ಉತ್ತರ ಪ್ರದೇಶ ಚುನಾವಣೆ: ಯೋಗಿ ಸರ್ಕಾರದ ಮುಂದಿರುವ ಸವಾಲೇನು? ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆ!

By Suvarna NewsFirst Published Aug 18, 2021, 6:47 PM IST
Highlights

*ಉತ್ತರ ಪ್ರದೇಶ ಚುನಾವಣೆಯಲ್ಲಿ ಯೋಗಿ ಸರ್ಕಾರದ ಮುಂದಿರುವ ಸವಾಲು
*ಕೃಷಿ ಕಾಯ್ದೆ, ಬೆಲೆ ಏರಿಕೆಗೆ ಉತ್ತರ ಪ್ರದೇಶ ಜನರ ಅಭಿಪ್ರಾಯವೇನು?
*ಕೇಂದ್ರ ಬಿಜೆಪಿ ಹಾಗೂ ಯೋಗಿ ಸರ್ಕಾರಕ್ಕೆ ಮುಳ್ಳಾಗುತ್ತಾ ಬೆಲೆ ಏರಿಕೆ?
*ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆಯಲ್ಲಿ 'ಜನ್ ಕಿ ಬಾತ್' ಹೇಗಿದೆ?

ಲಖನೌ (ಆ.18): ದೇಶವೇ ಕಾದು ನೋಡುತ್ತಿರುವ ಉತ್ತರ ಪ್ರದೇಶ ಚುನಾವಣೆಗೆ ಪಕ್ಷಗಳ ತಯಾರಿ ಚುರುಕುಗೊಂಡಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಆಡಳಿತರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹೋರಾಡಲಿದೆ. ಇತ್ತ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ (SP)ಮೈತ್ರಿ ಕೂಟ,  ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿ (BSP) ಸೇರಿ ಇತರೆ ಪಕ್ಷಗಳು ಅಧಿಕಾರ ಹಿಡಿಯಲು ತನ್ನೆಲ್ಲಾ ಪ್ರಯತ್ನ ಮಾಡಲಿವೆ. ಆಡಳಿತಾರೂಢ ಬಿಜೆಪಿ ಸೇರಿ SP, BSP ಹಾಗೂ ಇತರೆ ಪಕ್ಷಗಳಿಗೆ ಗೆಲುವು ಕಬ್ಬಿಣದ ಕಡಲೆ ಆಗುವುದರಲ್ಲಿ ಅನುಮಾನವೇ ಇಲ್ಲ. ಪ್ರತಿ ಪಕ್ಷಕ್ಕೂ ಹಲವು ಸವಾಲುಗಳಿವೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ನಡೆಸಿದ ಸಮೀಕ್ಷೆಯು ಯುಪಿ ಚುನಾವಣೆ ಹಾಗೂ ಸವಾಲಿನ ಮೇಲೆ ಬೆಳಕು ಚೆಲ್ಲಿದೆ.

"

#UP22WithAsianetNews: ಯೋಗಿ, ಅಖಿಲೇಶ್ ನಡುವೆ ಬಿಗ್‌ ಫೈಟ್!

ತೈಲ ಬೆಲೆ ಏರಿಕೆಯಿಂದ ಉಂಟಾದ ಹಣದುಬ್ಬರ, ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕೃಷಿ ಮಸೂದೆ ಸೇರಿ ಹಲವು ಸವಾಲುಗಳು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಮೇಲಿವೆ. ಕೇಂದ್ರ ಜಾರಿಗೆ ತಂದ ಕೃಷಿ ಮಸೂದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯಟ್ ಜನಾಂದೋಲನ ಸಭೆ ನಡೆಸಿದ್ದರು. ಇತ್ತ ವಿಪಕ್ಷಗಳೂ ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಇವೆ. ಹೀಗಾಗಿ ಈ ಬಾರಿಯ ಉತ್ತರ ಪ್ರೇದಶದ ಚುನಾವಣೆಯಲ್ಲಿ ಕೃಷಿ ಮಸೂದೆ ವಿಪಕ್ಷಗಳ ಪ್ರಮುಖ ಅಸ್ತ್ರವಾಗಲಿದೆ. ಇದೇ ಕೃಷಿ ಮಸೂದೆ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಯಾವ ರೀತಿ ಸವಾಲು ಒಡ್ಡಲಿದೆ. ಈ ಕುರಿತು ಸಮೀಕ್ಷೆ ಕುತೂಹಲ ಮಾಹಿತಿ ಹೊರಹಾಕಿದೆ.

