ದಿಲ್ಲಿ ಅಬಕಾರಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್‌ ಕಿಂಗ್‌ಪಿನ್‌: ಕೋರ್ಟ್‌ಗೆ ಇ.ಡಿ. ವರದಿ

By Kannadaprabha News  |  First Published Mar 23, 2024, 8:03 AM IST

ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಮೂಲಕವೇ ಅಧಿಕಾರಕ್ಕೇರಿದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರೇ ದೆಹಲಿ ಅಬಕಾರಿ ಹಗರಣದ ಮುಖ್ಯ ಸಂಚುಗಾರ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದೆ. 


ನವದೆಹಲಿ (ಮಾ.23): ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಮೂಲಕವೇ ಅಧಿಕಾರಕ್ಕೇರಿದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರೇ ದೆಹಲಿ ಅಬಕಾರಿ ಹಗರಣದ ಮುಖ್ಯ ಸಂಚುಗಾರ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದೆ. ಗುರುವಾರ ಕೇಜ್ರಿವಾಲ್‌ ಅವರನ್ನು ಬಂಧಿಸಿದ್ದ ಇ.ಡಿ. ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ 2ಕ್ಕೆ ಅವರನ್ನು ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ಜಡ್ಜ್‌ ಕಾವೇರಿ ಬವೇಜಾ ಅವರ ಮುಂದೆ ಹಾಜರುಪಡಿಸಿದರು. 

ಈ ವೇಳೆ ಕೇಜ್ರಿವಾಲ್‌ ಅವರನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂಬ ಕೋರಿಕೆ ಇಟ್ಟರು. ಜತೆಗೆ ಹಗರಣದಲ್ಲಿ ಕೇಜ್ರಿ ಪಾತ್ರವನ್ನು ನ್ಯಾಯಾಲಯಕ್ಕೆ ವಿವರಿಸಿದರು. ದೆಹಲಿ ಅಬಕಾರಿ ಲೈಸೆನ್ಸ್‌ ಹಂಚಿಕೆಯಲ್ಲಿ ಗರಿಷ್ಠ ಲಾಭ ಪಡೆಯುವ ಸಲುವಾಗಿ ಬಿಆರ್‌ಎಸ್‌ ನಾಯಕಿ ಕವಿತಾ ರೆಡ್ಡಿ ನೇತೃತ್ವದಲ್ಲಿ ದಕ್ಷಿಣ ಭಾರತದ ವಿವಿಧ ಉದ್ಯಮಿಗಳು ರಚಿಸಿಕೊಂಡಿದ್ದ ‘ಸೌತ್‌ ಗ್ರೂಪ್‌’ನಿಂದ ಹಲವಾರು ಕೋಟಿ ರು.ಗಳನ್ನು ಕೇಜ್ರಿವಾಲ್‌ ಅವರು ಲಂಚವಾಗಿ ಪಡೆದಿದ್ದರು. 

Tap to resize

Latest Videos

ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ 50 ಕೋಟಿ ರು. ಆಫರ್‌: ಸಿಎಂ ಸಿದ್ದರಾಮಯ್ಯ

ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಸೌತ್‌ ಗ್ರೂಪ್‌ನ ಕೆಲವು ಸದಸ್ಯರಿಂದ 100 ಕೋಟಿ ರು. ಹಣವನ್ನು ಕೇಳಿದ್ದರು. ಕೇಜ್ರಿವಾಲ್‌ ಪಡೆದ ಲಂಚದ ಹಣದ ಪೈಕಿ 45 ಕೋಟಿ ರು. ಗೋವಾ ಚುನಾವಣೆಯಲ್ಲಿ ಬಳಕೆಯಾಗಿದೆ. ಅದನ್ನು ಹವಾಲಾ ಮೂಲಕ ಸಾಗಿಸಲಾಗಿದೆ ಎಂದು ಇ.ಡಿ. ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಅವರು ದೂರಿದರು. ಆಪ್‌ ಎಂಬುದು ವ್ಯಕ್ತಿಯಲ್ಲ. ಅದು ಒಂದು ಕಂಪನಿ. ಒಂದು ಕಂಪನಿಯ ನಡವಳಿಕೆಗೆ ಅದರಲ್ಲಿರುವ ಎಲ್ಲ ವ್ಯಕ್ತಿಗಳೂ ಹೊಣೆಗಾರರಾಗಿರುತ್ತಾರೆ ಎಂದು ಅವರು ಹೇಳಿದರು.

7 ದಿನ ಇ.ಡಿ. ವಶಕ್ಕೆ: ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ದಿಲ್ಲಿ ಸ್ಥಳೀಯ ನ್ಯಾಯಾಲಯ 7 ದಿನ (ಮಾ,28ರವರೆಗೆ) ಜಾರಿ ನಿರ್ದೇಶನಾಲಯದ (ಇ.ಡಿ.) ವಶಕ್ಕೆ ಒಪ್ಪಿಸಿದೆ. ಕೇಜ್ರಿವಾಲ್‌ ಈ ಹಗರಣದ ರೂವಾರಿ. ಅವರನ್ನು 10 ದಿನ ತನ್ನ ವಶಕ್ಕೆ ಒಪ್ಪಿಸಿ ಎಂದು ಇ.ಡಿ. ಕೇಳಿತ್ತು. ಕೊನೆಗೆ ಕೋರ್ಟು 7 ದಿನಕ್ಕೆ ವಶಕ್ಕೆ ಒಪ್ಪಿಸಲು ಸಮ್ಮತಿಸಿದೆ.

ಆಪ್ ಪ್ರತಿಭಟನೆ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಇಡಿ, ಬಿಜೆಪಿ ವಿರುದ್ಧ ಮೈಸೂರಿನ ಪುರಭವನ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು. ಮುಂಬರುವ ಐದು ವಿಧಾನಸಭೆ ಚುನಾವಣೆಗಳು ಸೇರಿದಂತೆ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೇಂದ್ರ ಬಿಜೆಪಿ ಸರ್ಕಾರ ಹೀಗೆ ಮಾಡುತ್ತಿದೆ. ಸರ್ವಾಧಿಕಾರದ ಅಮಲಿನಲ್ಲಿರುವ ಬಿಜೆಪಿ, ಕೇಂದ್ರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಸಿಬಿಐ ತನಿಖೆ ವಾಪಸ್‌: ಏ.5ರಿಂದ ಹೈಕೋರ್ಟ್‌ ವಿಚಾರಣೆ

ಪಕ್ಷದ ಮುಖಂಡರ ವಿರುದ್ಧ ಉದ್ದೇಶಪೂರ್ವಕ ಆರೋಪ ಮಾಡಿ, ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಆದರೆ, ಈವರೆಗೆ ಒಂದೇ ಒಂದು ಪೈಸೆ ಭ್ರಷ್ಟಾಚಾರದ ಹಣ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಂಧನದ ಮೂಲಕ ಪಕ್ಷದ ಕಾರ್ಯವೈಖರಿಯನ್ನು ಕುಂಠಿತಗೊಳಿಸುವ ಪ್ರಯತ್ನವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ರಾಷ್ಟ್ರಾದ್ಯಂದ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು. ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಮಾಲವಿಕಾ ಗುಬ್ಬಿವಾಣಿ, ಸೋಸಲೆ ಸಿದ್ದರಾಜು, ಜಿಲ್ಲಾ ಕಾರ್ಮಿಕ ಘಟಕದ ಲೋಕೇಶ್ ಮೊದಲಾದವರು ಇದ್ದರು.

click me!