ಆಯುಧಗಳನ್ನು ಮಣಿಪುರಕ್ಕೆ ಸಾಗಣೆ ಮಾಡುವ ಮೊದಲು ಚೀನಾ ಮತ್ತು ಮ್ಯಾನ್ಮಾರ್‌ನ ಗಡಿಯಲ್ಲಿರುವ ಕಾಳಸಂತೆಯಲ್ಲಿ ಖರೀದಿ ಮಾಡಲಾಗಿದೆ. ಬಳಿಕ ಮ್ಯಾನ್ಮಾರ್ ಮೂಲಕ ಮಣಿಪುರ ತಲುಪಿಸಲಾಗಿದೆ.
ನವದೆಹಲಿ (ಜೂನ್ 28, 2023): ಮಹತ್ವದ ಬೆಳವಣಿಗೆಯೊಂದರಲ್ಲಿ ಮಣಿಪುರದ ಹಿಂಸಾಚಾರದಲ್ಲಿ ಬಳಕೆಯಾದ ಶಸ್ತ್ರಾಸ್ತ್ರಗಳನ್ನು ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ. ಈ ಆಯುಧಗಳನ್ನು ಮ್ಯಾನ್ಮಾರ್‌ನಲ್ಲಿ ಸಕ್ರಿಯವಾಗಿರುವ ಬಂಡುಕೋರರ ಗುಂಪು 3 ವಾಹನಗಳ ಮೂಲಕ ಮಣಿಪುರಕ್ಕೆ ಸಾಗಣೆ ಮಾಡಿದೆ ಎಂದು ಅವು ಹೇಳಿವೆ. ಇದರೊಂದಿಗೆ ನೂರಾರು ಜನರನ್ನು ಬಲಿ ಪಡೆದ ಹಿಂಸಾಚಾರಕ್ಕೆ ವಿದೇಶಿ ಶಕ್ತಿಗಳು ಕುಮ್ಮಕ್ಕು ನೀಡುತ್ತಿರುವುದು ದೃಢಪಟ್ಟಿದೆ.
ಇವುಗಳನ್ನು ಮಣಿಪುರಕ್ಕೆ ಸಾಗಣೆ ಮಾಡುವ ಮೊದಲು ಚೀನಾ ಮತ್ತು ಮ್ಯಾನ್ಮಾರ್‌ನ ಗಡಿಯಲ್ಲಿರುವ ಕಾಳಸಂತೆಯಲ್ಲಿ ಖರೀದಿ ಮಾಡಲಾಗಿದೆ. ಬಳಿಕ ಇವುಗಳನ್ನು ಮ್ಯಾನ್ಮಾರ್ ಮೂಲಕ ತಂದು ಮಣಿಪುರ ತಲುಪಿಸಲಾಗಿದೆ. ಈ ಕುರಿತಂತೆ ಅಸ್ಸಾಂ ರೈಫಲ್ಸ್ ಪಡೆಗೆ ಎಚ್ಚರಿಕೆ ನೀಡಲಾಗಿದ್ದು, ಗಡಿ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ ಎಂದು ಅವು ಹೇಳಿವೆ.
