ಟಾಟಾದ ಟಿಸ್ಯಾಟ್-1ಎ: ಬಾಹ್ಯಾಕಾಶದಲ್ಲೊಂದು ಕರ್ನಾಟಕದ ಮೈಲಿಗಲ್ಲು..!

By Girish Goudar  |  First Published Apr 10, 2024, 12:19 PM IST

ಟಿಸ್ಯಾಟ್-1ಎ ಉಪಗ್ರಹವನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯಕ್ಕೆ ಸನಿಹದ, ವೇಮಗಲ್‌ನಲ್ಲಿರುವ ಟಿಎಎಸ್ಎಲ್‌ನ ಅಸೆಂಬ್ಲಿ, ಇಂಟಗ್ರೇಷನ್ ಆ್ಯಂಡ್ ಟೆಸ್ಟಿಂಗ್ (ಎಐಟಿ) ಘಟಕದಲ್ಲಿ ನಿರ್ಮಿಸಲಾಗಿದೆ. 


ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Tap to resize

Latest Videos

ಬೆಂಗಳೂರು(ಏ.10): ಬಾಹ್ಯಾಕಾಶ ಮತ್ತು ರಕ್ಷಣಾ ಪರಿಹಾರೋಪಾಯಗಳನ್ನು ಒದಗಿಸುವ ಭಾರತ ಪ್ರಮುಖ ಸಂಸ್ಥೆಯಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಮತ್ತು ಅತ್ಯಂತ ವಿಸ್ತೃತವಾದ ಭೂ ವೀಕ್ಷಣಾ ಮಾಹಿತಿಗಳನ್ನು ಕಲೆ ಹಾಕುವ ಸಂಸ್ಥೆಯಾದ ಸ್ಯಾಟೆಲಾಜಿಕ್ ಇಂಕ್ (NASDAQ: SATL) ಸಂಸ್ಥೆಗಳು ಜಂಟಿಯಾಗಿ ಕಾರ್ಯಾಚರಿಸಿ, ಟಿಎಎಸ್ಎಲ್‌ನ ಟಿಸ್ಯಾಟ್-1ಎ (TSAT-1A) ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಾಕಾಶದಲ್ಲಿ ಅಳವಡಿಸಿವೆ. 

ಸಬ್-ಮೀಟರ್ ಗುಣಮಟ್ಟದಲ್ಲಿ ಭೂಮಿಯ ಛಾಯಾಚಿತ್ರಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿರುವ ಈ ಉಪಗ್ರಹವನ್ನು, ಏಪ್ರಿಲ್ 7 ರಂದು 23:16 ಯುಟಿಸಿ ಸಮಯಕ್ಕೆ ಸರಿಯಾಗಿ ಫ್ಲೋರಿಡಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ 9 ರಾಕೆಟ್ ಮೂಲಕ ಉಡಾವಣೆಗೊಳಿಸಲಾಯಿತು.

ಸಿಬ್ಬಂದಿ ಕೊರತೆಯ ಸುಳಿಗೆ ಸಿಲುಕಿದ ಭಾರತೀಯ ವೈಮಾನಿಕ ಉದ್ಯಮ

ಟಿಸ್ಯಾಟ್-1ಎ ಉಪಗ್ರಹವನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯಕ್ಕೆ ಸನಿಹದ, ವೇಮಗಲ್‌ನಲ್ಲಿರುವ ಟಿಎಎಸ್ಎಲ್‌ನ ಅಸೆಂಬ್ಲಿ, ಇಂಟಗ್ರೇಷನ್ ಆ್ಯಂಡ್ ಟೆಸ್ಟಿಂಗ್ (ಎಐಟಿ) ಘಟಕದಲ್ಲಿ ನಿರ್ಮಿಸಲಾಗಿದೆ. 2023ರ ನವೆಂಬರ್ ತಿಂಗಳಲ್ಲಿ ಟಿಎಎಸ್ಎಲ್ ಮತ್ತು ಸ್ಯಾಟೆಲಾಜಿಕ್ ಸಂಸ್ಥೆಗಳು ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಜಂಟಿಯಾಗಿ ಬಳಸಲು ನಿರ್ಧರಿಸಿ, ಸಹಯೋಗ ಸಾಧಿಸಿದ ಪರಿಣಾಮವಾಗಿ ಈ ಬೆಳವಣಿಗೆಗಳು ಸಂಭವಿಸಿದವು. ಸ್ಯಾಟೆಲಾಜಿಕ್ ಸಂಸ್ಥೆ ಭಾರತದಲ್ಲಿ ಅತ್ಯುತ್ತಮ ಭೂ ವೀಕ್ಷಣಾ ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ ಪ್ರಾವೀಣ್ಯತೆ ಹೊಂದಿದ್ದರೆ, ಟಿಎಎಸ್ಎಲ್ ಸಂಕೀರ್ಣ ಸಿಸ್ಟಮ್‌ಗಳನ್ನು ನಿರ್ಮಿಸಿ, ಅಳವಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೈ ರೆಸಲ್ಯೂಷನ್ ಮಾಹಿತಿಗಳು

