
ನವದೆಹಲಿ(ಜು.26); ಎದುರಿಗೆ ಸಿಕ್ಕವರ ಮೇಲೆ ಹಲ್ಲೆ, ಪೊಲೀಸರ ಮೇಲೆ ಕಲ್ಲು ತೂರಾಟ, ಮಾರ್ಗದಲ್ಲಿ ಸಾಗುತ್ತಿದ್ದ ದಂಪತಿಗಳ ಕಾರಿನ ಮೇಲೆ ಭಯಾನಕ ದಾಳಿ. ಇದು ಭಾರತದ ಎರಡು ರಾಜ್ಯಗಳಾದ ಅಸ್ಸಾಂ ಹಾಗೂ ಮಿಜೋರಾಂ ಗಡಿಯಲ್ಲಿನ ಸದ್ಯದ ಪರಿಸ್ಥಿತಿ. ಗಡಿ ಅತಿಕ್ರಮಣ ಸಮಸ್ಯೆಯಿಂದ ಆರಂಭಗೊಂಡ ಅಸ್ಸಾಂ ಹಾಗೂ ಮಿಜೋರಾಂ ಸಂಘರ್ಷ ಇಂದು ತಾರಕಕ್ಕೇರಿದೆ. ಉಭಯ ರಾಜ್ಯಗಳ ಗಡಿಯಲ್ಲಿ ಕಲ್ಲು ತೂರಾಟ, ಹಿಂಸಾಚಾರ ತೀವ್ರಗೊಂಡ ಪರಿಣಾಮ ನಿಯಂತ್ರಸಲು ನಿಯೋಜನೆಗೊಂಡಿದ್ದ 6 ಪೊಲೀಸರು ಬಲಿಯಾಗಿದ್ದಾರೆ. ಘಟನೆ ಬೆನ್ನಲ್ಲೇ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ದಾರೆ.
ಅಸ್ಸಾಂ ಹಾಗೂ ಮಿಜೋರಾಂ ಎರಡು ರಾಜ್ಯಗಳು ಪರಸ್ಪರ 164.6 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ. ಆದರೆ ಉಭಯ ರಾಜ್ಯಗಳು ಗಡಿ ಅತಿಕ್ರಮಣ ಮಾಡುತ್ತಿದೆ ಅನ್ನೋ ವಿಚಾರದಿಂದ ಸಂಘರ್ಷ ಆರಂಭಗೊಂಡಿದೆ. ಇಂದು ಲೈಲಾಪುರದಲ್ಲಿ ಗಡಿ ಅತಿಕ್ರಮ ತಪ್ಪಿಸಲು ನಿಯೋಜನೆಗೊಂಡಿರುವ ಪೊಲೀಸರ ಮೇಲೆ ಮಿಜೋರಾಂನಿಂದ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಏಕಾಏಕಿ ದಾಳಿ ನಡೆಸಿದ ಪರಿಣಾಮ ಪೊಲೀಸರು ತೀವ್ರವಾಗಿ ಗಾಯಗೊಂಡರು. ಹೀಗಾಗಿ 6 ಪೊಲೀಸು ಮೃತರಾಗಿದ್ದಾರೆ. ಈ ಘಟನೆಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನಗೊಂಡಿತ್ತು. ಇದಕ್ಕೆ ಪ್ರತಿಯಾಗಿ ದಾಳಿ ನಡೆದಿದೆ. ಈ ವೇಳೆ ದುಷ್ಕರ್ಮಿಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದಾರೆ. ಅದೇ ದಾರಿಯಲ್ಲಿ ಸಾಗುತ್ತಿದ್ದ ದಂಪತಿಗಳ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕಾರನ್ನು ಸಂಪೂರ್ಣ ಪುಡಿ ಮಾಡಿದ್ದಾರೆ.
28 ಎಕೆ -47 ಗನ್, 7,800 ಜೀವಂತ ಗುಂಡು... ಜೀಪಿನಡಿ ಹುದುಗಿಸಿಟ್ಟದ್ದರು!
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಿಜೋರಾಂ ಮುಖ್ಯಮಂತ್ರಿ, ಅಸ್ಸಾಂ ಮೇಲೆ ಹರಿಹಾಯ್ದಿದ್ದಾರೆ. ಅತ್ತ ಅಸ್ಸಾಂ ಮುಖ್ಯಮಂತ್ರಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂಘರ್ಷದ ವಿಡಿಯೋ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರ ಹಾಗೂ ಅಮಿತ್ ಶಾ ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಅಗ್ರಹಿಸಿದ್ದಾರೆ.
ಅಸ್ಸಾಂ ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಸಭೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ಗಡಿ ಸಂಘರ್ಷ ಹೆಚ್ಚಾಗಿದೆ. ಈ ಕುರಿತು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ ಅಮಿತ್ ಶಾ, ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ.
ಮಿಜೋರಾಂನ ಹತ್ತಿರದ ಗಡಿ ಗ್ರಾಮವಾದ ವೈರೆಂಗ್ಟೆಯಿಂದ 5 ಕಿ.ಮೀ ದೂರದಲ್ಲಿರುವ ಐಟ್ಲಾಂಗ್ ಹ್ನಾರ್ ಪ್ರದೇಶವನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡ ಬಳಿಕ ಸಂಘರ್ಷ ಭುಗಿಲೆದ್ದಿತ್ತು. ಇತ್ತ ಮಿಜೋರಾಂ ತಮ್ಮ ಭೂಪ್ರದೇಶವನ್ನು ಅತಿಕ್ರಮಿಸಿದೆ ಎಂದು ಅಸ್ಸಾಂ ಪೊಲೀಸರು ಆರೋಪಿಸಿದ್ದರು. ಆರೋಪ-ಪ್ರತ್ಯಾರೋಪದ ನಡುವೆ ಸಂಘರ್ಷ ಹೆಚ್ಚಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