ಇದನ್ನು ಓದಿ: ಸೇನೆಗೇ ಸಡ್ಡು ಹೊಡೆದು 12 ಉಗ್ರರ ಬಿಡಿಸಿದ ಸ್ತ್ರೀಯರು: ಯೋಧರಿಗೆ ದಿಗ್ಬಂಧನ; ಉಗ್ರರ ರಕ್ಷಣೆಗೆ ನಿಂತ ಸಾವಿರಾರು ಗ್ರಾಮಸ್ಥರು
ನಾಲ್ವರ ಬಂಧನ:
ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಇಂಫಾಲ್‌ನಲ್ಲಿ ನಾಲ್ವರನ್ನು ಮಂಗಳವಾರ ಬಂಧಿಸಲಾಗಿದೆ. ಇವರಿಂದ ಸುಮಾರು 2.5 ಲಕ್ಷ ರೂ. ನಗದು, ಮೊಬೈಲ್ ಫೋನ್‌ಗಳು ಮತ್ತು 2 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ಕಾರ್ಯಾಚರಣೆಗೆ ಮಹಿಳೆಯರ ಅಡ್ಡಿ: ಸೇನೆ
ಇಂಫಾಲ್: ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆ ಮಾಡಲು ಸಹಾಯ ಮಾಡುವುದಿದ್ದರೆ ನಮಗೆ ಸಹಾಯ ಮಾಡಿ ಎಂದು ಭಾರತೀಯ ಸೇನೆ ಉದ್ದೇಶಪೂರ್ವಕವಾಗಿ ರಸ್ತೆಗಳನ್ನು ಬಂದ್ ಮಾಡುತ್ತಿರುವ ಮಣಿಪುರದ ಮಹಿಳೆಯರಿಗೆ ಮನವಿ ಮಾಡಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಕೇಂದ್ರ ಸಚಿವರ ಮನೆಗೆ ಬೆಂಕಿ; 1200 ಜನರ ಗುಂಪಿನಿಂದ ದುಷ್ಕೃತ್ಯ
ಅನಾವಶ್ಯಕವಾಗಿ ಮಧ್ಯ ಪ್ರವೇಶ ಮಾಡುತ್ತಿರುವುದರಿಂದ ಸೇನಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಮಣಿಪುರದ ಮಹಿಳೆಯರು ಉದ್ದೇಶಪೂರ್ವಕವಾಗಿ ಸೇನಾಪಡೆಗಳ ಹಾದಿಯನ್ನು ಮುಚ್ಚುತ್ತಿದ್ದಾರೆ. ಸೇನಾ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದ್ದಾರೆ. ಇದರಿಂದಾಗಿ ಸಂಕಷ್ಟದ ಪರಿಸ್ಥಿತಿಗಳಲ್ಲಿ ಜನ ಮತ್ತು ಆಸ್ತಿಯನ್ನು ಕಾಪಾಡುವ ಸೇನೆಯ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಸೇನೆ ಹೇಳಿದೆ.
ಇತ್ತೀಚೆಗೆ ಮಹಿಳೆಯರ ಗುಂಪೊಂದು ದಾಳಿ ಮಾಡಿದ್ದ ಸೇನಾಪಡೆಗಳ ವಶದಲ್ಲಿದ್ದ 12 ಮಂದಿ ಉಗ್ರರನ್ನು ಬಿಡುಗಡೆ ಮಾಡಲು ಸಹಾಯ ಮಾಡಿತ್ತು.
ಇದನ್ನೂ ಓದಿ: ಮಣಿಪುರದಲ್ಲಿ ಅಮಿತ್ ಶಾ ಶಾಂತಿ ಮಂತ್ರ: ಮೀಟಿ, ಕುಕಿ ಸಮುದಾಯದ ನಾಯಕರ ಜತೆ ಶಾಂತಿ ಸಭೆ
ನಾಳೆ ನಾಡಿದ್ದು ರಾಹುಲ್ ಮಣಿಪುರಕ್ಕೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೂನ್ 29 - 30 ರಂದು ಎರಡು ದಿನಗಳ ಕಾಲ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಇಂಫಾಲ ಮತ್ತು ಚುರಚಂದಪುರದಲ್ಲಿರುವ ಪರಿಹಾರ ಕೇಂದ್ರಗಳಲ್ಲಿರುವ ಜನರು, ಮತ್ತು ಸಮಾಜದ ವಿವಿಧ ಜನರೊಂದಿಗೆ ರಾಹುಲ್ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ, ಕಳೆದ 52 ದಿನಗಳಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರಕ್ಕೆ ಭೇಟಿ ನೀಡುತ್ತಿರುವ ಮೊದಲ ಕಾಂಗ್ರೆಸ್ ನಾಯಕರಾಗಿದ್ದಾರೆ.
