Arvind Kejriwal: ರೋಡ್‌ ಶೋ ಮೂಲಕ ಜನತೆಗೆ ಆಪ್‌ ಧನ್ಯವಾದ

By Kannadaprabha NewsFirst Published Mar 14, 2022, 4:27 AM IST
Highlights

ಪಂಜಾಬ್‌ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಆಮ್‌ ಆದ್ಮಿ ಪಕ್ಷದ ನಾಯಕರು ಅಮೃತಸರದಲ್ಲಿ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಪಂಜಾಬ್‌ನ ಜನರಿಗೆ ಧನ್ಯವಾದ ಅರ್ಪಿಸಿದರು.

ಅಮೃತಸರ (ಮಾ.14): ಪಂಜಾಬ್‌ ಚುನಾವಣೆಯಲ್ಲಿ (Punjab Election) ಭರ್ಜರಿ ಜಯಗಳಿಸಿದ ನಂತರ ಆಮ್‌ ಆದ್ಮಿ ಪಕ್ಷದ (AAP) ನಾಯಕರು ಅಮೃತಸರದಲ್ಲಿ ಭರ್ಜರಿ ರೋಡ್‌ ಶೋ (Roadshow) ನಡೆಸುವ ಮೂಲಕ ಪಂಜಾಬ್‌ನ ಜನರಿಗೆ ಧನ್ಯವಾದ ಅರ್ಪಿಸಿದರು. ಈ ರಾರ‍ಯಲಿಯಲ್ಲಿ ಆಪ್‌ನ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ (Arvind Kejriwal), ಪಂಜಾಬ್‌ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್‌ (Bhagwant Mann) ಸೇರಿದಂತೆ ಜಯಗಳಿಸಿದ ಎಲ್ಲಾ ಹೊಸ ಶಾಸಕರು ಭಾಗವಹಿಸಿದ್ದರು. ಪಂಜಾಬ್‌ನ 117 ಕ್ಷೇತ್ರಗಳಲ್ಲಿ 92ರಲ್ಲಿ ಆಪ್‌ ಜಯಗಳಿಸಿತ್ತು.

ಅಮೃತಸರದ ಕಚೇರಿ ಚೌಕದಿಂದ ಆರಂಭವಾದ ರೋಡ್‌ಶೋನಲ್ಲಿ ತೆರೆದ ವಾಹನದಲ್ಲಿದ್ದ ಕೇಜ್ರಿವಾಲ್‌ ಮತ್ತು ಮಾನ್‌ ಅವರಿಗೆ ಕಾರ್ಯಕರ್ತರು ಹೂವಿನ ಮಳೆಗರೆದರು. ತ್ರಿವರ್ಣಧ್ವಜ ಮತ್ತು ಪಕ್ಷದ ಧ್ವಜಗಳನ್ನು ಹಿಡಿದಿದ್ದ ಸಾವಿರಾರು ಕಾರ್ಯಕರ್ತರು ರಾರ‍ಯಲಿಯಲ್ಲಿ ಭಾಗವಹಿಸಿದ್ದರು. ರೋಡ್‌ ಶೋಗು ಮೊದಲು ಸ್ವರ್ಣಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Latest Videos

ರೋಡ್‌ ಶೋನ ನಂತರ ಮಾತನಾಡಿದ ಆಪ್‌ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಹಲವು ವರ್ಷಗಳ ನಂತರ ಪಂಜಾಬ್‌ ಓರ್ವ ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಪಡೆದುಕೊಂಡಿದೆ ಎಂದು ಹೇಳಿದರು. ‘ಚುನಾವಣೆಯ ಸಮಯದಲ್ಲಿ ನಾವು ಜನರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಪೂರೈಸುತ್ತೇವೆ. ತಪ್ಪು ಮಾಡುವ ಯಾವುದೇ ಆಪ್‌ನ ಶಾಸಕರನ್ನು ಮುಲಾಜಿಲ್ಲದೇ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಅವರು ಹೇಳಿದರು.

ಪಂಜಾಬ್‌ ಪೂರ್ತಿ ಗುಡಿಸಿದ ಪೊರಕೆ... ಭಗವಂತ್ ಮಾನ್ ರೂಪದಲ್ಲಿ ಬಂದ ಪುಟ್ಟ ಬಾಲಕ

2 ರಾಜ್ಯಗಳಲ್ಲಿ ಅಧಿಕಾರ ಹಿಡಿದ ಮೊದಲ ಪ್ರಾದೇಶಿಕ ಪಕ್ಷ ಆಪ್‌: ದೆಹಲಿಗೆ ಸೀಮಿತವಾಗಿದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಇದೀಗ ನೆರೆಯ ಪಂಜಾಬಿನಲ್ಲೂ ಅಭೂತಪೂರ್ವ ಬಹುಮತ ಗಳಿಸುವ ಮೂಲಕ ಅಧಿಕಾರದ ಗದ್ದುಗೆಯನ್ನು ತನ್ನದಾಗಿಸಿಕೊಂಡಿದೆ. ತನ್ಮೂಲಕ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ದೇಶದ ಮೊದಲ ಪ್ರಾದೇಶಿಕ ಪಕ್ಷ ಎಂಬ ಇತಿಹಾಸ ಸೃಷ್ಟಿಸಿದೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಪರಾರ‍ಯಯ ಎಂಬ ಉದ್ದೇಶದಿಂದಲೇ ಈಗಿನ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನೇತೃತ್ವದಲ್ಲಿ 2012ರಲ್ಲಿ ಆಪ್‌ ರಚನೆಯಾಗಿತ್ತು. 2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನಂತರದ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್‌ ಬೆಂಬಲದೊಂದಿಗೆ ಅಧಿಕಾರವನ್ನೂ ಪಡೆಯಿತು. 