'ಸಬ್ ಮೀಟರ್ ಗುಣಮಟ್ಟದ ಭೂ ಚಿತ್ರಣಗಳು' ಎಂದರೆ ಭೂಮಿಯ ಅತ್ಯಂತ ಮಾಹಿತಿಪೂರ್ಣ ಚಿತ್ರಗಳನ್ನು ತೆಗೆಯುವ ಉಪಗ್ರಹದ ಸಾಮರ್ಥ್ಯವಾಗಿದೆ. ಇಲ್ಲಿ, ಉಪಗ್ರಹ ಚಿತ್ರದ ಪ್ರತಿಯೊಂದು ಪಿಕ್ಸೆಲ್ ಸಹ ಒಂದು ಚದರ ಮೀಟರ್‌ಗಿಂತಲೂ ಕಡಿಮೆ ಪ್ರದೇಶವನ್ನು ಸೂಚಿಸುತ್ತದೆ. ಇಷ್ಟರಮಟ್ಟಿನ ಅತ್ಯುನ್ನತ ಗುಣಮಟ್ಟದ ಚಿತ್ರಗಳ ಕಾರಣದಿಂದ, ಭೂಮಿಯ ಮೇಲಿರುವ ಸಣ್ಣ ಪುಟ್ಟ ವಸ್ತುಗಳನ್ನು ಗಮನಿಸಿ, ಗುರುತಿಸಲು ಸಾಧ್ಯವಾಗುತ್ತದೆ. ಇಂತಹ ಮಾಹಿತಿಗಳು ನಕಾಶೆ ರಚನೆ, ಮೂಲಭೂತ ಸೌಕರ್ಯಗಳನ್ನು ಗಮನಿಸುವುದು, ಭೂ ಬಳಕೆಯಲ್ಲಿನ ಬದಲಾವಣೆಗಳನ್ನು ವೀಕ್ಷಿಸುವುದು, ಮತ್ತು ಪರಿಸರ ಅಧ್ಯಯನದಂತಹ ವಿವಿಧ ಉದ್ದೇಶಗಳಿಗೆ ನೆರವಾಗುತ್ತವೆ.

ಖಾಸಗಿ ವಲಯದ ಸಾಧನೆ

ಟಿಎಎಸ್ಎಲ್ ಸಂಸ್ಥೆಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಸುಕರಣ್ ಸಿಂಗ್ ಅವರು ಟಿಸ್ಯಾಟ್-1ಎ ಯೋಜನೆಯ ಕುರಿತು ಮಾಹಿತಿ ನೀಡುತ್ತಾ, ಬಾಹ್ಯಾಕಾಶ ಉದ್ಯಮದ ಜ್ಞಾನ ಹಂಚಿಕೊಳ್ಳುವಲ್ಲಿ, ಅವಶ್ಯಕ ಉಪಕರಣಗಳನ್ನು ಪೂರೈಸುವಲ್ಲಿ, ಮತ್ತು ಬೌದ್ಧಿಕ ಆಸ್ತಿ (ಇಂಟಲೆಕ್ಚುವಲ್ ಪ್ರಾಪರ್ಟಿ - ಐಪಿ) ಪರವಾನಗಿ ಪಡೆಯಲು ಹಾಗೂ ಭಾರತದಲ್ಲಿ ಒಂದು ಎಐಟಿ ಘಟಕವನ್ನು ಸ್ಥಾಪಿಸಲು ಸ್ಯಾಟೆಲಾಜಿಕ್ ಮಹತ್ವದ ಪಾತ್ರ ನಿರ್ವಹಿಸಿದೆ ಎಂದಿದ್ದಾರೆ. ಈ ನೆರವುಗಳು ಸ್ಯಾಟೆಲಾಜಿಕ್ ಸಂಸ್ಥೆಯ 'ಸ್ಪೇಸ್ ಸಿಸ್ಟಮ್ಸ್' ಯೋಜನೆಯ ಭಾಗವಾಗಿವೆ. ಈ ಯೋಜನೆಯಡಿ, ಸ್ಯಾಟೆಲಾಜಿಕ್ ತನ್ನ ಗ್ರಾಹಕರಿಗೆ ನೇರ ಉಪಗ್ರಹ ಮಾರಾಟದಲ್ಲಿ ನೆರವು ನೀಡುತ್ತದೆ ಮತ್ತು ನಿರ್ಮಾಣ ಪ್ರಕ್ರಿಯೆಯಲ್ಲಿ ಸಹಕಾರ ಒದಗಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ.

