Breaking: ಸಿಎಂಗೆ ಸ್ಪೆಷಲ್‌ ಟ್ರೀಟ್‌ಮೆಂಟ್‌ ಸಾಧ್ಯವಿಲ್ಲ, ಕೇಜ್ರಿವಾಲ್‌ ಬಂಧನ ಸರಿ ಇದೆ ಎಂದ ಹೈಕೋರ್ಟ್‌!

By Santosh NaikFirst Published Apr 9, 2024, 4:04 PM IST
Highlights

ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅರವಿಂದ್‌ ಕೇಜ್ರಿವಾಲ್‌ಗೆ ನಿರಾಸೆಯಾಗಿದೆ. ಸಿಎಂ ಆಗಿರುವ ಕಾರಣಕ್ಕೆ ಸ್ಪೆಷಲ್‌ ಟ್ರೀಟ್‌ಮೆಂಟ್‌ ಸಾಧ್ಯವಿಲ್ಲ ಎಂದು ಹೇಳಿದೆ.
 

ನವದೆಹಲಿ (ಏ.9): ತಮ್ಮ ಬಂಧನವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಇರಾದೆಯಲ್ಲಿದ್ದ ಆಮ್‌ ಆದ್ಮಿ ಪಾರ್ಟಿಗೆ ನಿರಾಸೆಯಾಗಿದೆ. ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌, ಇದನ್ನು ವಜಾ ಮಾಡಿದೆ.ಒಂದು ರಾಜ್ಯದ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಸ್ಪೆಷಲ್‌ ಟ್ರೀಟ್‌ಮೆಂಟ್‌ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಇಡಿ ಸಂಗ್ರಹಿಸಿದ  ಸಾಕ್ಷ್ಯಗಳು ಅರವಿಂದ್ ಕೇಜ್ರಿವಾಲ್ ಪಿತೂರಿ ಮತ್ತು ಅಪರಾಧದ ಆದಾಯದ ಬಳಕೆ ಮತ್ತು ಮರೆಮಾಚುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದೆ. ಅವರು ತಮ್ಮ ವೈಯಕ್ತಿಕ ಸಾಮರ್ಥ್ಯ ಮತ್ತು ಎಎಪಿಯ ಸಂಚಾಲಕರಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಪ್ರಕರಣವು ಬಹಿರಂಗಪಡಿಸುತ್ತದೆ ಎಂದು ಹೈಕೋರ್ಟ್‌ ತಿಳಿಸಿದೆ.  

ಇನ್ನು ಚುನಾವಣಾ ಬಾಂಡ್‌ಅನ್ನು ಯಾರು ಖರೀದಿ ಮಾಡಿದ್ದಾರೆ. ಯಾರು ಮಾಡಿಲ್ಲ ಎನ್ನುವುದು ಈಗ ತನಿಖೆಯ ವಿಚಾರವಲ್ಲ ಎಂದೂ ಹೈಕೋರ್ಟ್‌ ತೀರ್ಪಿನ ವೇಳೆ ಹೇಳಿದೆ. ಇದೇ ವೇಳೆ ಚುನಾವಣೆಯ ಸಮಯದಲ್ಲಿಯೇ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋರ್ಟ್‌,  'ಆರೋಪಿಯನ್ನು ಬಂಧನ ಮಾಡಿರುವುದ ಮತ್ತು ರಿಮಾಂಡ್ ಅನ್ನು ಕಾನೂನಿನ ಪ್ರಕಾರ ಪರಿಶೀಲಿಸಬೇಕೇ ಹೊರತು ಚುನಾವಣಾ ಸಮಯದ ಪ್ರಕಾರ ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇಡಿ ಬಂಧನವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದ ಅರವಿಂದ್‌ ಕೇಜ್ರಿವಾಲ್‌ಗೆ ಇದರೊಂದಿಗೆ ದೊಡ್ಡ ಹಿನ್ನಡೆಯಾಗಿದೆ. ಅವರ ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದ್ದು, ಸದ್ಯಕ್ಕೆ ರಿಲೀಫ್‌ ಸಾಧ್ಯತೆ ಇಲ್ಲ ಎನ್ನಲಾಗಿದೆ. ಪ್ರಕರಣದಲ್ಲಿ ವಾದ ಮಾಡಿದ್ದ ಇಡಿ,  ಇಡೀ ಹಗರಣದಲ್ಲಿ ಹಣದ ವಹಿವಾಟು ನಡೆದಿದೆ. ತನಿಖೆ ಪ್ರಮುಖ ಹಂತದಲ್ಲಿದೆ. ಕೇಜ್ರಿವಾಲ್ ಪ್ರಕರಣದ ಪ್ರಮುಖ ಕಿಂಗ್ ಪಿನ್. ಚುನಾವಣೆಗೂ ಬಂಧನಕ್ಕೂ ಸಂಬಂಧ ಇಲ್ಲ. 9  ಬಾರಿ ನೋಟೀಸ್ ನೀಡಿದ್ದರೂ ವಿಚಾರಣೆ ಗೆ ಹಾಜರಾಗಿರಲಿಲ್ಲ. ವಶದಲ್ಲಿರಲು ಏನು ಸಮಸ್ಯೆ ಇಲ್ಲ ಎಂದು ಕೇಜ್ರಿವಾಲ್ ಒಪ್ಪಿದ್ದಾರೆ. ಬಂಧನದ ವೇಳೆ ಕೇಜ್ರಿವಾಲ್ ರ ಮೊಬೈಲ್ ಸಿಕ್ಕಿದೆ. ಇದರ ಪಾಸ್ ವಾಡ್೯ ಸೇರಿ ಹಲವು ದೃಷ್ಟಿಕೋನಗಳಿಂದ ನಾವು ನೋಡಬೇಕಾಗುತ್ತದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದರು.

