ಅಂಬಾನಿ ಬಳಿಕ ಅದಾನಿಯೂ ವಿದೇಶದಲ್ಲಿ ನೆಲೆಸಲು ಸಿದ್ಧತೆ?

By Kannadaprabha NewsFirst Published Nov 18, 2022, 9:10 AM IST
Highlights

ಏಷ್ಯಾದ ಸಿರಿವಂತ ಉದ್ಯಮಿ ಗೌತಮ್‌ ಅದಾನಿ, ದುಬೈ ಅಥವಾ ನ್ಯೂಯಾರ್ಕ್‌ನಲ್ಲಿ ಕುಟುಂಬದ ಕಚೇರಿಯನ್ನು ತೆರೆಯಲು ಯೋಜನೆ ರೂಪಿಸಿದ್ದಾಗಿ ವರದಿಯಾಗಿದೆ. ಈಗಾಗಲೇ ರಿಲಯನ್ಸ್‌ ಇಂಡಸ್ಟ್ರೀಸ್‌ನ ಒಡೆಯ ಮುಖೇಶ್‌ ಅಂಬಾನಿ ಸಿಂಗಾಪುರದಲ್ಲಿ ಕಚೇರಿ ತೆರೆಯುವುದು ಅಂತಿಮವಾಗಿದೆ.
 

ಮುಂಬೈ (ನ.18): ಭಾರತದ ನಂ.2 ಶ್ರೀಮಂತ ಹಾಗೂ ರಿಲಯನ್ಸ್‌ ಒಡೆಯ ಮುಕೇಶ್‌ ಅಂಬಾನಿ ಸಿಂಗಾಪುರದಲ್ಲಿ ಕುಟುಂಬದ ಕಚೇರಿ ತೆರೆದು ವಾಸಕ್ಕೆ ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇದೀಗ ದೇಶದ ನಂ.1 ಶ್ರೀಮಂತ ಹಾಗೂ ಅದಾನಿ ಸಮೂಹದ ಮಾಲಿಕ ಗೌತಮ್‌ ಅದಾನಿ ಕೂಡ ವಿದೇಶದಲ್ಲಿ ಕುಟುಂಬದ ಕಚೇರಿ (ಫ್ಯಾಮಿಲಿ ಆಫೀಸ್‌) ತೆರೆಯಲು ಮುಂದಾಗಿದ್ದಾರೆಂದು ಹೇಳಲಾಗಿದೆ. ಜಗತ್ತಿನ ನಂ.3 ಶ್ರೀಮಂತ ಉದ್ಯಮಿಯಾಗಿರುವ ಗೌತಮ್‌ ಅದಾನಿ ದುಬೈ ಅಥವಾ ನ್ಯೂಯಾರ್ಕ್‌ನಲ್ಲಿ ಕುಟುಂಬದ ಕಚೇರಿ ತೆರೆಯುವ ಸಾಧ್ಯತೆಯಿದೆ. ಸಮೀಕ್ಷೆಯೊಂದರ ಪ್ರಕಾರ ಕಳೆದ ವರ್ಷ ಭಾರತದ 8000 ಮಂದಿ ಅತಿ ಶ್ರೀಮಂತರು ವಿದೇಶಗಳಲ್ಲಿ ಕುಟುಂಬದ ಕಚೇರಿ ತೆರೆದಿದ್ದಾರೆ. ಉದ್ಯಮಿಗಳು ಕುಟುಂಬದ ಕಚೇರಿ ತೆರೆಯುವುದು ಅಂದರೆ ಅದರರ್ಥ ಸಾಮಾನ್ಯವಾಗಿ ಅವರು ಕುಟುಂಬದ ಸಮೇತ ಆ ದೇಶದ ಪೌರತ್ವ ಪಡೆದು ಅಲ್ಲಿಂದಲೇ ತಮ್ಮ ಉದ್ದಿಮೆಯನ್ನು ನಡೆಸುವುದಾಗಿದೆ.

