ಹಿಮಪಾತ: ನಿಯಂತ್ರಣ ಕಳೆದುಕೊಂಡು 360 ಡಿಗ್ರಿ ತಿರುಗಿದ ಕಾರು: ಮನಾಲಿ ವೀಡಿಯೋ ವೈರಲ್

Published : Dec 11, 2024, 08:40 PM IST
ಹಿಮಪಾತ: ನಿಯಂತ್ರಣ ಕಳೆದುಕೊಂಡು 360 ಡಿಗ್ರಿ ತಿರುಗಿದ ಕಾರು: ಮನಾಲಿ ವೀಡಿಯೋ ವೈರಲ್

ಸಾರಾಂಶ

ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಭಾರೀ ಹಿಮಪಾತದಿಂದಾಗಿ ಕಾರುಗಳು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಜಾರುತ್ತಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 

ಚಳಿಗಾಲ ಆರಂಭವಾಗಿದ್ದು, ದೇಶದ ಜಮ್ಮು ಕಾಶ್ಮೀರ, ಹಿಮಾಚಲ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಚಳಿ ತೀವ್ರವಾಗಿದೆ. ಅದರಲ್ಲೂ ಹಿಮ ಬೀಳುವುದಕ್ಕೆ ಪ್ರಸಿದ್ಧವಾಗಿರುವ ಹಿಮಾಚಲ ಪ್ರದೇಶದ ಮನಾಲಿ, ಕಾಶ್ಮೀರದ ಶಿಮ್ಲಾದಲ್ಲಿ ಹಿಮಪಾತ ತೀವ್ರವಾಗಿದ್ದು, ಇದರಿಂದ ರಸ್ತೆಗಳಲ್ಲಿ ಹಿಮದ ರಾಶಿ ಬೀಳುತ್ತವೆ. ತೀವ್ರ ಹಿಮದಿಂದಾಗಿ ವಾಹನಗಳು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಪಕ್ಕಕ್ಕೆ ಜಾರುತ್ತವೆ. ಅದೇ ರೀತಿ ಈಗ ಹಿಮದಿಂದಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಜಾರಲು ಆರಂಭಿಸಿ ರಿವರ್ಸ್ ತಿರುಗಿಕೊಂಡಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 

_hamza_murtaza ಎಂಬ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಇಲ್ಲಿನ ಪರಿಸ್ಥಿತಿ ತುಂಬಾ ಕಷ್ಟಕರವಾಗಿದ್ದು, ನಿಯಂತ್ರಣಕ್ಕೆ ಸಿಗದಂತಾಗಿದೆ ಎಂದು ಬರೆದುಕೊಂಡಿದ್ದಾರೆ. ಮನಾಲಿಯ ಸೋಲಂಗ್ ವ್ಯಾಲಿಯಲ್ಲಿ ಹಾದು ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವೀಡಿಯೋದಲ್ಲಿ ಕಾಣಿಸುವಂತೆ ರಸ್ತೆಯಲ್ಲಿ ನಡೆದು ಹೋಗುತ್ತಿರುವ ಯುವತಿಯೊಬ್ಬಳು ಕಾಲು ಜಾರಿ ಅಲ್ಲೇ ಬಿದ್ದಿದ್ದಾಳೆ. ಇದಾದ ನಂತರ ವಾಹನಗಳು ಕೂಡ ಹಿಮದಿಂದಾಗಿ ರಸ್ತೆಯಿಂದ ಪಕ್ಕಕ್ಕೆ ಜಾರಿಕೊಂಡಿವೆ. ವಾಹನಗಗಳು ಡ್ರೈವರ್‌ ಕಂಟ್ರೋಲ್‌ಗೆ ಸಿಗದೇ ತನ್ನಷ್ಟಕ್ಕೆ ಜಾರುತ್ತಿದ್ದು, ಹಿಂದೆ ಮುಂದೆ ತಿರುಗಿಕೊಳ್ಳುವ ಹಲವು ಘಟನೆಗಳು ನಡೆದಿವೆ. ಕಣಿವೆ ಪ್ರದೇಶವಾಗಿರುವುದರಿಂದ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಾರು ಪ್ರಪಾತಕ್ಕೆ ಬೀಳುವುದು ಪಕ್ಕಾ. 

