. ಆದರೆ, ಟ್ರಸ್ಟ್‌ಗೆ ಇದುವರೆಗೆ ಸಂಗ್ರಹವಾಗಿರುವುದು ಕೇವಲ ₹1.5 ಕೋಟಿ ಮಾತ್ರ! ಈ ಹಿನ್ನೆಲೆಯಲ್ಲಿ ದೊಡ್ಡ ಕನಸುಗಳನ್ನು ಬದಿಗಿಟ್ಟು, ಮೊದಲು ಒಂದು ಸಾಧಾರಣ ಮಸೀದಿಯನ್ನು ಕಟ್ಟುವುದು ಟ್ರಸ್ಟಿಗಳ ಮೊದಲ ಆದ್ಯತೆಯಾಗಿದೆ.

ಕಾನೂನು ಮತ್ತು ತಾಂತ್ರಿಕ ಅಡೆತಡೆಗಳು

ಹಣಕಾಸಿನ ಮುಗ್ಗಟ್ಟು ಮಾತ್ರವಲ್ಲದೆ, ಈ ಯೋಜನೆ ಆರಂಭದಿಂದಲೂ ಹಲವು ಕಾರ್ಯವಿಧಾನದ ಹಾಗೂ ಆಡಳಿತಾತ್ಮಕ ಅಡೆತಡೆಗಳನ್ನು ಎದುರಿಸುತ್ತಾ ಬಂದಿದೆ. ಸೆಪ್ಟೆಂಬರ್ 2025ರ ಮಾಧ್ಯಮ ವರದಿಗಳ ಪ್ರಕಾರ, ವಿವಿಧ ಸರ್ಕಾರಿ ಇಲಾಖೆಗಳಿಂದ ಪಡೆಯಬೇಕಾಗಿದ್ದ ಕಡ್ಡಾಯ ನಿರಾಕ್ಷೇಪಣಾ ಪತ್ರಗಳನ್ನು (NOCs) ಸಲ್ಲಿಸದ ಕಾರಣ, ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು (ADA) ಮಸೀದಿ ಟ್ರಸ್ಟ್‌ನ ಕಟ್ಟಡ ನಕ್ಷೆಯ ಅನುಮೋದನೆಯನ್ನು ತಿರಸ್ಕರಿಸಿತ್ತು. ಈ ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಂಡು ಮುನ್ನಡೆಯುವುದು ಕೂಡ ಟ್ರಸ್ಟ್‌ಗೆ ಸವಾಲಾಗಿ ಪರಿಣಮಿಸಿದೆ.

ಈ ಪರಿಷ್ಕೃತ ಪ್ರಸ್ತಾವನೆಯು ಸುಪ್ರೀಂಕೋರ್ಟ್‌ನ ಮೂಲ ತೀರ್ಪಿನಲ್ಲಾಗಲಿ ಅಥವಾ ಹಂಚಿಕೆಯಾದ 5 ಎಕರೆ ಭೂಮಿಯ ಒಡೆತನದಲ್ಲಾಗಲಿ ಯಾವುದೇ ಬದಲಾವಣೆ ತರುವುದಿಲ್ಲ. ಇದು ಕೇವಲ ಪ್ರಸ್ತುತ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಮಾಡಿಕೊಂಡಿರುವ ತಾಂತ್ರಿಕ ಬದಲಾವಣೆಯಾಗಿದೆ. ಸದ್ಯಕ್ಕೆ ಮಸೀದಿ ನಿರ್ಮಾಣ ಮಾತ್ರ ಯೋಜನೆಯ ಕೇಂದ್ರಬಿಂದುವಾಗಿದ್ದು, ಭವಿಷ್ಯದಲ್ಲಿ ಸಮುದಾಯದಿಂದ ಹೆಚ್ಚುವರಿ ಧನಸಹಾಯ ಅಥವಾ ದೇಣಿಗೆ ಹರಿದುಬಂದರೆ ಆಸ್ಪತ್ರೆ, ಗ್ರಂಥಾಲಯ ಸೇರಿದಂತೆ ಉಳಿದ ಸೌಲಭ್ಯಗಳನ್ನು ಹಂತ-ಹಂತವಾಗಿ ವಿಸ್ತರಿಸುವ ಆಶಯವನ್ನು ಟ್ರಸ್ಟ್ ಉಳಿಸಿಕೊಂಡಿದೆ. ಆದರೆ, ಸದ್ಯದ ಮಟ್ಟಿಗಂತೂ ಅಯೋಧ್ಯೆಯ ಧನ್ನಿಪುರದಲ್ಲಿ ತಲೆಯೆತ್ತಬೇಕಿದ್ದ ಬೃಹತ್ ಇಸ್ಲಾಮಿಕ್ ಕೇಂದ್ರದ ಕನಸು ಆರ್ಥಿಕ ಮುಗ್ಗಟ್ಟಿನಿಂದಾಗಿ ಸಣ್ಣದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೋಡೆ ಒಳಗೆ 'ಚಿನ್ನದ ಗಣಿ'! 13 ಕೆಜಿ ಬಂಗಾರ, ಕೋಟಿ ಕೋಟಿ ಹಣದ ಖಜಾನೆ! ಅಧಿಕಾರಿಗಳೇ ಶಾಕ್
Washing Machine: ವಾಶಿಂಗ್‌ ಮಶಿನ್‌ನಲ್ಲಿ ಎಷ್ಟೊತ್ತಾದ್ರೂ ಬಟ್ಟೆ ಕ್ಲೀನ್‌ ಆಗ್ತಿಲ್ವಾ? ಈ ತಪ್ಪು ಮಾಡಿರ್ತೀರಿ