ಕೇಂದ್ರ ಕೃಷಿ ಮಸೂದೆ ಹಾಗೂ ಮಸೂದೆ ಕುರಿತು ಎದ್ದಿರುವ ವಿರೋಧದ ಅಲೆ ಉತ್ತರ ಪ್ರದೇಶದ ಚುನಾವಣೆ ಬಿಜೆಪಿ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎನ್ನುವುದು ಸಮೀಕ್ಷೆಯಿಂದ ಬಯಲಾಗಿದೆ. ಕಾರಣ ಶೇಕಡ 40 ರಷ್ಟು ಮಂದಿಗೆ ಕೇಂದ್ರ ಕೃಷಿ ಮಸೂದೆ ಕುರಿತ ಅರಿವಿದೆ. ಆದರೆ ಶೇಕಡಾ 31ರಷ್ಟು ಮಂದಿಗೆ ಮಸೂದೆಯಲ್ಲಿರುವ ಅಂಶಗಳ ಕುರಿತು ತಿಳಿದಿಲ್ಲ. ಇನ್ನು ಶೇಕಡಾ 29 ರಷ್ಟು ಮಂದಿಗೆ ಮಾತ್ರ ಕೇಂದ್ರ ಸರಕಾರದ ಕೃಷಿ ಮಸೂದೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ವ್ಯಕ್ತವಾಗುತ್ತಿರುವ ಬಗ್ಗೆ ಅರಿವು ಕೂಡ ಇಲ್ಲ.

ಕೇಂದ್ರದ ಕೃಷಿ ಮಸೂದೆ ಒಂದು ವರ್ಗದಲ್ಲಿ ಬಿಜೆಪಿ ವಿರೋಧಿ ಅಲೆಯನ್ನು ಸೃಷ್ಟಿಸಿರುವುದು ಸುಳ್ಳಲ್ಲ. ಭಾರತೀಯ ಕಿಸಾನ್ ಯೂನಿಯನ್ ಸಂಘಟನೆ ನಾಯಕ ರಾಕೇಶ್ ಟಿಕಾಯತ್ ಉತ್ತರ ಪ್ರದೇಶದಲ್ಲಿ ನಡೆಸಿದ ಹಲವು ಪ್ರತಿಭಟನಾ ಜಾಥಾಗಳು ಈ ವಿರೋಧಿ ಅಲೆ ಪ್ರಬಲವಾಗಲು ನೆರವಾಗಿದೆ. ಇದೀಗ ಉತ್ತರ ಪ್ರದೇಶ ಸರ್ಕಾರ ಕಿಸಾನ್ ಪಂಚಾಯತ್ ಸಭೆ ನಡೆಸಲು ಆಯೋಜಿಸಿದೆ. ಆಗಸ್ಟ್ 22 ರಿಂದ ಕೃಷಿ ಮಸೂದೆ ಕುರಿತು ಜನರಲ್ಲಿನ ಗೊಂದಲಗಳನ್ನು ನಿವಾರಿಸುವ ಪ್ರಯತ್ನಕ್ಕೆ ಮುಂದಾಗಿದೆ.

UP ಚುನಾವಣೆ; ಜಾತಿ ಲೆಕ್ಕದ ನಡುವೆ ಜನ ಬಯಸುತ್ತಿರುವುದೇನು?ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷಾ ವರದಿ!

ಕೇಂದ್ರದ ಕೃಷಿ ಮಸೂದೆ ಉತ್ತರ ಪ್ರದೇಶದ ಜನರಿಗೆ ಅರ್ಥವಾಗಿದೆಯಾ ಅಥವಾ ಇಲ್ಲವೇ ಅನ್ನೋದು ಮಾತ್ರವಲ್ಲ, ಇದೇ ಕೃಷಿ ಮಸೂದೆ ಕುರಿತು ಜನರ ಅಭಿಪ್ರಾಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ಸಮೀಕ್ಷೆ ಸಂಗ್ರಹಿಸಿದೆ. ಈ ಮಾಹಿತಿ ಮತ್ತಷ್ಟು ಕೂತಹಲಕರವಾಗಿದೆ.

