ಪಶ್ಚಿಮ ಬಂಗಾಳ: ವೇಶ್ಯಾವಾಟಿಕೆ ಕೇಸಲ್ಲಿ ಬಿಜೆಪಿ ನಾಯಕ ಬಂಧನ, ಅಮಾಯಕರ ಮೇಲೆ ಟಿಎಂಸಿ ನಾಯಕರ ಅತ್ಯಾಚಾರ!

By Kannadaprabha News  |  First Published Feb 24, 2024, 8:40 AM IST

ಸಂದೇಶ್‌ಖಾಲಿಯಲ್ಲಿ ಅಮಾಯಕ ಮಹಿಳೆಯರ ಮೇಲೆ ಟಿಎಂಸಿ ಕಾರ್ಯಕರ್ತರು ಅತ್ಯಚಾರ ಎಸಗಿದ್ದಾರೆ ಎಂಬ ವಿವಾದ ಭುಗಿಲೆದ್ದಿರುವ ನಡುವೆಯೇ ಹೌರಾ ನಗರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇರೆಗೆ ಬಿಜೆಪಿ ನಾಯಕ ಸಬ್ಯಸಾಚಿ ಘೋಷ್‌   ಬಂಧನವಾಗಿದೆ.


ಕೋಲ್ಕತಾ (ಫೆ.24): ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಅಮಾಯಕ ಮಹಿಳೆಯರ ಮೇಲೆ ಟಿಎಂಸಿ ಕಾರ್ಯಕರ್ತರು ಅತ್ಯಚಾರ ಎಸಗಿದ್ದಾರೆ ಎಂಬ ವಿವಾದ ಭುಗಿಲೆದ್ದಿರುವ ನಡುವೆಯೇ ಹೌರಾ ನಗರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇರೆಗೆ ಶುಕ್ರವಾರ ಪೊಲೀಸರು ಬಿಜೆಪಿ ನಾಯಕ ಸಬ್ಯಸಾಚಿ ಘೋಷ್‌ ಅವರನ್ನು ಬಂಧಿಸಿದ್ದಾರೆ.

ಸಂದೇಶ್‌ಖಾಲಿ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ಬಿಜೆಪಿಗರು ಮುಗಿಬಿದ್ದಿರುವ ನಡುವೆಯೇ, ಸಬ್ಯಸಾಚಿ ಬಂಧನ ಬಿಜೆಪಿಗೆ ತೀವ್ರ ಮುಜಗರ ಉಂಟು ಮಾಡಿದ್ದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

Tap to resize

Latest Videos

‘ರಾಜ್ಯದಲ್ಲಿ ಬಂಗಾಳ ಪೊಲೀಸರು ಹೌರಾದ ಸಂಕ್ರೈಲ್‌ನಲ್ಲಿ ಸಬ್ಯಸಾಚಿ ನಡೆಸುತ್ತಿದ್ದ ಹೋಟೆಲ್‌ ಮೇಲೆ ದಾಳಿ ಮಾಡಿ ಘೋಷ್‌ ಸೇರಿ 11 ಮಂದಿಯನ್ನು ಬಂಧಿಸಿ 6 ಸಂತ್ರಸ್ತರನ್ನು ರಕ್ಷಿಸಿದ್ದಾರೆ. ಇದೇ ಬಿಜೆಪಿ. ಅವರು ಹೆಣ್ಣು ಮಕ್ಕಳನ್ನು ರಕ್ಷಿಸುವುದಿಲ್ಲ. ವೇಶ್ಯವಾಟಿಕೆ ದಂಧೆಕೋರರನ್ನು ರಕ್ಷಿಸುತ್ತದೆ’ ಎಂದು ಟಿಎಂಸಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಸಂದೇಶ್‌ಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್‌ ಶಾಜಹಾನ್‌ ತಲೆಮರೆಸಿಕೊಂಡಿದ್ದಾರೆ. ಬಂಗಾಳದಲ್ಲಿ ಪಡಿತರ ಹಗರಣ ನಡೆಸಿರುವ ಆರೋಪ ಹೊತ್ತು ಪರಾರಿ ಆಗಿರುವ ಟಿಎಂಸಿ ನಾಯಕ ಶೇಖ್‌ ಶಹಜಹಾನ್‌ ಹಾಗೂ ರಾಜ್ಯದ ಸಂದೇಶ್‌ಖಾಲಿಯಲ್ಲಿ ಶಹಜಹಾನ್‌ ಬೆಂಬಲಿಗ ಟಿಎಂಸಿ ಕಾರ್ಯಕರ್ತರಿಂದ ಮಹಿಳೆಯರ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರದ ಬಗ್ಗೆ ಕಲ್ಕತ್ತಾ ಹೈಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತಲೆಮರೆಸಿಕೊಂಡಿರುವ ಶಹಜಹಾನ್‌ಗೆ ತನ್ನ ಮುಂದೆ ಶರಣಾಗುವಂತೆ ಕೋರ್ಟ್‌ ಆದೇಶಿಸಿದೆ.

ಏನಿದು ಪ್ರಕರಣ?: ಪ.ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಕಳೆದ ತಿಂಗಳು ಇ.ಡಿ. ಅಧಿಕಾರಿಗಳು ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಶಹಜಹಾನ್ ಆಸ್ತಿಗಳ ಮೇಲೆ ದಾಳಿ ಮಾಡಿದ್ದರು. ಆಗ ಶಹಜಹಾನ್‌ ಪರಾರಿ ಆಗಿದ್ದ. ಈ ವೇಳೆ ಟಿಎಂಸಿ ಕಾರ್ಯಕರ್ತರಿಂದ ಗಲಭೆ ನಡೆದಿತ್ತು. ಇದೇ ವೇಳೆ, ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಕೆಲವು ಶಹಜಹಾನ್‌ ಬೆಂಬಲಿಗ ಟಿಎಂಸಿ ಕಾರ್ಯಕರ್ತರು ಸುಂದರ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಇತ್ತೀಚೆಗೆ 17 ಶಹಜಹಾನ್‌ ಬೆಂಬಲಿಗರನ್ನು ಬಂಧಿಸಲಾಗಿದೆ.

click me!