ಆದರೆ ಇಲ್ಲಿ ಸದ್ಯಕ್ಕೆ ಅಂತ ಅನಾಹುತಗಳು ನಡೆದಿಲ್ಲ, ಕಾರೊಂದು ವಾಹನಗಳು ರಸ್ತೆ ಬದಿ ಸಾಲು ಸಾಲಾಗಿ ನಿಂತಿದ್ದರೆ, ಒಂದು ವಾಹನ ಜಾರುತ್ತಾ ರಸ್ತೆ ಪಕ್ಕಕ್ಕೆ ಹೋಗಿ ನಿಂತಿದೆ. ಆದರೆ ಕೆಳಕ್ಕೆ ಜಾರಿಲ್ಲ, ಹಾಗೆಯೇ ಮತ್ತೊಂದು ಕಾರು ಅಂತಹ ವೇಗವಿಲ್ಲದೇ ನಿಧಾನವಾಗಿ ಸಾಗುತ್ತಿದ್ದರು, ಕೂಡ ನಿಯಂತ್ರಣ ಕಳೆದುಕೊಂಡು 360 ಡಿಗ್ರಿ ರಿವರ್ಸ್ ತಿರುಗಿದೆ. ಸೋಮವಾರ  ಡಿಸೆಂಬರ್ 9 ರಂದು ನಡೆದ ಘಟನೆ ಇದಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಅನೇಕರು ಇಲ್ಲಿಗೆ ಹಿಮಪಾತವನ್ನು ನೋಡಲು ಹಾಗೂ ಚಳಿಗಾಲದ ಸೌಂದರ್ಯವನ್ನು ಸವಿಯಲು ಬರುವ ಪ್ರವಾಸಿಗರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅನೇಕ ಯುರೋಪಿಯನ್ ದೇಶಗಳು ಇಂತಹ  ಹಿಮದಿಂದಾಗಿ ಜಾರುವ ರಸ್ತೆಯ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ವಾಹನಗಳಿಗೆ ವಿಶೇಷವಾದ ಟೈರ್ ವ್ಯವಸ್ಥೆಯನ್ನು ಹೊಂದಿವೆ.  ಹಾಗೆಯೇ ಭಾರತದಲ್ಲೂ ಕಬ್ಬಿಣದ ಚೈನ್ ಇರುವ ಜೀಪನ್ನು ನೋಡಿರುತ್ತೇವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಮತ್ತೊಬ್ಬರು ಏಕೆ ಇದನ್ನು ಅಲ್ಲಿನ ಎಲ್ಲಾ ವಾಹನಗಳಿಗೆ ಕಡ್ಡಾಯಗೊಳಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಹಿಮಾಚಲ ಪ್ರದೇಶ ನಿಜವಾಗಿಯೂ ಸುಂದರವಾಗಿದೆ. ಆದರೆ ಹೊಸ ಚಾಲಕರಿಗೆ ಇಲ್ಲಿ ಅನುಭವ ಬೇಕೆ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. 

ಹಾಗೆಯೇ ಹವಾಮಾನ ಎಚ್ಚರಿಕೆ ಬಂದರೂ ಯಾಕೆ ಇಲ್ಲಿನ ಸ್ಥಳಿಯಾಡಳಿತ ರಸ್ತೆ ಮೇಲೆ ಉಪ್ಪು ಎರಚಿ ಸಾರ್ವಜನಿಕರು ಸುರಕ್ಷಿತವಾಗಿ ಸಾಗಲು ಸಹಾಯ ಮಾಡುತ್ತಿಲ್ಲ ಎಂದು ಮತ್ತೊಬ್ಬರು ಕೇಳಿದ್ದಾರೆ. ನಿನ್ನೆಯೂ ಕೂಡ ಇಂತಹದ್ದೇ ವೀಡಿಯೋವೊಂದು ವೈರಲ್ ಆಗಿತ್ತು. ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಹಿಮಬಿದ್ದಿದ್ದ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಕಾರೊಂದು ನಿಯಂತ್ರಣ ತಪ್ಪಿ ಜಾರಿಕೊಂಡಿತ್ತು.  ಅಲ್ಲದೇ ಅನೇಕರು ಹಿಮಾವೃತವಾದ ರಸ್ತೆಯಲ್ಲಿ ನಡೆದಾಡಲು ಕಷ್ಟಪಡುವುದನ್ನು ಈ ವೀಡಿಯೋದಲ್ಲಿ ಕಾಣಬಹುದಾಗಿದೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