ಕೆಲಸ ಮಾಡದವರಿಗೆ ಸಂಬಳ ಇಲ್ಲ: ನೌಕರರಿಗೆ ಮಣಿಪುರ ಎಚ್ಚರಿಕೆ
ಇಂಫಾಲ್: ಕಳೆದ ಎರಡು ತಿಂಗಳಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಕಚೇರಿಗೆ ಕೆಲಸಕ್ಕೆ ಬಾರದ ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿರುವ ರಾಜ್ಯ ಸರ್ಕಾರ ‘ಕೆಲಸ ಇಲ್ಲದಿದ್ದರೆ ವೇತನ ಇಲ್ಲ’ ಎಂಬ ನಿಯಮ ಜಾರಿಗೆ ಮುಂದಾಗಿದೆ.
ಇದನ್ನೂ ಓದಿ: 4 ದಿನ ಮಣಿಪುರ ಪ್ರವಾಸದಲ್ಲಿ ಅಮಿತ್ ಶಾ: ಶಾಂತವಾಯ್ತು ಜನಾಂಗೀಯ ಸಂಘರ್ಷ
ರಾಜ್ಯದ ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ)ಯು ಈ ಬಗ್ಗೆ ಸೋಮವಾರ ರಾತ್ರಿ ಸುತ್ತೋಲೆ ಹೊರಡಿಸಿದ್ದು ‘ಜೂ.12 ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ ಕರ್ತವ್ಯಕ್ಕೆ ಹಾಜರಾಗದ ಯಾವುದೇ ನೌಕರರಿಗೆ ವೇತನ ನೀಡಲಾಗುವುದಿಲ್ಲ’ ಎಂದು ತಿಳಿಸಿದೆ. ಮಣಿಪುರದಲ್ಲಿ ಒಟ್ಟು 1 ಲಕ್ಷ ಸರ್ಕಾರಿ ಉದ್ಯೋಗಿಗಳಿದ್ದು ರಾಜ್ಯದಲ್ಲಿ ಸದ್ಯ ಪರಿಸ್ಥಿತಿಯಿಂದಾಗಿ ತಮ್ಮ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದ ಎಲ್ಲ ಉದ್ಯೋಗಿಗಳ ಸಂಪೂರ್ಣ ದಾಖಲೆ ಒದಗಿಸುವಂತೆ ಎಲ್ಲ ಆಡಳಿತ ಕಾರ್ಯದರ್ಶಿಗಳಿಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಹಾಗೂ ಜೂನ್ 28ರ ಒಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಇಲಾಖೆಗೆ ನಿರ್ದೇಶಿಸಿದೆ.
ಮೈತೇಯಿ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವ ನಿರ್ಧಾರದ ವಿರುದ್ಧ ಕುಕಿ ಸಮುದಾಯದ ಜನರು ತೀವ್ರ ಹಿಂಸಾಚಾರಕ್ಕೆ ಮುಂದಾದ ಬೆನ್ನಲ್ಲೇ ಇದೀಗ ಎರಡೂ ಸಮುದಾಯಗಳು ಪರಸ್ಪರ ಜನಾಂಗೀಯ ಹಿಂಸಾಚಾರ ನಡೆಸುತ್ತಿವೆ. ವಿವಿಧ ಘಟನೆಗಳಲ್ಲಿ ಈವರೆಗೆ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರು ಬಲಿ; ಸೇನೆಯಿಂದ 40 ಕ್ಕೂ ಹೆಚ್ಚು ಉಗ್ರರ ಹತ್ಯೆ!
ಮಣಿಪುರಕ್ಕೆ ಸಾಗಣೆ ಮಾಡಲು ಅಣಿ ಮಾಡಿಟ್ಟಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ
ಕೊಹಿಮಾ (ನಾಗಾಲ್ಯಾಂಡ್): ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದ ಭಾರೀ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ವಶಪಡಿಸಿಕೊಳ್ಳಲಾಗಿದೆ. ಅಸ್ಸಾಂ ರೈಫಲ್ಸ್ ಪಡೆ ಹಾಗೂ ಕೊಹಿಮಾ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 2 ಪಿಸ್ತೂಲು. 4 ಮ್ಯಾಗಜಿನ್‌ಗಳು, ಮದ್ದುಗುಂಡುಗಳು, ಸ್ಫೋಟಕಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ: ಸಚಿವೆಯ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು