ಪಶ್ಚಿಮ ಬಂಗಾಳ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಅಧೀರ್ ರಂಜನ್ ಮೇಲೆ ಶಸ್ತ್ರ ಹೊಂದಿದ್ದವರಿಂದ ಅಟ್ಯಾಕ್!

Published : Apr 04, 2026, 12:58 PM IST
 Adhir Ranjan Chowdhury attack

ಸಾರಾಂಶ

ಪಶ್ಚಿಮ ಬಂಗಾಳದ ಬೆರ್ಹಾಂಪೋರ್‌ನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಎರಡೂ ಪಕ್ಷಗಳ ನಡುವೆ ತಳ್ಳಾಟ-ನೂಕಾಟಕ್ಕೆ ಕಾರಣವಾಗಿ, ಪ್ರದೇಶದಲ್ಲಿ ತೀವ್ರ ರಾಜಕೀಯ ಉದ್ವಿಗ್ನತೆಯನ್ನು ಸೃಷ್ಟಿಸಿದೆ.

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ಮಧ್ಯೆ ರಾಜಕೀಯ ಉದ್ವಿಗ್ನತೆ ತಾರಕ್ಕೇರಿದ್ದು, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಅಧೀರ್ ರಂಜನ್ ಚೌಧರಿ ಅವರ ಮೇಲೆ ದಾಳಿ ಯತ್ನ ನಡೆದಿದೆ. ಟಿಎಂಸಿ ಕರೆತಂದವರಿಂದ ಹಲ್ಲೆಗೆ ಯತ್ನ ನಡೆದಿದ್ದು ದುಷ್ಕರ್ಮಿಗಳು ಶಸ್ತ್ರ ಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ. ಈ ಘಟನೆ ಬೆರ್ಹಾಂಪೋರ್ ಪುರಸಭೆಯ ವಾರ್ಡ್ ಸಂಖ್ಯೆ 19ರಲ್ಲಿ ಶನಿವಾರ ನಡೆದಿದ್ದು, ಪ್ರಚಾರದ ವೇಳೆ ತೀವ್ರ ಗಲಾಟೆಗೆ ಕಾರಣವಾಗಿದೆ.

ಪರಿಸ್ಥಿತಿ ಏಕಾಏಕಿ ಉದ್ವಿಗ್ನ

ವರದಿಯಂತೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಧೀರ್ ರಂಜನ್ ಚೌಧರಿ ಅವರು ಚುನಾವಣಾ ಪ್ರಚಾರಕ್ಕಾಗಿ ವಾರ್ಡ್ ಸಂಖ್ಯೆ 19ಕ್ಕೆ ತೆರಳಿದ ವೇಳೆ ಪರಿಸ್ಥಿತಿ ಏಕಾಏಕಿ ಉದ್ವಿಗ್ನಗೊಂಡಿತು. ಸ್ಥಳೀಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಮತ್ತು ಬೆಂಬಲಿಗರು ಈಗಾಗಲೇ ಅಲ್ಲಿ ಜಮಾಯಿಸಿಕೊಂಡಿದ್ದು, ಅವರ ಆಗಮನದೊಂದಿಗೆ “ಗೋ ಬ್ಯಾಕ್” ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ, ಅದು ತಳ್ಳಾಟ–ನೂಕಾಟದ ಮಟ್ಟಕ್ಕೆ ತಲುಪಿದೆಯೆಂದು ವರದಿಯಾಗಿದೆ. ಪರಿಸ್ಥಿತಿ ಕೈ ಮೀರಿದಂತೆ ಕಂಡಾಗ ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರ ಪಡೆಗಳು ಮಧ್ಯಪ್ರವೇಶಿಸಿ, ಅಧೀರ್ ಚೌಧರಿ ಅವರನ್ನು ಸುರಕ್ಷಿತವಾಗಿ ಬೇರೆ ದಾರಿ ಮೂಲಕ ಹೊರಕರೆತಂದರು. ಬಳಿಕ ಅವರು ಮತ್ತೆ ತಮ್ಮ ಪ್ರಚಾರ ಕಾರ್ಯವನ್ನು ಮುಂದುವರಿಸಿದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ಅಧೀರ್ ರಂಜನ್ ಚೌಧರಿ  

ಅಧೀರ್ ರಂಜನ್ ಚೌಧರಿ ಅವರು ಈ ಘಟನೆ ಕುರಿತು ಪ್ರತಿಕ್ರಿಯಿಸಿ, ಟಿಎಂಸಿ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಪೂರ್ವದಲ್ಲೇ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಶಸ್ತ್ರಗಳನ್ನು ಹೊಂದಿದ್ದರು ಎಂಬ ಗಂಭೀರ ಆರೋಪ ಹೊರಿಸಿದ್ದಾರೆ.

ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಕರಣಕ್ಕೆ ಮತ್ತಷ್ಟು ರಾಜಕೀಯ ತಿರುವು ಸಿಕ್ಕಿದೆ. ಇನ್ನೊಂದೆಡೆ, ಕಾಂಗ್ರೆಸ್ ಆರೋಪಗಳಿಗೆ ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ. ಸ್ಥಳೀಯ ಟಿಎಂಸಿ ನಾಯಕರು, ಕಾಂಗ್ರೆಸ್ ಪಕ್ಷವೇ ಹೊರಗಿನವರನ್ನು ಕರೆತಂದು ಗಲಾಟೆ ಸೃಷ್ಟಿಸಲು ಯತ್ನಿಸಿದೆ ಎಂದು ಆರೋಪಿಸಿದ್ದಾರೆ. ಅಧೀರ್ ಚೌಧರಿ ತಮ್ಮೊಂದಿಗೆ ಬಂದ ಭದ್ರತಾ ಪಡೆಗಳನ್ನು ಬಳಸಿ ಸ್ಥಳೀಯ ಜನರಲ್ಲಿ ಭೀತಿ ಮೂಡಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಗಲಾಟೆ ಎರಡೂ ಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಘೋಷಣೆಗಳು ಮತ್ತು ಪ್ರತಿಘೋಷಣೆಗಳಿಂದ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಮುನ್ನ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಏಪ್ರಿಲ್ 23 ಮತ್ತು 29 ರಂದು ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

CBSE Curriculum: ಹಿಂದಿ ಹೇರಿಕೆ ವ್ಯವಸ್ಥಿತ ತಂತ್ರ, CBSE ಪಠ್ಯಕ್ರಮಕ್ಕೆ ಸ್ಟಾಲಿನ್ ಗರಂ
ನನ್ನ ಗೆಳತಿಗೆ ಮೊದಲ ಬಹುಮಾನ ಗೆಲ್ಲುವ ಸಂತೋಷ ನೋಡಲು ನಾನು ಉದ್ದೇಶಪೂರ್ವಕವಾಗಿ ಸೋತಿದ್ದೆ: ರಾಷ್ಟ್ರಪತಿ ದ್ರೌಪದಿ ಮುರ್ಮು