ಕೇಂದ್ರದ ಕೃಷಿ ಮಸೂದೆಯನ್ನು ಉತ್ತರ ಪ್ರದೇಶದಲ್ಲಿ ಉತ್ತಮ ಎಂದವರು ಶೇಕಡಾ 24.  ಇದೇ ಮಸೂದೆಯನ್ನು ವಿರೋಧಿಸುತ್ತಿರುವವರ ಸಂಖ್ಯೆ ಶೇಕಡಾ 21. ಇನ್ನು ಶೇಕಡಾ 55 ರಷ್ಟು ಮಂದಿಗೆ ಕೃಷಿ ಮಸೂದೆ ಕುರಿತು ಹೆಚ್ಚೇನೂ ಗೊತ್ತೇ ಇಲ್ಲ. ಈ ಅಂಕಿ ಅಂಶದಲ್ಲಿ ಕೇಂದ್ರ ಜಾರಿಗೆ ತಂದ ಕೃಷಿ ಮಸೂದೆಯನ್ನು ಒಪ್ಪಿಕೊಂಡವರ ಸಂಖ್ಯೆ ಹೆಚ್ಚಿದೆ. ರೈತರ ಸಮಸ್ಯೆಗಳ ಪರಿಹಾರದ ಜೊತೆಗೆ ಉತ್ತರ ಪ್ರದೇಶದ ಜನ ಸ್ಥಳೀಯ ಸಮಸ್ಯೆಗಳತ್ತ ಸರ್ಕಾರ ಗಮನಹರಿಸಬೇಕು. ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸಾಗಬೇಕು ಅನ್ನೋ ಅಭಿಪ್ರಾಯ ಹೊಂದಿದ್ದಾರೆ.

ರೈತರ ಪ್ರತಿಭಟನೆ, ಆಂದೋಲನ ಪಶ್ಚಿಮ ಉತ್ತರ ಪ್ರದೇಶ ಹಾಗೂ ಹರ್ಯಾಣ ಗಡಿಗೆ ತಾಗಿಕೊಂಡಿರುವ ಬ್ರಿಜ್ ಪ್ರಾಂತ್ಯದಲ್ಲೂ ಹೆಚ್ಚಾಗಿ ನಡೆದಿತ್ತು. ಹೀಗಾಗಿ ಈ ಪ್ರದೇಶದಲ್ಲಿ ನೂತನ ಕೃಷಿ ಮಸೂದೆ ಚುನಾವಣೆಯಲ್ಲಿ ಯೋಗಿ ಸರ್ಕಾರಕ್ಕೆ ಕೊಂಚ ಹಿನ್ನಡೆ ತರಲಿದೆ.  ಆದರೆ, ಕೃಷಿ ಮಸೂದೆ ಬಗ್ಗೆ ಸ್ವಲ್ಪವೂ ಅರಿವಿಲ್ಲದ ಜನರು ಶೇ.50ಕ್ಕಿಂತ ಹೆಚ್ಚಿರುವುದರಿಂದ ಈ ಮಸೂದೆ ಉತ್ತರ ಪ್ರದೇಶ ಚುನಾವಣೆ ಮೇಲೆ ಪ್ರಭಾವ ಬೀರುವುದು ಅಷ್ಟಕ್ಕಷ್ಟೇ ಎನ್ನುವುದು ಸ್ಪಷ್ಟ.

ಉತ್ತರ ಪ್ರದೇಶಕ್ಕೆ ಮತ್ತೊಮ್ಮೆ ಯೋಗಿ? ಅಚ್ಚರಿ ಕೊಟ್ಟ ಏಷ್ಯಾನೆಟ್‌ ಸಮೀಕ್ಷೆ ವರದಿ!