ಸರ್ಕಾರಿ ವಲಯದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗಾಗಲೇ ಅತ್ಯುನ್ನತ ಗುಣಮಟ್ಟದ ಭೂ ವೀಕ್ಷಣಾ ಉಪಗ್ರಹಗಳನ್ನು ಉಡಾವಣೆಗೊಳಿಸಿದ್ದರೂ, ಟಿಸ್ಯಾಟ್-1ಎ ಭಾರತದ ಖಾಸಗಿ ವಲಯ ಅಭಿವೃದ್ಧಿ ಪಡಿಸಿರುವ, ಮೊತ್ತಮೊದಲ ಸಬ್ ಮೀಟರ್ ರೆಸಲ್ಯೂಷನ್ ಉಪಗ್ರಹವಾಗಿದೆ ಎಂದು ಸುಕರಣ್ ಸಿಂಗ್ ವಿವರಿಸಿದ್ದಾರೆ. ಈ ಉಪಗ್ರಹ 0.7-0.8 ಮೀಟರ್ ರೆಸಲ್ಯೂಷನ್ ಹೊಂದಿದ್ದು, ಸಮರ್ಪಕ ಸಾಫ್ಟ್‌ವೇರ್ ಬಳಕೆಯ ಮೂಲಕ ಇದನ್ನು 0.5-0.6ರ ಸೂಪರ್ ರೆಸಲ್ಯೂಷನ್‌ಗೆ ಅಭಿವೃದ್ಧಿ ಪಡಿಸಬಹುದಾಗಿದೆ. 50 ಕೆಜಿಗೂ ಕಡಿಮೆ ತೂಕ ಹೊಂದಿರುವ ಟಿಸ್ಯಾಟ್-1ಎ ಭೂಮಿಯ ಕೆಳ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಸುಕರಣ್ ಸಿಂಗ್ ಅವರು ಈ ಸಾಧನೆ ಕೇವಲ ಆರಂಭವಷ್ಟೇ ಎಂದಿದ್ದು, ಸ್ಯಾಟೆಲಾಜಿಕ್ ಜೊತೆಗಿನ ಸಹಯೋಗ ಟಿಎಎಸ್ಎಲ್‌ಗೆ ಭಾರತದಲ್ಲಿ ಆಧುನಿಕ, ಸಬ್ ಮೀಟರ್ ಆಪ್ಟಿಕಲ್ ಉಪಗ್ರಹವನ್ನು ಅಭಿವೃದ್ಧಿ ಪಡಿಸಿ, ಪರೀಕ್ಷಿಸಲು ಅನುಕೂಲ ಕಲ್ಪಿಸಿದೆ ಎಂದಿದ್ದಾರೆ. ಸುಕರಣ್ ಸಿಂಗ್ ಅವರು ಯೋಜನೆಗೆ ಸಂಬಂಧಿಸಿದ ಅವಶ್ಯಕ ಪರವಾನಗಿ ಪಡೆಯಲು ನೆರವಾದ ಭಾರತ ಸರ್ಕಾರದ ವಿವಿಧ ವಿಭಾಗಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅದರೊಡನೆ, ಉಪಗ್ರಹ ಸೇವೆಗಳನ್ನು ಪಡೆಯಲು ಉದ್ದೇಶಿಸುವ ವಾಣಿಜ್ಯ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು, ಅವರಿಗೆ ಅವಶ್ಯಕ ಸೇವೆ ಒದಗಿಸಲು ಸಿದ್ಧವಿರುವುದಾಗಿ ಸಿಂಗ್ ತಿಳಿಸಿದ್ದಾರೆ.