ಕೇಜ್ರಿವಾಲ್ ಕಿಕ್ ಬ್ಯಾಕ್ ಪಡೆದಿದ್ದಾರೆ. ಕೇಜ್ರಿವಾಲ್ ಮತ್ತು ಸೌತ್ ಗ್ರೂಪ್ ನಡುವೆ ವಿಜಯ್ ನಾಯರ್ ಮಧ್ಯವರ್ತಿ ಯಾಗಿ ಕೆಲಸ ಮಾಡಿದ್ದಾರೆ. ಕೇಜ್ರಿವಾಲ್ ಪರವಾಗಿ ವಿಜಯ್ ನಾಯರ್ 100 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಅಬಕಾರಿ ನೀತಿ ನಿರೂಪಣೆ ಯಲ್ಲಿ ಕೇಜ್ರಿವಾಲ್ ಅವರ ನೇರ ಪಾತ್ರ ಇದೆ ಎಂದು ಹೇಳಿತ್ತು.

ಛೋಟಾ ರಾಜನ್‌, ಶಹಾಬುದ್ದೀನ್‌ ಇದ್ದ ತಿಹಾರ್‌ನ ನಂ.2 ಸೆಲ್‌ನಲ್ಲಿ ದಿನ ಕಳೆದ ಅರವಿಂದ್‌ ಕೇಜ್ರಿವಾಲ್‌!

ವಾದ ಮಂಡಿಸಿದ್ದ ಕೇಜ್ರಿವಾಲ್‌, ಇತಿಹಾಸದಲ್ಲೇ ಮೊದಲ ಬಾರಿ ಹಾಲಿ ಸಿಎಂ ಬಂಧನವಾಗಿದೆ. ನಾನು  ಭಾಗಿಯಾಗಿರುವ ಬಗ್ಗೆ ನೇರ ಸಾಕ್ಷ್ಯ ಇಲ್ಲ. ನನ್ನ ಬಂಧನ ಕುರಿತು ಇ ಡಿ ಅಗತ್ಯತತೆಯನ್ನು ಸರಿಯಾಗಿ ತೋರಿಸಿಲ್ಲ ಎಂದಿದ್ದರು.

ಇಡಿ ತನಿಖೆಗೆ ಅಸಹಕಾರ, ತನ್ನ ಪಕ್ಷದವರ ವಿರುದ್ಧವೇ ಕೇಜ್ರಿವಾಲ್ ಸುಳ್ಳು ಸಾಕ್ಷ್ಯ: ಕೇಜ್ರಿ ವಿರುದ್ಧ ಇಡಿ ಆರೋಪ

ಸದ್ಯ ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಾರ್ಚ್ 21 ರ ರಾತ್ರಿ ಅವರನ್ನು ಬಂಧಿಸಲಾಗಿತ್ತು. ಮಾರ್ಚ್ 22 ರಂದು ವಿಚಾರಣಾ ನ್ಯಾಯಾಲಯವು ಅವರನ್ನು ಆರು ದಿನಗಳ ಇಡಿ ಕಸ್ಟಡಿಗೆ ನೀಡಿತು, ಅದನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಲಾಯಿತು. ಏಪ್ರಿಲ್ 01 ರಂದು ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು. ಎಎಸ್‌ಜಿ ಎಸ್‌ವಿ ರಾಜು ಇಡಿಯನ್ನು ಪ್ರತಿನಿಧಿಸಿದ್ದರು. ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೇಂದ್ರ ತನಿಖಾ ಸಂಸ್ಥೆಯು ಸೆಕ್ಷನ್ 50 ಪಿಎಂಎಲ್‌ಎಗೆ ಅನುಗುಣವಾಗಿಲ್ಲ ಎಂದು ವಾದಿಸಿದರು, ಅದು ಸಮನ್ಸ್ ನೀಡಲು, ಸಾಕ್ಷ್ಯ ಸಂಗ್ರಹಿಸಲು ಇತ್ಯಾದಿಗಳಿಗೆ ಅಧಿಕಾರ ನೀಡುತ್ತದೆ.

click me!