Election 2022 Result ಕೈತಪ್ಪಿದ್ದು ಪಂಜಾಬ್ ಮಾತ್ರ, ಪಂಚ ರಾಜ್ಯ ಸೋಲು ಸಮರ್ಥಿಸಿಕೊಂಡ ಸಿದ್ದು!

By Suvarna NewsFirst Published Mar 10, 2022, 2:26 PM IST
Highlights
  • ಪಂಜಾಬ್‌ನಲ್ಲೇನು ಬಿಜೆಪಿ ಅಧಿಕಾರಕ್ಕೆ ಬಂದಿದೆಯಾ?
  • ಕೈತಪ್ಪಿದ್ದು ಪಂಜಾಬ್ ಮಾತ್ರ, ಇದಕ್ಕೆ ಬಿಜೆಪಿ ಜಂಬ ಯಾಕೆ?
  • ಪಂಚ ರಾಜ್ಯ ಚುನಾವಣೆ ಬಳಿಕ ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು(ಮಾ.10): ಬಹುನಿರೀಕ್ಷಿತ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 5 ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಲು ತಯಾರಿ ಆರಂಭಿಸಿದ್ದರೆ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚಿಸುತ್ತಿದೆ. ಆದರೆ ಐದೂ ರಾಜ್ಯಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ಅಧಿಕಾರದಲ್ಲಿದ್ದ ಪಂಜಾಬ್ ಕೂಡ ಕೈ ತಪ್ಪಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೋಲನ್ನು ಸಮರ್ಥಿಸಿಕೊಂಡಿದ್ದಾರೆ.

ಪಂಜಾಬ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯಾ? ಬಿಜೆಪಿಯವರು ಜಂಬ ಪಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಐದು ರಾಜ್ಯಗಳ ಪೈಕಿ ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇನ್ನುಳಿದ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು. ಹೀಗಾಗಿ ನಮ್ಮ ಕೈತಪ್ಪಿದ್ದು ಪಂಜಾಬ್ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Assembly Elections 2022 Result: 4 ರಾಜ್ಯಗಳಲ್ಲಿ ಮತ್ತೆ ಬಿಜೆಪಿ, ಪಂಜಾಬ್‌ನಲ್ಲಿ ಆಮ್‌ ಆದ್ಮಿ

ನಮ್ಮ ತಪ್ಪಿನಿಂದ ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಆದರೆ ಈ ಚುನಾವಣೆಯಿಂದ ಕಾಂಗ್ರೆಸ್ ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ.ಹೀಗಾಗಿ ನಮ್ಮ ಸೋಲು ಪಂಜಾಬ್ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಬಿಜೆಪಿಗೆ ತಿರುಗೇಟು ನೀಡಿರುವ ಸಿದ್ದು, ಉತ್ತರಖಂಡ, ಉತ್ತರ ಪ್ರದೇಶ, ಗೋವಾ ಹಾಗೂ ಮಣಿಪುರದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಇರೋ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಇದರಿಂದ ಹೆಚ್ಚಿನ ಸಂಭ್ರಮ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಉತ್ತರಖಂಡ ಹಾಗೂ ಗೋವಾದಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆ ಇತ್ತು. ಆದರೆ ಎರಡು ರಾಜ್ಯಗಳಲ್ಲಿನ ಹಿನ್ನಡೆ ಪರಾಮರ್ಶಿಸುತ್ತೇವೆ ಎಂದಿದ್ದಾರೆ. ಪಂಜಾಬ್‌ನಲ್ಲಿ ಬಿಜೆಪಿ ಗೆದ್ದುಕೊಂಡಿದೆಯಾ? ಪಂಜಾಬ್‌ನಲ್ಲಿ ಬಿಜೆಪಿ ಇರುವ ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಇದು ಪೂರ್ಣ ಫಲಿತಾಂಶವಲ್ಲ. ಫಲಿತಾಂಶ ಬಂದ ಬಳಿಕ ನೋಡೋಣ ಎಂದು ಸಿದ್ದು ಹೇಳಿದ್ದಾರೆ.

Elections 2022 Result ಸಂಪುಟ ಬದಲಾವಣೆ ಖಚಿತ, ಪಂಚ ರಾಜ್ಯ ಫಲಿತಾಂಶ ಬೆನ್ನಲ್ಲೇ ಕಟೀಲ್ ಸ್ಪಷ್ಟನೆ!