ಟಿಸ್ಯಾಟ್-1ಎ ಉಪಗ್ರಹವನ್ನು ಸಾಂಪ್ರದಾಯಿಕ ಸನ್ ಸಿಂಕ್ರೊನಸ್ ಪೋಲಾರ್ ಆರ್ಬಿಟ್ (ಎಸ್ಎಸ್‌ಪಿಒ) ಬದಲಿಗೆ, ಒಂದು ಇಳಿಜಾರಾದ ಕಕ್ಷೆಗೆ ಅಳವಡಿಸಲಾಗಿದೆ. ಈ ವಿಶಿಷ್ಟ ಕಕ್ಷೆಗೆ ಉಪಗ್ರಹವನ್ನು ಅಳವಡಿಸಿರುವುದು ಭಾರತದ ಹಿತಾಸಕ್ತಿಗಳಿಗೆ ಪೂರಕವಾಗಿ ಹಲವು ಅನುಕೂಲತೆಗಳನ್ನು ಕಲ್ಪಿಸುತ್ತದೆ ಎಂದು ಸಿಂಗ್ ವಿವರಿಸಿದ್ದಾರೆ. ಎಸ್ಎಸ್‌ಪಿಒಗೆ ಹೋಲಿಸಿದರೆ, ಈ ಇಳಿಜಾರಾದ ಕಕ್ಷೆಯಲ್ಲಿರುವ ಟಿಸ್ಯಾಟ್-1ಎ ಉಪಗ್ರಹ ಭಾರತದ ಪ್ರದೇಶಗಳ ಮೇಲೆ ಹೆಚ್ಚು ಬಾರಿ ಹಾದುಹೋಗಲಿದೆ. ಇದರಿಂದಾಗಿ ಉಪಗ್ರಹಕ್ಕೆ ಹೆಚ್ಚಿನ ವ್ಯಾಪ್ತಿ ಮತ್ತು ಇನ್ನಷ್ಟು ಹೆಚ್ಚು ಛಾಯಾಚಿತ್ರಗಳನ್ನು ಕಲೆಹಾಕುವ ಅವಕಾಶ ಲಭಿಸುತ್ತದೆ. ಒಟ್ಟಾರೆಯಾಗಿ, ಈ ಕಕ್ಷೆ ಕಣ್ಗಾವಲು, ಮ್ಯಾಪಿಂಗ್, ಮತ್ತು ಪರಿಸರ ಮೇಲ್ವಿಚಾರಣೆಯಂತಹ ಕ್ಷೇತ್ರಗಳಲ್ಲಿ ಅನುಕೂಲಕರವಾಗಿದೆ. ಸಿಂಗ್ ಅವರು ಭವಿಷ್ಯದಲ್ಲಿ ಉಪಗ್ರಹದ ಉಡಾವಣೆಗಳನ್ನು ನಡೆಸುವ ನಿಟ್ಟಿನಲ್ಲಿ ಟಿಎಎಸ್ಎಲ್ ಇಸ್ರೋ ಜೊತೆಗೆ ಕೈಜೋಡಿಸಲು ಉತ್ಸುಕವಾಗಿದೆ ಎಂದಿದ್ದಾರೆ.

ಸನ್ ಸಿಂಕ್ರೊನಸ್ ಪೋಲಾರ್ ಆರ್ಬಿಟ್ (ಎಸ್ಎಸ್‌ಪಿಒ) ಸಾಮಾನ್ಯವಾಗಿ ಭೂಮಿಯಿಂದ 600-800 ಕಿಲೋಮೀಟರ್ (370-500 ಮೈಲಿ) ಎತ್ತರದಲ್ಲಿರುತ್ತದೆ. ಸರಳವಾಗಿ ವಿವರಿಸುವುದಾದರೆ, ಈ ಕಕ್ಷೆಯಲ್ಲಿ ಉಪಗ್ರಹ ಸೂರ್ಯನಿಗೆ ಒಂದು ನಿರ್ದಿಷ್ಟ ಕೋನದಲ್ಲಿದ್ದು, ಉತ್ತರ ಧ್ರುವದಿಂದ ದಕ್ಷಿಣ ಧ್ರುವದೆಡೆಗೆ ಚಲಿಸುತ್ತದೆ. ಈ ಕಕ್ಷೆಯ ಮೂಲಕ, ಉಪಗ್ರಹ ಪ್ರತಿದಿನವೂ ಭೂಮಿಯ ನಿರ್ದಿಷ್ಟ ಪ್ರದೇಶದ ಮೇಲೆ, ನಿರ್ದಿಷ್ಟ ಸಮಯದಲ್ಲೇ ಹಾದುಹೋಗುತ್ತದೆ. ಆ ಮೂಲಕ ಭೂವೀಕ್ಷಣೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಭಾರತದ ಪರಮಾಣು ಪಯಣ: ಅಣ್ವಸ್ತ್ರ ಸಜ್ಜಿತ ಭಾರತ ನಿರ್ಮಾಣದ ಕಥನ

