50 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ಮಾನವ; ನಾಲ್ವರನ್ನ ಹೊತ್ತ ಆರ್ಟೆಮಿಸ್‌ ನಾಳೆ ನಭಕ್ಕೆ

Kannadaprabha News   | Kannada Prabha
Published : Apr 01, 2026, 11:19 AM IST
Artemis II Launch Humans Returning to the Moon After 50 Years

ಸಾರಾಂಶ

5 ದಶಕಗಳ ಬಳಿಕ, ನಾಸಾದ 'ಆರ್ಟೆಮಿಸ್‌ 2' ಯೋಜನೆಯಡಿ ನಾಲ್ವರು ಗಗನಯಾನಿಗಳು ಓರಯಾನ್‌ ನೌಕೆಯಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಈ 10 ದಿನಗಳ ಯಾನದಲ್ಲಿ ಚಂದ್ರನನ್ನು ಸುತ್ತು ಹಾಕಿ ಬರಲಿದ್ದು, ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವರನ್ನು ಇಳಿಸುವ ನಿಟ್ಟಿನಲ್ಲಿ ಓರಿಯನ್‌ ನೌಕೆಯ ಪರೀಕ್ಷೆ.

ವಾಷಿಂಗ್ಟನ್‌ (ಏ.1): 5 ದಶಕಗಳ ಹಿಂದೆ ಮೊದಲ ಮಾನವ ಸಹಿತ ಚಂದ್ರಯಾನದ ಐತಿಹಾಸಿಕ ಸಾಧನೆ ಬಳಿಕ, ಬಹುತೇಕ ಸ್ಥಗಿತಗೊಂಡಿದ್ದ ಚಂದ್ರನ ಮೇಲೆ ಕಾಲಿಡುವ ಜಗತ್ತಿನ ಕನಸಿಗೆ ಅಮೆರಿಕ ಮತ್ತೆ ನೀರೆಯಲು ಹೊರಟಿದೆ. ನಾಲ್ವರು ಗಗನಯಾನಿಗಳನ್ನು ಹೊತ್ತ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ‘ಆರ್ಟೆಮಿಸ್‌ 2’ ಯೋಜನೆಯ ಭಾಗವಾಗಿ ಓರಯಾನ್‌ ನೌಕೆ ಚಂದ್ರನತ್ತ ಪ್ರಯಾಣ ಬೆಳೆಸಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತೀಯ ಕಾಲಮಾನ ಗುರುವಾರ ಬೆಳಗಿನ ಜಾವ 3.24ಕ್ಕೆ ನೌಕೆ ಚಂದ್ರನತ್ತ ಪ್ರಯಾಣ ಬೆಳೆಸಲಿದೆ.

ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಉಡಾವಣೆಯಾಗಲಿದೆ. ಒಂದು ವೇಳೆ ಹವಾಮಾನದಲ್ಲಿ ವ್ಯತ್ಯಯ ಕಂಡುಬಂದರೆ ಬಳಿಕ ಎರಡು ಗಂಟೆಗಳ ಅವಧಿಯವರೆಗೂ ವಿಜ್ಞಾನಿಗಳು ಕಾದು ನೋಡಲಿದ್ದಾರೆ. ಇಲ್ಲದೇ ಹೋದಲ್ಲಿ ಏ.6ರಂದು ಮತ್ತೆ ಉಡ್ಡಯನಕ್ಕೆ ಪ್ರಯತ್ನಿಸಲಿದ್ದಾರೆ.

ಕಳೆದ 50 ವರ್ಷಗಳ ಈಚಿಗೆ ಮಾನವ ಭೂಮಿಯ ಕಕ್ಷೆಯನ್ನು ಬಿಟ್ಟು ಹೋದ ಇತಿಹಾಸವಿಲ್ಲ. ಹೀಗಾಗಿ ಈ ಉಡ್ಡಯನ ಸಾಕಷ್ಟು ಕುತೂಹಲ ಕೆರಳಿಸಿದೆ. ಭವಿಷ್ಯದಲ್ಲಿ ಚಂದ್ರನ ಮೇಲೆ ಮತ್ತೆ ಮಾನವರನ್ನು ಇಳಿಸುವ ಉದ್ದೇಶ ಹೊಂದಿರುವ ನಾಸಾ ಅದರ ಭಾಗವಾಗಿ ಇದೀಗ ನಾಲ್ವರನ್ನು ನೌಕೆಯ ಮೂಲಕ ಕಳುಹಿಸಿಕೊಡುತ್ತಿದೆ. 10 ದಿನಗಳ ಯಾನದ ಅವಧಿಯಲ್ಲಿ ಅವರು ಚಂದ್ರನನ್ನು ಒಂದು ಸುತ್ತು ಹಾಕಿ ಬರಲಿದ್ದಾರೆ. ಜೊತೆಗೆ ಮಾನವವಾಸಕ್ಕೆ ಓರಿಯನ್‌ ಸೂಕ್ತವೇ ಎಂಬ ಪರೀಕ್ಷೆ ನಡೆಸಲಿದ್ದಾರೆ. ಜೊತೆಗೆ ದಿಕ್ಸೂಚಿ ಸೇರಿದಂತೆ ವಿವಿಧ ಯಂತ್ರೋಪಕರಣಗಳ ಪರೀಕ್ಷೆಯೂ ನಡೆಯುವುದು. ಈ ಯಾನಿಗಳು ಮರಳಿಬಂದ ಬಳಿಕ ಅವರ ಮೇಲಾಗಿರುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನು ತಿಳಿಯುವ ಪರೀಕ್ಷೆಯೂ ನಡೆಯಲಿದೆ.