ಮುಕೇಶ್‌ ಅಂಬಾನಿ ಸಿಂಗಾಪುರದಲ್ಲಿ ಕುಟುಂಬದ ಕಚೇರಿ ತೆರೆಯುವುದು ಈಗಾಗಲೇ ಅಂತಿಮವಾಗಿದೆ. ಆದರೆ, ಗೌತಮ್‌ ಅದಾನಿ ಇನ್ನೂ ದುಬೈ ಅಥವಾ ನ್ಯೂಯಾರ್ಕ್‌ನಲ್ಲಿ ಸ್ಥಳ ಅಂತಿಮಗೊಳಿಸಿಲ್ಲ. ಅವರ ಸಹೋದರ ವಿನೋದ್‌ ಅದಾನಿ ದುಬೈನಲ್ಲಿ ನೆಲೆಸಿದ್ದು, ಅವರು ಜಗತ್ತಿನ ನಂ.1 ಅನಿವಾಸಿ ಭಾರತೀಯ (ಎನ್‌ಆರ್‌ಐ) ಶ್ರೀಮಂತ ಉದ್ಯಮಿಯಾಗಿದ್ದಾರೆ.

ಮೊದಲ ದಿನವೇ ಕರ್ನಾಟಕಕ್ಕೆ ಬಂಪರ್ ಕೊಡುಗೆ: ಒಂದು ಲಕ್ಷ ಕೋಟಿ ಹೂಡಿಕೆ ಮಾಡಲಿರುವ ಅದಾನಿ ಗ್ರೂಪ್

ದುಬೈ ಹಾಗೂ ಸಿಂಗಾಪುರದಲ್ಲಿ ಶ್ರೀಮಂತರಿಗೆ ತೆರಿಗೆ ಕಡಿಮೆ ಇರುವುದರಿಂದ ಉದ್ಯಮಿಗಳು ಹೆಚ್ಚಾಗಿ ಅಲ್ಲಿ ಕುಟುಂಬದ ಕಚೇರಿ ತೆರೆಯುತ್ತಾರೆ. ಜೊತೆಗೆ ವಿದೇಶಗಳಲ್ಲಿ ಉದ್ದಿಮೆಗಳನ್ನು ವಿಸ್ತರಿಸಲು ಕೂಡ ಅವರಿಗೆ ವಿದೇಶ ವಾಸವು ನೆರವಿಗೆ ಬರುತ್ತದೆ. ಸೀರಂ ಇನ್‌ಸ್ಟಿಟ್ಯೂಟ್‌ ಮುಖ್ಯಸ್ಥ ಅದಾರ್‌ ಪೂನಾವಾಲಾ, ಹಿಂದೂಜಾ ಗ್ರೂಪ್‌ನ ಮುಖ್ಯಸ್ಥರು ಈಗಾಗಲೇ ವಿದೇಶಿ ಪೌರತ್ವ ಪಡೆದು ಅಲ್ಲೇ ನೆಲೆಸಿದ್ದಾರೆ. ಅದಾನಿ ಸಮೂಹವು ವಿಶೇಷ ಕುಟುಂಬ ಕಚೇರಿ ವ್ಯವಸ್ಥಾಪಕರ ಸಂಪೂರ್ಣ ಸೂಟ್ ಅನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯಲ್ಲಿದೆ ಎಂದು ಬೆಳವಣಿಗೆಯ ಬಗ್ಗೆ ತಿಳಿದಿರುವ ವ್ಯಕ್ತಿಯನ್ನು ಉಲ್ಲೇಖಿಸಿ ವರದಿ ಹೇಳಿದೆ.

ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮರಳಿ ಮೂರನೇ ಸ್ಥಾನಕ್ಕೆ ಜಿಗಿದ ಗೌತಮ್ ಅದಾನಿ

ಇತ್ತೀಚೆಗೆ ಅದಾನಿ, ಲೂಯಿಸ್ ವಿಟಾನ್‌ನ ಅಧ್ಯಕ್ಷ ಮತ್ತು ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಅಗ್ರ 3 ರಲ್ಲಿ ಸ್ಥಾನ ಪಡೆದ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಚೀನಾದ ಜಾಕ್ ಮಾ ಮತ್ತು ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಸೇರಿದಂತೆ ಯಾವುದೇ ಏಷ್ಯನ್ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಮೊದಲ ಮೂರರಲ್ಲಿ ಈವರೆಗೂ ಸ್ಥಾನ ಪಡೆದಿರಲಿಲ್ಲ.

click me!