ಕೃಷಿ ಮಸೂದೆ ಮಾತ್ರ ಬಿಜೆಪಿ ಸವಾಲಾಗಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆಯಿಂದ ಉಂಟಾದ ವಸ್ತುಗಳ ಬೆಲೆ ಏರಿಕೆ ಬಹುದೊಡ್ಡ ಸವಾಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಇದರಿಂದ ಜನಸಾಮಾನ್ಯರಿಗೆ ಎದುರಾದ ಆರ್ಥಿಕ ಹೊಡೆತ, ಎದುರಾದ ಸಮಸ್ಯೆಗಳು ಒಂದೆರಡಲ್ಲ. ಇದರ ಜೊತೆಗೆ ಕೊರೋನಾ ನಿಯಂತ್ರಣ, ನಿರ್ವಹಣೆ, ಲಾಕ್‌ಡೌನ್ ನೀಡಿದ ಆರ್ಥಿಕ ಹಿಂಜರಿತ ಸೇರಿದಂತೆ ಸಾಲು ಸಾಲು ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಅನ್ನೋದ ಸಮೀಕ್ಷೆ ಅಂಕಿ ಅಂಶಗಳು ಹೇಳುತ್ತಿವೆ.

ಈ ಬಾರಿಯ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್‌ಗೆ ಎದುರಾಗುವ ಅತೀ ದೊಡ್ಡ ಸವಾಲು ಅಥವಾ ಹಿನ್ನಡೆ ಬೆಲೆ ಏರಿಕೆ ಸಮಸ್ಯೆ. ಶೇಕಡಾ 61 ರಷ್ಟು ಮಂದಿ ಬೆಲೆ ಏರಿಕೆ ಸಮಸ್ಯೆ 2022ರ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಸರ್ಕಾರಕ್ಕೆ ಹಿನ್ನಡೆ ತಂದೊಡ್ಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೋನಾ ವಕ್ಕರಿಸಿದಾಗ ಉತ್ತರ ಪ್ರದೇಶದ ತೆಗೆದುಕೊಂಡ ಕ್ರಮಗಳು, ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯ, ಆಸ್ಪತ್ರೆ, ಬೆಡ್, ಆಕ್ಸಿನ್ ಸಮಸ್ಯೆ ಸೇರಿದಂತೆ ಕೊರೋನಾ ನಿರ್ವಹಣೆ ಕೂಡ ಮುಂದಿನ ಚುನಾವಣೆಯಲ್ಲಿ ಯೋಗಿ ಸರ್ಕಾರಕ್ಕೆ ಕಾಡಲಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 17.1 ಕ್ಷ ಕೊರೋನಾ ಕೇಸ್ ದಾಖಲಾಗಿದ್ದರೆ, 22,785 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಅಂಕಿ ಸಂಖ್ಯೆ ಉತ್ತರ ಪ್ರದೇಶದ ಕೊರೋನಾ ಕತೆ ಹೇಳುತ್ತದೆ.  ಇನ್ನು ಗಂಗಾ ನದಿಯಲ್ಲಿ ತೇಲಿದ ಕೊರೋನಾ ಸೋಂಕಿತರ ಮೃತದೇಹ ಸೇರಿ ಹಲವು ಘಟನೆಗಳಿಂದ ಶೇಕಡಾ 30 ರಷ್ಟು ಜನ ಕೊರೋನಾ ನಿರ್ವಹಣೆಯಲ್ಲಿ ಯೋಗಿ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ. ಇನ್ನು ಶೇಕಡಾ 9 ರಷ್ಟು ಮಂದಿ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಯೋಗಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮುಂದಿನ ಚುನಾವಣೆ ವಿಚಾರದಲ್ಲೂ ಯೋಗಿಗೆ ಹಿನ್ನಡೆ ತರಲಿದೆ ಎಂದಿದ್ದಾರೆ.

ಯೋಗಿ, ಅಖಿಲೇಶ್, ಮಾಯಾ: ಉ. ಪ್ರದೇಶದಲ್ಲಿ ಯಾರು ಬೆಸ್ಟ್‌? ಸಮೀಕ್ಷೆಯಲ್ಲಿ ಸಿಕ್ತು ಉತ್ತರ!

