ದೇಶೀಯ ಮುಸ್ಲಿಮರ ಪತ್ತೆಗೆ ಸರ್ವೆ ಆರಂಭ!

By Kannadaprabha NewsFirst Published Feb 11, 2020, 8:41 AM IST
Highlights

ದೇಶೀಯ ಮುಸ್ಲಿಮರ ಪತ್ತೆಗೆ ಅಸ್ಸಾಂನಲ್ಲಿ ಸರ್ವೆ| 1.3 ಕೋಟಿ ಮುಸ್ಲಿಮರ ಪೈಕಿ 90 ಲಕ್ಷ ಬಾಂಗ್ಲನ್ನರು!| ಹೀಗಾಗಿ ದೇಶೀಯ ಮುಸ್ಲಿಮರ ಪತ್ತೆಗೆ ಸಮೀಕ್ಷೆ| ಸರ್ಕಾರದಿಂದ ಇಂದು ಸಭೆ: ಇಂದೇ ತೀರ್ಮಾನ ಸಂಭವ

ಗುವಾಹಟಿ[ಫೆ.11]: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಕಳೆದ ವರ್ಷ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಅಭಿಯಾನ ನಡೆಸಿದ್ದ ಅಸ್ಸಾಂ ಸರ್ಕಾರ ಇದೀಗ ತನ್ನ ರಾಜ್ಯದಲ್ಲಿ ನೆಲೆಸಿರುವ ಮುಸಲ್ಮಾನರ ಗಣತಿ ನಡೆಸಲು ಮುಂದಾಗಿದೆ. ಅಸ್ಸಾಂನಲ್ಲಿರುವ ಒಟ್ಟು ಮುಸ್ಲಿಮರ ಪೈಕಿ ದೇಶೀಯ ಮುಸಲ್ಮಾನರು ಎಷ್ಟುಹಾಗೂ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವವರು ಎಷ್ಟುಎಂಬುದನ್ನು ಕಂಡುಕೊಳ್ಳಲು ಸಮೀಕ್ಷೆ ನಡೆಸುವ ಚಿಂತನೆ ಹೊಂದಿದೆ.

ಎನ್‌ಆರ್‌ಸಿಯ ನಿಖರತೆ ಬಗ್ಗೆ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮುಸಲ್ಮಾನರ ಸಮೀಕ್ಷೆಯನ್ನು ನಡೆಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ಅಸ್ಸಾಂನ ಬುಡಕಟ್ಟು ಸಮುದಾಯಗಳಾದ ಗೋರಿಯಾ, ಮೋರಿಯಾ, ದೇಶಿ ಹಾಗೂ ಜೋಲಾ ಎಂಬ ಸಮುದಾಯಗಳನ್ನು ದೇಶೀಯ ಎಂದು ಪರಿಗಣಿಸಲಾಗಿದೆ. ಆ ಸಮುದಾಯಗಳ ಜನರನ್ನು ಗುರುತಿಸಲು ಸಮೀಕ್ಷೆ ನಡೆಸುವ ಉದ್ದೇಶ ಸರ್ಕಾರಕ್ಕೆ ಇದೆ. ಈ ಸಂಬಂಧ ಅಸ್ಸಾಂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ರಂಜಿತ್‌ ದತ್ತಾ ಅವರು ಮಂಗಳವಾರ ಈ ನಾಲ್ಕೂ ಸಮುದಾಯಗಳ ಸಂಘಟನೆಗಳ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲೇ ಸಮೀಕ್ಷೆ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಅಸ್ಸಾಂನಲ್ಲಿ ಒಟ್ಟು 1.3 ಕೋಟಿ ಮುಸ್ಲಿಮರು ಇದ್ದಾರೆ. ಆ ಪೈಕಿ 90 ಲಕ್ಷ ಮಂದಿ ಬಾಂಗ್ಲಾದೇಶ ವಲಸಿಗರು. ಉಳಿಕೆ 40 ಲಕ್ಷ ಮಂದಿ ವಿವಿಧ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರನ್ನು ಗುರುತು ಹಚ್ಚುವ ಕೆಲಸ ನಡೆಯಬೇಕಾಗಿದೆ ಎಂದು ಅಸ್ಸಾಂ ಅಲ್ಪಸಂಖ್ಯಾತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮುಮಿನುಲ್‌ ಔವಲ್‌ ತಿಳಿಸಿದ್ದಾರೆ.

ದೇಶೀಯ ಮುಸ್ಲಿಮರನ್ನು ಪತ್ತೆ ಹಚ್ಚದ ಹೊರತು ಅವರಿಗೆ ಸೌಲಭ್ಯಗಳು ದಕ್ಕುವುದಿಲ್ಲ. ಎನ್‌ಆರ್‌ಸಿಯಲ್ಲಿ ಬಾಂಗ್ಲಾದ ಲಕ್ಷಾಂತರ ವಲಸಿಗರೂ ಸೇರಿಕೊಂಡಿದ್ದಾರೆ. ಅದನ್ನು ನೆಚ್ಚಿಕೊಳ್ಳಲು ಆಗುವುದಿಲ್ಲ. ಈಗಲೇ ಕ್ರಮ ಕೈಗೊಳ್ಳದೇ ಇದ್ದರೆ ಮುಂದೊಂದು ದಿನ ದೇಶೀಯ ಬುಡಕಟ್ಟು ಸಮುದಾಯಗಳು ಅಸ್ಸಾಂನಿಂದ ನಾಮಾವಶೇಷವಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

click me!