ಟಾಟಾ ತನ್ನ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಪ್ರಸ್ತುತ ನಾಲ್ಕು ಪ್ರಮುಖ ಕ್ಷೇತ್ರಗಳೆಡೆಗೆ ಗಮನ ಹರಿಸುತ್ತಿದೆ. ಅವುಗಳಲ್ಲಿ, ಉಪಗ್ರಹಗಳ ಜೋಡಣೆ, ಅಳವಡಿಕೆ, ಪರೀಕ್ಷೆ ಮತ್ತು ಸ್ಪೇಸ್ ಎಕ್ಸ್ ಅಥವಾ ಇಸ್ರೋದ ಮೂಲಕ ಉಪಗ್ರಹಗಳ ಉಡಾವಣೆ ಸೇರಿವೆ. ಅದರೊಡನೆ, ಟಾಟಾ ಸಂಸ್ಥೆ ಮಾಹಿತಿಗಳ ಸಂಗ್ರಹಣೆ, ಎಐ (ಕೃತಕ ಬುದ್ಧಿಮತ್ತೆ) ನೆರವಿನೊಡನೆ ಮಾಹಿತಿಗಳ ವಿಶ್ಲೇಷಣೆ, ಮತ್ತು ನಿಯಂತ್ರಣ ಕೇಂದ್ರದಿಂದ ಉಪಗ್ರಹ ನಿರ್ವಹಣೆಗಳನ್ನೂ ನಡೆಸುತ್ತದೆ. ಬಾಹ್ಯಾಕಾಶ ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ, ಒಂದು ಕ್ಷೇತ್ರದಲ್ಲಿ ಟಾಟಾ ಪ್ರಗತಿ ಸಾಧಿಸಿದ್ದು, ಇತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಕಾರ್ಯ ನಿರ್ವಹಿಸುತ್ತಿದೆ.

ಸ್ಯಾಟೆಲಾಜಿಕ್ ಸಂಸ್ಥೆಯ ಸಿಇಒ ಆಗಿರುವ ಎಮಿಲಿಯಾನೋ ಕರ್ಗಿಮನ್ ಅವರು ಟಿಸ್ಯಾಟ್-1ಎ ಉಪಗ್ರಹದ ಯಶಸ್ವಿ ನಿರ್ಮಾಣ ಮತ್ತು ಉಡಾವಣೆಗೆ ಕಾರಣವಾದ ಟಿಎಎಸ್ಎಲ್ ಮತ್ತು ಸ್ಯಾಟೆಲಾಜಿಕ್ ಸಂಸ್ಥೆಗಳ ನಡುವಿನ ಪರಿಣಾಮಕಾರಿ ಸಹಯೋಗವನ್ನು ಶ್ಲಾಘಿಸಿದ್ದಾರೆ. ಈ ಸಾಧನೆಯಿಂದಾಗಿ, ಸ್ಯಾಟೆಲಾಜಿಕ್ ಸಂಸ್ಥೆಯ ಬಾಹ್ಯಾಕಾಶ ವ್ಯವಸ್ಥೆಗಳ ಕಾರ್ಯಕ್ರಮ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತದೆ ಎನ್ನುವುದು ಸಾಬೀತಾಗಿದ್ದು, ತಮ್ಮ ಯೋಜನೆ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಉಪಗ್ರಹಗಳನ್ನು ಕಡಿಮೆ ಕಾಲಾವಧಿಯಲ್ಲಿ ಕಕ್ಷೆಗೆ ಜೋಡಿಸಲು ನೆರವಾಗುತ್ತದೆ ಎಂದಿದ್ದಾರೆ.

click me!