ಬೆಲೆ ಏರಿಕೆ, ಕೊರೋನಾ ನಿರ್ವಹಣೆ, ಕೃಷಿ ಮಸೂದೆ ವಿರೋಧಿ ಅಲೆ ಸೇರಿದಂತೆ ಕೆಲ ವಿಚಾರಗಳು ಯೋಗಿ ಸರ್ಕಾರಕ್ಕೆ ಸವಾಲಾಗಿದೆ. ಆದರೆ ಯೋಗಿ ಸರ್ಕಾರ ತನ್ನ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಅದರಲ್ಲೂ ಪ್ರಮುಖವಾಗಿ ಉತ್ತರ ಪ್ರದೇಶ ಇದುವರೆಗಿನ ಸರ್ಕಾರದಲ್ಲಿ ಕಾನೂನು ಸುವ್ಯಸ್ಥೆ ನಿರ್ವಹಿಸಿದ ಉತ್ತಮ ಸರ್ಕಾರ ಯೋಗಿ ಸರ್ಕಾರ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಕಾರಣ ಸಮೀಕ್ಷೆ ಪ್ರಕಾರ ಶೇಕಡಾ 60 ರಷ್ಟು ಮಂದಿ ಯೋಗಿ ಸರ್ಕಾರ ಕಾನೂನು ಸುವ್ಯವಸ್ಥೆ ಪಾಲನೆ ಮಾಡಿದ್ದಾರೆ. ಅಪರಾಧ ಕೃತ್ಯಗಳು ಕಡಿಮೆಯಾಗಿದೆ ಹಾಗೂ ಭಯದ ವಾತಾವರಣ ದೂರವಾಗಿದೆ ಎಂದಿದ್ದಾರೆ. ಈ ಹಿಂದಿನ ಅಖಿಲೇಶ್ ಸರ್ಕಾರ ಕಾನೂನು ಸುವ್ಯಸ್ಥೆಯಲ್ಲಿ ಉತ್ತಮ ಎಂದವರ ಸಂಖ್ಯೆ ಶೇಕಡಾ 27. ಇನ್ನು ಮಾಯಾವತಿ ಸರ್ಕಾರದಲ್ಲಿ ಶೇಕಡಾ 13 ರಷ್ಟು ಮಂದಿ ಉತ್ತಮ ಎಂದಿದ್ದಾರೆ.

ಜಾತಿ, ಅಭ್ಯರ್ಥಿ, ಪಕ್ಷವನ್ನು ಮೀರಿ ಬೆಲೆ ಏರಿಕೆ ಸಮಸ್ಯೆ ಜನಸಾಮಾನ್ಯರನ್ನು ತಟ್ಟಿರುವ ಪ್ರಮುಖ ಸಮಸ್ಯೆಯಾಗಿದೆ. ಆದರೆ ಕಾನೂನು ಪಾಲನೆಯಲ್ಲಿ ಯೋಗಿ ಸರ್ಕಾರದ ಸಾಧನೆಗೆ ಈ ಎಲ್ಲಾ ಕೊರತೆಗಳನ್ನು ನೀಗಿಸುವ ಶಕ್ತಿ ಇಲ್ಲ. ಇದರ ಜೊತೆಗೆ ಪಡಿತರ ವಿತರಣೆ, ಪರಿಶಿಷ್ಠ ಜಾತಿ ಹಾಗೂ ಪಂಗಡಕ್ಕೆ ನೀಡಿರುವ ಸೌಲಭ್ಯಗಳು, ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆ ಸೇರಿದಂತೆ ಹಲವು ಜನರ ಆಡಳಿತ ನಿರ್ಧಾರಗಳು ಯೋಗಿ ಸರ್ಕಾರಕ್ಕೆ ವರವಾಗಿದೆ. ಇದರಿಂದ ಬಿಜೆಪಿ ಪರಿಶಿಷ್ಠ ಜಾತಿ ಸಮುದಾಯದ ಮತಗಳನ್ನು ಹಿಡಿದಿಟ್ಟುಕೊಳ್ಳಲು ನೆರವಾಗಲಿದೆ.

click me!