
ನವದೆಹಲಿ(ಜೂ.27): ಭವ್ಯವಾದ ಶ್ರೀರಾಮ ಮಂದಿರದ ಜತೆಗೆ ಹಲವು ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿರುವ ಅಯೋಧ್ಯೆಯ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವರ್ಚುವಲ್ ಆಗಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ನಮ್ಮ ಅತ್ಯುತ್ತಮ ಸಂಪ್ರದಾಯಗಳು ಹಾಗೂ ಅಭಿವೃದ್ಧಿ ರೂಪಾಂತರಗಳನ್ನು ಅಯೋಧ್ಯೆ ಪ್ರತಿಪಾದಿಸುವಂತಿರಬೇಕು. ಅಯೋಧ್ಯೆಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಿ ಬರಬೇಕು ಎಂದು ಯುವಪೀಳಿಗೆಗೆ ಉತ್ಕಟ ಭಾವ ಮೂಡುವಂತಿರಬೇಕು’ ಎಂದು ಸಲಹೆ ಮಾಡಿದರು.
ಅಯೋಧ್ಯೆಯಲ್ಲಿ ಸದ್ಯೋಭವಿಷ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮುಂದುವರಿಯುತ್ತವೆ. ಆದರೆ ಅದೇ ವೇಳೆ, ಪ್ರಗತಿಯ ಮುಂದಿನ ದಾಪುಗಾಲಿಗೆ ಅಯೋಧ್ಯೆ ನಾಂದಿ ಹಾಡಬೇಕು. ಶ್ರೀರಾಮ ಯಾವ ರೀತಿ ಜನರನ್ನು ಒಗ್ಗೂಡಿಸಿದನೋ, ಅದೇ ರೀತಿ ಆರೋಗ್ಯಯುತ ಸಾರ್ವಜನಿಕ ಸಹಭಾಗಿತ್ವದ ಮಾರ್ಗದರ್ಶನದೊಂದಿಗೆ ಅದರಲ್ಲೂ ಯುವಕರ ಭಾಗೀದಾರಿಕೆಯಲ್ಲಿ ಅಯೋಧ್ಯೆಯ ಅಭಿವೃದ್ಧಿ ಕೆಲಸ ನಡೆಯಬೇಕು. ಅಯೋಧ್ಯೆ ಅಭಿವೃದ್ಧಿ ಕಾರ್ಯದಲ್ಲಿ ಯುವಕರ ಪ್ರತಿಭಾ ಕೌಶಲ್ಯವನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿದರು ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಆಧ್ಯಾತ್ಮಿಕ ಕೇಂದ್ರ, ಜಾಗತಿಕ ಪ್ರವಾಸೋದ್ಯಮ ಹಬ್ ಹಾಗೂ ಸುಸ್ಥಿರ ಸ್ಮಾರ್ಟ್ ಸಿಟಿಯ ಅಂಶಗಳನ್ನು ಅಯೋಧ್ಯೆ ಒಳಗೊಂಡಿರಬೇಕು ಎಂದು ಮೋದಿ ಹೇಳಿದರು.
ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ, ರಸ್ತೆ, ಹೆದ್ದಾರಿ ವಿಸ್ತರಣೆ ಕುರಿತು ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವರು ಇದ್ದರು.
ಅಧ್ಯಾತ್ಮ, ಪ್ರವಾಸ ಸ್ಮಾರ್ಟ್ ಸಿಟಿ ಸ್ಪರ್ಶ
ಶ್ರೀರಾಮ ಯಾವ ರೀತಿ ಜನರನ್ನು ಒಗ್ಗೂಡಿಸಿದನೋ, ಅದೇ ರೀತಿ ಎಲ್ಲರ ಸಹಭಾಗಿತ್ವದಲ್ಲಿ ಅಯೋಧ್ಯೆ ಅಭಿವೃದ್ಧಿಯಾಗಬೇಕು. ಇದರಲ್ಲಿ ಯುವಕರ ಕೌಶಲ ಬಳಸಿಕೊಳ್ಳಬೇಕು. ಆಧ್ಯಾತ್ಮಿಕ ಕೇಂದ್ರ, ಜಾಗತಿಕ ಪ್ರವಾಸೋದ್ಯಮ ಹಬ್ ಹಾಗೂ ಸುಸ್ಥಿರ ಸ್ಮಾರ್ಟ್ ಸಿಟಿಯ ಅಂಶಗಳನ್ನು ಅಯೋಧ್ಯೆ ಒಳಗೊಂಡಿರಬೇಕು.
- ನರೇಂದ್ರ ಮೋದಿ, ಪ್ರಧಾನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