ಹರ್ಯಾಣದ ಹಿಸಾರ್‌ನ ಖೇಡಿ ಚ್ವಾಪಾಟಾದಲ್ಲಿ ‘ದೆಹಲಿ ಚಲೋ’ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ಶುಕ್ರವಾರ ಸಂಘರ್ಷ ನಡೆದಿದೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಇನ್ನು ಮೃತ ರೈತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಖನೌರಿ/ಚಂಡೀಗಢ (ಫೆ.24): ಹರ್ಯಾಣದ ಹಿಸಾರ್‌ನ ಖೇಡಿ ಚ್ವಾಪಾಟಾದಲ್ಲಿ ‘ದೆಹಲಿ ಚಲೋ’ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ಶುಕ್ರವಾರ ಸಂಘರ್ಷ ನಡೆದಿದೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಹಿಸಾರ್- ನರ್ನಾಂಡ್ ರಸ್ತೆಯಲ್ಲಿರುವ ಖೇಡಿ ಚೋಪ್ಟಾ ಗ್ರಾಮದಿಂದ ರೈತರು ಖನೌರಿ ಗಡಿಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.
ಈ ವೇಳೆ ಭಾರೀ ಪ್ರಮಾಣದಲ್ಲಿ ನೆರೆದಿದ್ದ ರೈತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಆದರೂ ರೈತರನ್ನು ನಿಗ್ರಹಿಸಲಾದೆ ಆಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಆಗ ರೈತರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು.
ಲೋಕಸಭಾ ಚುನಾವಣೆಗೆ 4 ರಾಜ್ಯಗಳಲ್ಲಿ ಹೊಂದಾಣಿಕೆ ಸೀಟು ಅಂತಿಮಗೊಳಿಸಿದ ಕಾಂಗ್ರೆಸ್
ಪಂಜಾಬ್ ಗಡಿಯಲ್ಲಿ ಮತ್ತೊಬ್ಬ ರೈತ ಸಾವು: ಸಂಖ್ಯೆ 4ಕ್ಕೆ ಏರಿಕೆ
ರೈತರು ಪ್ರತಿಭಟನೆ ಮಾಡುತ್ತಿರುವ ಪಂಜಾಬ್‌ನ ಖನೌರಿ ಗಡಿಯಲ್ಲಿ ಶುಕ್ರವಾರ ಮತ್ತೊಬ್ಬ ರೈತ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ರೈತ ನಾಯಕ ಸರವಣ್ ಸಿಂಗ್ ತಿಳಿಸಿದ್ದಾರೆ. ಇದರೊಂದಿಗೆ ಕಳೆದ 10 ದಿನಗಳಲ್ಲಿ ಪ್ರತಿಭಟನಾನಿರತ ರೈತರ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಿಂಗ್, ‘ಬಠಿಂಡಾ ಜಿಲ್ಲೆಯ ಅಮರಗಢದ ರೈತ ದರ್ಶನ್ ಸಿಂಗ್ ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪುವ ಮೂಲಕ ಹುತಾತ್ಮರಾಗಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡುವ ಜೊತೆಗೆ ಸೂಕ್ತ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸುತ್ತೇವೆ’ ಎಂದಿದ್ದಾರೆ. ಇತ್ತೀಚೆಗೆ 3 ರೈತರು ಅಸ್ವಸ್ಥರಾಗಿ ಸಾವನ್ನಪ್ಪಿದ್ದರೆ, ಹಿಂಸಾಚಾರದಲ್ಲಿ ಒಬ್ಬ ರೈತ ಮೊನ್ನೆ ಬಲಿಯಾಗಿದ್ದ.
ಪಶ್ಚಿಮ ಬಂಗಾಳ: ವೇಶ್ಯಾವಾಟಿಕೆ ಕೇಸಲ್ಲಿ ಬಿಜೆಪಿ ನಾಯಕ ಬಂಧನ, ಅಮಾಯಕರ ಮೇಲೆ ಟಿಎಂಸಿ ನಾಯಕರ ಅತ್ಯಾಚಾರ!
ರೈತರ ಮೇಲೆ ಎನ್‌ಎಸ್‌ಎ ಕೇಸು ತೀರ್ಮಾನ ಕೈಬಿಟ್ಟ ಹರ್ಯಾಣ ಸರ್ಕಾರ:
ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಕಠಿಣ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ (ಎನ್‌ಎಸ್‌ಎ) ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದ ಆದೇಶವನ್ನು ಒಂದೇ ದಿನದಲ್ಲಿ ಹರ್‍ಯಾಣ ಪೊಲೀಸರು ರದ್ದು ಮಾಡಿದ್ದಾರೆ.
ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ ಅಂಬಾಲಾ ಐಜಿಪಿ ಸಿಬಶ್ ಕಬಿರಾಜ್, ‘ಸಾಮಾಜಿಕ ಕ್ಷೋಭೆ ಉಂಟು ಮಾಡಿದ ಕೆಲವು ರೈತ ನಾಯಕರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರ್ದೇಶಿಸಿದ್ದ ಕ್ರಮವನ್ನು ಮರುಪರಿಶೀಲನೆ ಮಾಡಿ ಹಿಂಪಡೆಯಲಾಗಿದೆ. ಇನ್ನು ಮುಂದೆ ರೈತರು ಪ್ರತಿಭಟನೆಯ ಶಾಂತಿ ಸೌಹಾರ್ದತೆ ಕಾಪಾಡುವಂತೆ ವಿನಂತಿಸುತ್ತೇವೆ’ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಎನ್ಎಸ್‌ಎ ಕೇಸನ್ನು ಸಮಾಜಘಾತಕರು, ಉಗ್ರರ ಮೇಲೆ ದಾಖಲಿಸಲಾಗುತ್ತದೆ.
ರೈತನಿಗೆ 1 ಕೋಟಿ ರು. ಪರಿಹಾರ:
ಈ ನಡುವೆ ಪಂಜಾಬ್ ಗಡಿಯಲ್ಲಿ ಗಲಭೆಯ ವೇಳೆ ಮೃತಪಟ್ಟ ರೈತ ಶುಭ್‌ಕರಣ್ ಸಿಂಗ್ ಕುಟುಂಬಕ್ಕೆ ಪಂಜಾಬ್‌ನ ಆಪ್ ಸರ್ಕಾರ 1 ಕೋಟಿ ರು. ಪರಿಹಾರ ಘೋಷಿಸಿ ಆತನ ಸೋದರಿಗೆ ಸರ್ಕಾರಿ ಉದ್ಯೋಗ ನೀಡಿದೆ.
ದಿಲ್ಲಿಗೆ ಬಿಡದಿದ್ದರೆ ಪ್ರಚಾರಕ್ಕೆ ಹಳ್ಳಿಗೆ ಬರಲೂ ರಾಜಕಾರಣಿಗಳನ್ನು ಬಿಡಲ್ಲ:
ರೈತರು ದೆಹಲಿಗೆ ಹೋಗಲು ಸರ್ಕಾರ ಬಿಡದಿದ್ದರೆ ಚುನಾವಣೆ ಪ್ರಚಾರದ ವೇಳೆ ಹಳ್ಳಿಗಳನ್ನು ಪ್ರವೇಶಿಸಲು ರೈತರೂ ಅವರಿಗೆ ಅನುಮತಿ ನೀಡುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಎಚ್ಚರಿಸಿದ್ದಾರೆ.
‘ದೆಹಲಿ ಚಲೋ’ ಪ್ರತಿಭಟನೆಯ ಭಾಗವಾಗಿ ದೆಹಲಿಗೆ ಹೋಗಲು ಯತ್ನಿಸಿದ ಪಂಜಾಬ್ ಮತ್ತು ಹರ್ಯಾಣ ರೈತರನ್ನು ದೆಹಲಿ ಪ್ರವೇಶಿಸದಂತೆ ನಿರ್ಬಂಧಿಸಿರುವುಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಕೇಶ್ ‘ರಸ್ತೆಗೆ ಮೊಳೆ ಹೊಡೆದು ವಾಹನ ಸಂಚಾರ ತಡೆಯುವುದು ನ್ಯಾಯಸಮ್ಮತವಲ್ಲ. ನಮ್ಮ ದಾರಿಯಲ್ಲಿ ಅವರು ಮೊಳೆ ಹೊಡೆದರೆ ನಾವೂ ನಮ್ಮ ಹಳ್ಳಿಗಳಲ್ಲಿ ಅದನ್ನೇ ಮಾಡುತ್ತೇವೆ. ನಾವೂ ನಮ್ಮ ಗ್ರಾಮಗಳಲ್ಲಿ ಬ್ಯಾರಿಕೇಡ್ ಹಾಕುತ್ತೇವೆ’ ಎಂದು ಎಚ್ಚರಿಸಿದರು. ಇದೇ ವೇಳೆ ರೈತರ ಹೋರಾಟದ ಮುಂದಿನ ಯೋಜನೆಗಳ ಕುರಿತು ಕಿಸಾನ್ ಯೂನಿಯನ್ ಗುರುವಾರ ಸಭೆ ನಡೆಸಲಿದೆ ಎಂದು ತಿಳಿಸಿದರು.