ಪಂಜಾಬ್ ವಿಧಾನಸಭಾ ಚುನಾವಣಾ ಫಲಿತಾಂಶ
ಆಮ್ ಆದ್ಮಿ ಪಾರ್ಟಿ 83 ಸ್ಥಾನಗಲ್ಲಿ ಮುನ್ನಡೆ
ಕಾಂಗ್ರೆಸ್ 16 ಸ್ಥಾನಗಳಲ್ಲಿ ಮುನ್ನಡೆ
ಬಿಜೆಪಿ ಒಂದು ಸ್ಥಾನದಲ್ಲಿ ಮುನ್ನಡೆ

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ
ಆಡಳಿತರೂಢ ಕಾಂಗ್ರೆಸ್ ಪಕ್ಷ ಪಂಜಾಬ್‌ನಲ್ಲಿ ನಿರ್ನಾಮಗೊಂಡಿದೆ. ಕೇವಲ 16 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದುಕೊಂಡಿದೆ. ಇನ್ನು 117 ವಿಧಾನಸಭಾ ಕ್ಷೇತ್ರಗಳಿರುವ ಪಂಜಾಬ್‌ನಲ್ಲಿ ಅಧಿಕಾರಕ್ಕೇರಲು 59 ಸ್ಥಾನಗಳಲ್ಲಿ ಗೆಲ್ಲಬೇಕು. ಆಮ್ ಆದ್ಮಿ ಪಾರ್ಟಿ ಈಗಾಗಲೇ 83 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.  ಆಮ್ ಆದ್ಮಿ ಪಾರ್ಟಿ ನಾಯಕ ಭಗವಂತ್ ಮಾನ್ ಸಿಂಗ್ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 

ಆಡಳಿತ ವಿರೋಧಿ ಅಲೆ, ಪಕ್ಷದೊಳಗಿನ ಒಡಕು, ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕ್ ಪರ ಹಾಗೂ ಅಸಂಬದ್ಧ ಹೇಳಿಕೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿರ್ಗಮನ ಸೇರಿದಂತೆ ಹಲವು ಕಾರಣಗಳು ಕಾಂಗ್ರೆಸ್ ಪಕ್ಷವನ್ನು ಸೋಲಿಗೆ ತಳ್ಳಿದೆ.

ಕಾಂಗ್ರೆಸ್ ಹಾಗೂ ನಾಯಕರ ಮೇಲಿನ ವಿರೋಧಿ ಅಲೆ ಎಷ್ಟಿತ್ತು ಅನ್ನೋದು ಈ ಬಾರಿಯ ಚುನಾವಣೆ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಪೂರ್ವ ಅಮೃತಸರ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಆಮ್ ಆದ್ಮಿ ಅಭ್ಯರ್ಥಿ ವಿರುದ್ಧ ಮುಗ್ಗರಿಸಿದ್ದಾರೆ. ಇನ್ನು ಹಾಲಿ ಸಿಎಂ ಚರಣಜಿತ್ ಸಿಂಗ್ ಚನಿ ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ಕಾಂಗ್ರೆಸ್ ತೊರೆದು ಹೊಸ ಪಕ್ಷ ಕಟ್ಟಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಟಿಯಾಲ ಕ್ಷೇತ್ರದಿಂದ ಸೋಲು ಕಂಡಿದ್ದಾರೆ.

ಪಂಜಾಬ್‌ನಲ್ಲಿನ ಘಟಾನುಘಟಿ ಕಾಂಗ್ರೆಸ್ ನಾಯಕರು ಮುಗ್ಗರಿಸಿದ್ದಾರೆ. ಇನ್ನು ಗೋವಾದಲ್ಲಿ ಅಧಿಕಾರಕ್ಕೇರುವ ರೆಸಾರ್ಟ್ ಪ್ರಯತ್ನಕ್ಕೂ ಹಿನ್ನಡೆಯಾಗಿದೆ. ಉತ್ತರಖಂಡ ನಿರೀಕ್ಷೆಯೂ ಹುಸಿಯಾಗಿದೆ. ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ. ಆದರೆ ಪಂಜಾಬ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ ಅನ್ನೋ ಖುಷಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ.

click me!