ನಂತರ 2015 ಮತ್ತು 2020ರಲ್ಲಿ ನಡೆದ ಚುನಾವಣೆಯಲ್ಲೂ ಆಪ್‌ ಅಭೂತಪೂರ್ವ ಬಹುಮತದೊಂದಿಗೆ ದೆಹಲಿಯಲ್ಲಿ ಅಧಿಕಾರಕ್ಕೆ ಏರಿತು. ಬಳಿಕ ದೆಹಲಿ ಆಚೆಗೆ ಕಣ್ಣಿಟ್ಟು ಪಂಜಾಬ್‌ನಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುತ್ತಾ ಬಂದ ಆಪ್‌ 2022ರ ವಿಧಾನಸಭಾ ಚುನಾವಣೆಯಲ್ಲಿ 92 ಕ್ಷೇತ್ರಗಲ್ಲಿ ಗೆದ್ದು ಜನಾದೇಶವನ್ನು ತನ್ನದಾಗಿಸಿಕೊಂಡಿದೆ.

ಪಂಜಾಬ್‌ ಗೆದ್ದ ಆಪ್‌ ಮುಂದಿನ ಟಾರ್ಗೆಟ್‌ ಹೀಗಿದೆ: ಪಂಜಾಬ್‌ನಲ್ಲಿ ದೊರೆತ ಅಭೂತ ಜಯದಿಂದ ಉತ್ತೇಜಿತವಾಗಿರುವ ಆಮ್‌ ಆದ್ಮಿ ಪಕ್ಷ (ಆಪ್‌) ಇದೀಗ ದಕ್ಷಿಣ ಭಾರತದತ್ತ ಗಮನ ಹರಿಸಿದೆ. ದಕ್ಷಿಣದ ರಾಜ್ಯಗಳಲ್ಲಿ ಬೃಹತ್‌ ಸದಸ್ಯತ್ವ ಆಂದೋಲನ ಹಾಗೂ ಪಾದಯಾತ್ರೆಗಳನ್ನು ಕೈಗೊಳ್ಳಲು ಪಕ್ಷದ ನಾಯಕತ್ವ ನಿರ್ಧರಿಸಿದೆ.

'ಬಿಜೆಪಿಗೆ ಪ್ರಮುಖ ಸವಾಲಾಗ್ತಾರೆ ಕೇಜ್ರಿವಾಲ್, ಕಾಂಗ್ರೆಸ್ ಸ್ಥಾನ ಪಡೆಯಲಿದೆ AAP

ದೆಹಲಿಯಲ್ಲಿ ಸತತ ಎರಡನೇ ಬಾರಿ ಸರ್ಕಾರ ರಚಿಸಿ, ಪಂಜಾಬ್‌ನಲ್ಲಿ ದೊಡ್ಡ ಜಯ ಸಾಧಿಸಿದ ನಂತರ ದೇಶಾದ್ಯಂತ ಪಕ್ಷವನ್ನು ಬೆಳೆಸಲು ಮುಂದಾಗಿರುವ ನಾಯಕರು, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಹಾಗೂ ಲಕ್ಷದ್ವೀಪದಲ್ಲಿ ಸದಸ್ಯತ್ವ ಆಂದೋಲನಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಸೋಮನಾಥ್‌ ಭಾರ್ತಿ ತಿಳಿಸಿದ್ದಾರೆ.

ಜನರ ಮನಸ್ಥಿತಿಯನ್ನು ಗಮನಿಸಿದರೆ ಆಪ್‌ನ ರಾಜಕಾರಣದತ್ತ ಅವರು ಒಲವು ತೋರುತ್ತಿರುವುದು ಕಂಡುಬರುತ್ತಿದೆ. ದಕ್ಷಿಣ ಭಾರತದಿಂದ ನಮಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಪಕ್ಷದ ಸ್ಥಳೀಯ ತಂಡಗಳು ದೊಡ್ಡ ಪ್ರಮಾಣದಲ್ಲಿ ಶೀಘ್ರದಲ್ಲೇ ಸದಸ್ಯತ್ವ ಆಂದೋಲನ ಆರಂಭಿಸಲಿವೆ ಎಂದು ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಆಪ್‌ ಸಕ್ರಿಯವಾಗಿದ್ದು, ಮುಂಬರುವ ಬೆಂಗಳೂರು ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

click me!