ಏನೇನಾಗುತ್ತದೆ?:

ಉಡಾವಣೆಯಾದ ಮೊದಲೆರಡು ದಿನ ನೌಕೆಯು ಭೂಕಕ್ಷೆಯಲ್ಲೇ ಇರಲಿದ್ದು, ಆ ವೇಳೆ ಒಳಗಿರುವವರು ಅದರ ಸುರಕ್ಷತೆ, ಸಂಚರಣೆ, ಸಂವಹನ ಇತ್ಯಾದಿಗಳ ಕೂಲಂಕಷ ಟೆಸ್ಟ್‌ ನಡೆಸುತ್ತಾರೆ. ಬಳಿಕ ನೌಕೆಯು ಚಂದಿರನತ್ತ ಹೊರಟು, ಈವರೆಗೆ ಯಾರೂ ಹೋಗಿರದ ಎತ್ತರವನ್ನು ತಲುಪುತ್ತದೆ. ಅಲ್ಲಿಂದ ಶಶಾಂಕನ (ಚಂದ್ರ) ಮೇಲ್ಮೈ, ಅಲ್ಲಿಂದ ಸಂಗ್ರಹಿಸಿದ ವಸ್ತುಗಳ ಅಧ್ಯಯನ ಮಾಡಲಾಗುವುದು. ಮರಳುವ ಹಾದಿಯಲ್ಲೂ ಅನೇಕ ಪರೀಕ್ಷೆಗಳು ಜಾರಿಯಲ್ಲಿರುತ್ತವೆ.

ಕೊನೆಗಿದು ಗಂಟೆಗೆ 40,233 ಕಿ.ಮೀ. ವೇಗದಲ್ಲಿ ಬಂದು ಪೆಸಿಫಿಕ್‌ ಸಾಗರಕ್ಕಪ್ಪಳಿಸುತ್ತದೆ.

2022ರಲ್ಲಿ ಆರ್ಟಿಮಿಸ್‌-1ರ ಭಾಗವಾಗಿ ಇದೇ ನೌಕೆಯನ್ನು ಮಾನವರಹಿತವಾಗಿ ಚಂದ್ರನತ್ತ ಕಳಿಸಲಾಗಿತ್ತು. 2027ರಲ್ಲಿ ಬಾಹ್ಯಾಕಾಶ ಆರ್ಟಿಮಿಸ್‌-3ರಡಿ ಯಾನಿಗಳನ್ನು ಚಂದ್ರನ ಮೇಲಿಳಿಸಿ, ಮರುವರ್ಷದ 4ನೇ ಹಂತದ ಯೋಜನೆಯಲ್ಲಿ ಚಂದಿರನ ದಕ್ಷಿಣ ಧ್ರುವದಲ್ಲಿಳಿದು, ಲ್ಯಾಂಡರ್‌ ಜತೆ ಡಾಕ್‌ ಕೂಡ ಮಾಡಲಾಗುವುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೇಘಾಲಯ ಹನಿಮೂನ್ ಕೊಲೆ ಕೇಸ್: ಕಾಮಕ್ಯ ದೇಗುಲದ ಪುರೋಹಿತರ ಮಾತು ನಿಜವಾಯ್ತು: ರಾಜ ರಘುವಂಶಿ ಮನೆಗೆ ಹೊಸ ಸದಸ್ಯ
ಕಾಲ್ನಡಿಗೆ ಮೂಲಕ ತಿರುಮಲಕ್ಕೆ ಬರುವ ಭಕ್ತಾದಿಗಳಿಗೆ ಸಂತಸದ ಸುದ್ದಿ; ಇನ್ಮುಂದೆ ಇರಲ್ಲ ಜೀವ ಭಯ